ADVERTISEMENT

ಅಪಘಾತದಲ್ಲಿ ಇಬ್ಬರ ಸಾವು: ಪೊಲೀಸರಿಂದ ಸಚಿವನ ಮಗನ ರಕ್ಷಣೆ?

ಕಾರು ಚಲಾಯಿಸುತ್ತಿದ್ದದ್ದು ಸಚಿವ ಆರ್‌. ಅಶೋಕ ಅವರ ಪುತ್ರ ಎಂಬ ಆರೋಪ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2020, 6:26 IST
Last Updated 13 ಫೆಬ್ರುವರಿ 2020, 6:26 IST
ರವಿ ನಾಯ್ಕ ಎಂಬ ರಸ್ತೆ ಬದಿ ನಿಂತಿದ್ದ ಯುವಕನಿಗೆ ಡಿಕ್ಕಿ ಹೊಡೆದು ಎಳೆದೊಯ್ದ ಕಾರು ಸಂಪೂರ್ಣ ನುಜ್ಜುಗುಜ್ಜಾಗಿರುವುದು
ರವಿ ನಾಯ್ಕ ಎಂಬ ರಸ್ತೆ ಬದಿ ನಿಂತಿದ್ದ ಯುವಕನಿಗೆ ಡಿಕ್ಕಿ ಹೊಡೆದು ಎಳೆದೊಯ್ದ ಕಾರು ಸಂಪೂರ್ಣ ನುಜ್ಜುಗುಜ್ಜಾಗಿರುವುದು   

ಹೊಸಪೇಟೆ:ಸಚಿವರೊಬ್ಬರ ಪುತ್ರ ಅತೀವೇಗ ಹಾಗೂ ಅಜಾಗರೂಕತೆಯಿಂದ ಕಾರು ಓಡಿಸಿದ್ದೇ ತಾಲ್ಲೂಕಿನ ಮರಿಯಮ್ಮನಹಳ್ಳಿ ಸಮೀಪ ಸೋಮವಾರ (ಫೆ.10) ಇಬ್ಬರ ಸಾವಿಗೆ ಕಾರಣ ಎನ್ನಲಾಗಿದ್ದು, ಆತನನ್ನು ರಕ್ಷಿಸಲು ಪೊಲೀಸರು ಯತ್ನಿಸುತ್ತಿದ್ದಾರೆಯೇ ಎಂಬ ಅನುಮಾನ ಮೂಡಿದೆ.

ಹೆಸರು ಹೇಳಲಿಚ್ಛಿಸದ ಪೊಲೀಸ್‌ ಅಧಿಕಾರಿ ಪ್ರಕಾರ, ‘ಕಂದಾಯ ಸಚಿವ ಆರ್‌. ಅಶೋಕ್‌ ಅವರ ಮಗ ಶರತ್‌ ಕಾರು ಓಡಿಸಿ, ಇಬ್ಬರ ಸಾವಿಗೆ ಕಾರಣರಾಗಿದ್ದಾರೆ. ವಿಷಯ ಗೊತ್ತಾಗುತ್ತಿದ್ದಂತೆ ಅವರನ್ನು ಸ್ಥಳದಿಂದ ಬೇರೊಂದು ಕಾರಿನಲ್ಲಿ ತಕ್ಷಣವೇ ಕಳುಹಿಸಿಕೊಡಲಾಗಿದೆ. ಅಷ್ಟೇ ಅಲ್ಲ, ಎಫ್‌.ಐ.ಆರ್‌.ನಲ್ಲಿ ಅವರು ಹೆಸರು ಸೇರದಂತೆ ಪೊಲೀಸ್‌ ಅಧಿಕಾರಿಗಳು ವ್ಯವಸ್ಥಿತವಾಗಿ ಕೆಲಸ ಮಾಡಿದ್ದಾರೆ’ ಎಂದು ತಿಳಿಸಿದ್ದಾರೆ.

