ಬೆಂಗಳೂರು: ವಿವಿಧ ಅಕಾಡೆಮಿಗಳಲ್ಲಿ ಅರ್ಹರಿಗೆ ಅಧ್ಯಕ್ಷ, ಸದಸ್ಯ ಸ್ಥಾನ ನೀಡಿಲ್ಲ ಎಂಬ ಟೀಕೆಯ ಬೆನ್ನಲ್ಲೇ ತುಳು ಸಾಹಿತ್ಯ ಅಕಾಡೆಮಿಯ ಇಬ್ಬರು, ಬ್ಯಾರಿ ಸಾಹಿತ್ಯ ಅಕಾಡೆಮಿಯ ಒಬ್ಬ ಸದಸ್ಯ ರಾಜೀನಾಮೆ ನೀಡಿದ್ದಾರೆ.
ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ.ವೈ.ಎನ್.ಶೆಟ್ಟಿ, ಡಾ. ಸಾಯಿಗೀತಾ ಹೆಗ್ಡೆ ಅವರು ಅಧ್ಯಕ್ಷರ ಆಯ್ಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ರಾಜೀನಾಮೆ ಸಲ್ಲಿಸಿದ್ದಾರೆ. ಸಾಹಿತ್ಯ ಅಕಾಡೆಮಿಯಲ್ಲೂ ಇಂತಹುದೇ ಮಾತು ಕೇಳಿಬರುತ್ತಿದೆ. ಒಂದಿಬ್ಬರು ಸದಸ್ಯರು ರಾಜೀನಾಮೆಯ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಬ್ಯಾರಿ ಅಕಾಡೆಮಿಯಲ್ಲಿ 11 ಸದಸ್ಯರು ಇರಬೇಕಿದ್ದು, 7 ಮಂದಿಯನ್ನು ನೇಮಕ ಮಾಡಲಾಗಿದೆ. ಇವರಲ್ಲಿ ನಾಲ್ವರಿಗೆ ಬ್ಯಾರಿ ಭಾಷೆ ಬರುವುದಿಲ್ಲ. ಅಂದ ಮೇಲೆ ಅವರನ್ನು ನೇಮಕ ಮಾಡಿದ್ದು ಏಕೆ ಎಂಬ ಪ್ರಶ್ನೆಯೂ ಕೇಳಿ ಬಂದಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಕೆಲವರು ಸದಸ್ಯರಾಗಲು ಆಸಕ್ತಿ ತೋರುತ್ತಿಲ್ಲ. ಇನ್ನೂ ಇಬ್ಬರು ಸದಸ್ಯರು ರಾಜೀನಾಮೆ ನೀಡಬಹುದು ಎಂದೂ ಮೂಲಗಳು ಹೇಳಿವೆ.
‘ಹಿಂದಿನ ಅವಧಿಯಲ್ಲಿ ತುಳು ಸಾಹಿತ್ಯ ಅಕಾಡೆಮಿ ಸದಸ್ಯನಾಗಿ ಕಾರ್ಯನಿರ್ವಹಿಸಿದ್ದೇನೆ. ಮತ್ತೊಂದು ಅವಧಿಗೆ ಸದಸ್ಯನಾಗಿರುವುದು ಸರಿಯಲ್ಲ. ಅರ್ಹತೆ, ಹಿರಿತನದ ಆಧಾರದಲ್ಲಿ ಅಧ್ಯಕ್ಷ ಸ್ಥಾನ ನೀಡಿದ್ದರೆ ಸ್ವೀಕರಿಸುತ್ತಿದ್ದೆ’ ಎಂದು ಸದಸ್ಯತ್ವಕ್ಕೆ ರಾಜೀನಾಮೆ ನೀಡಿ
ರುವಡಾ.ವೈ.ಎನ್.ಶೆಟ್ಟಿ ಹೇಳಿದರು.
ಬ್ಯಾರಿ ಅಕಾಡೆಮಿಗೆ ರಾಜೀನಾಮೆ: ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯತ್ವಕ್ಕೆ ಮುನೀರ್ ಬಾವ ರಾಜೀನಾಮೆ ನೀಡಿದ್ದಾರೆ.
‘ಬ್ಯಾರಿ ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡಿಲ್ಲ. ನನ್ನ ಕಾರ್ಯಕ್ಷೇತ್ರವೇ ಬೇರೆ. ಈ ಕ್ಷೇತ್ರದಲ್ಲಿ ಕೆಲಸ ಮಾಡಿದ
ವರಿಗೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿ, ಅಧ್ಯಕ್ಷರಿಗೆ ರಾಜೀನಾಮೆ ಕಳುಹಿಸಿ ಕೊಟ್ಟಿದ್ದೇನೆ’ ಎಂದುಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿರುವ ಮುನೀರ್ ಬಾವತಿಳಿಸಿದರು.
‘ಸದಸ್ಯತ್ವಕ್ಕೆ ಒಬ್ಬರು ರಾಜೀನಾಮೆ ನೀಡುವುದಾಗಿ ಸಂದೇಶ ಕಳಹಿಸಿದ್ದು, ಇನ್ನಿಬ್ಬರು ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಉಳಿದಂತೆ ನಾಲ್ವರು ಸದಸ್ಯರು ನನ್ನನ್ನು ಭೇಟಿಯಾಗಿ ಅಭಿಪ್ರಾಯ ತಿಳಿಸುವುದಾಗಿ ಹೇಳಿದ್ದಾರೆ’ ಎಂದು ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ ಪ್ರತಿಕ್ರಿಯಿಸಿದರು.
‘ಬಲಪಂಥೀಯರಿಗೆ ಮಣೆ’
ಈ ಬಾರಿ ವಿವಿಧ ಅಕಾಡೆಮಿಗಳ ಆಯ್ಕೆಗೆ ಸಂಘ ಪರಿವಾರವೂ ಸರ್ಕಾರಕ್ಕೆ ಪಟ್ಟಿ ಕಳುಹಿಸಿತ್ತು. ಹೀಗೆ ಕಳುಹಿಸಿದ ಪಟ್ಟಿಯಲ್ಲಿ ಒಂದೆರಡು ಬದಲಾವಣೆ, ಸೇರ್ಪಡೆ ಬಿಟ್ಟು ಉಳಿದೆಲ್ಲ ಹೆಸರುಗಳಿಗೆ ಸರ್ಕಾರ ಅನುಮೋದನೆ ನೀಡಿದೆ ಎನ್ನಲಾಗಿದೆ. ‘ನೇಮಕಾತಿಯಲ್ಲಿ ವಿದ್ವಾಂಸರೂ ಇದ್ದಾರೆ, ಅರ್ಹತೆ ಇಲ್ಲದವರೂ ಇದ್ದಾರೆ. ಬಹುತೇಕ ಬಲಪಂಥೀಯ ಒಲವುಳ್ಳವರನ್ನೇ ಆಯ್ಕೆ ಮಾಡಲಾಗಿದೆ. ಆದರೆ, ಕಾಂಗ್ರೆಸ್ ಸರ್ಕಾರ ಇದ್ದಾಗ ರಾಜಕೀಯವಾಗಿ ಎಡಪಂಥೀಯ, ಕಾಂಗ್ರೆಸ್ ಒಲವುಳ್ಳ ವ್ಯಕ್ತಿಗಳನ್ನೇ ಆಯ್ಕೆ ಮಾಡಲಾಗುತ್ತಿತ್ತು’ ಎಂದು ಸದಸ್ಯರೊಬ್ಬರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.