‘ಘಟನೆ ನಡೆದ ಸ್ಥಳದಲ್ಲಿ ಸಚಿವರ ಮಗ ಇದ್ದರು. ನಂತರ ಬೇರೊಂದು ಕಾರಿನಲ್ಲಿ ಅಲ್ಲಿಂದ ನಿರ್ಗಮಿಸಿದರು’ ಎಂದುಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

ADVERTISEMENT

‘ಚಾಲಕ ಸೇರಿದಂತೆ ಒಟ್ಟು ಐವರು ಯುವಕರು ಕಾರಿನಲ್ಲಿದ್ದರು. ಅವರೆಲ್ಲರೂ ಬೆಂಗಳೂರಿನವರು ಎಂದು ಗೊತ್ತಾಗಿದೆ. ಆದರೆ, ಸಚಿವ ಅಶೋಕ್‌ ಅವರ ಮಗನೇ ಕಾರು ಓಡಿಸುತ್ತಿದ್ದರೆ ಎಂಬುದು ಖಚಿತವಾಗಿಲ್ಲ. ತನಿಖೆ ನಡೆಯುತ್ತಿದೆ. ಯಾರೇ ತಪ್ಪು ಮಾಡಿದ್ದರೂ ಮುಲಾಜಿಲ್ಲದೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಸಿಪಿಐ ಎಚ್‌. ಶೇಖರಪ್ಪ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಘಟನೆ ವಿವರ: ಸೋಮವಾರ ಮಧ್ಯಾಹ್ನ 3ಕ್ಕೆ ಐವರು ಯುವಕರು ತಾಲ್ಲೂಕಿನ ಹಂಪಿ ನೋಡಿಕೊಂಡು ಬೆಂಗಳೂರಿಗೆ (ಕಾರಿನ ಸಂಖ್ಯೆ ಕೆ.ಎ. 05 ಎಂಡಬ್ಲ್ಯೂ 0357) ವಾಪಸಾಗುತ್ತಿದ್ದರು. ಮರಿಯಮ್ಮನಹಳ್ಳಿ ಸಮೀಪ ದುರ್ಗಾ ಪೆಟ್ರೋಲ್‌ ಬಂಕ್‌ ಬಳಿ ರಾಷ್ಟ್ರೀಯ ಹೆದ್ದಾರಿ 50ರ ಸೇತುವೆ ಮೇಲಿನಿಂದ ವೇಗವಾಗಿ ಬಂದ ಕಾರು, ರಸ್ತೆ ಬದಿಯ ಚಹಾದಂಗಡಿ ಬಳಿ ನಿಂತಿದ್ದ ಮರಿಯಮ್ಮನಹಳ್ಳಿ ತಾಂಡಾದ ರವಿ ನಾಯ್ಕ (18) ಅವರಿಗೆ ಡಿಕ್ಕಿ ಹೊಡೆದಿದೆ. ಸುಮಾರು 100 ಮೀಟರ್‌ ದೂರ ಅವರನ್ನು ಕಾರು ಎಳೆದೊಯ್ದಿದೆ. ರವಿ ಹಾಗೂ ಕಾರಿನಲ್ಲಿದ್ದ ಸಚಿನ್‌ (27) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ.

ಪೊಲೀಸರು ದಾಖಲಿಸಿಕೊಂಡಿರುವ ಎಫ್‌.ಐ.ಆರ್‌. ಪ್ರಕಾರ, ರಾಹುಲ್‌ ಕಾರು ಓಡಿಸುತ್ತಿದ್ದರು. ರಾಕೇಶ್‌, ಶಿವಕುಮಾರ ಹಾಗೂ ವರುಣ್‌ ಕಾರಿನಲ್ಲಿದ್ದ ಇತರೆ ಯುವಕರು. ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ವಾಸ್ತವದಲ್ಲಿ ಸಚಿವರ ಮಗನೇ ಕಾರು ಓಡಿಸುತ್ತಿದ್ದರು. ಅವರನ್ನು ರಕ್ಷಿಸುವುದಕ್ಕಾಗಿಯೇ ಪೊಲೀಸರು ಬೇರೊಬ್ಬ ಯುವಕನ ಹೆಸರು ಸೇರಿಸಿದ್ದಾರೆ ಎನ್ನಲಾಗಿದೆ.

ಶಾಲೆಯ ಹೆಸರಲ್ಲಿ ಕಾರು: ಕೆ.ಎ. 05 ಎಂಡಬ್ಲ್ಯೂ 0357 ಕಾರು ಬೆಂಗಳೂರಿನ ಕೆಂಗೇರಿಯಲ್ಲಿರುವ ನ್ಯಾಶನಲ್‌ ಪಬ್ಲಿಕ್‌ ಶಾಲೆಯ ಹೆಸರಿನಲ್ಲಿದೆ ಎಂದು ಗೊತ್ತಾಗಿದೆ. ಅದನ್ನು ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿ ದೃಢಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.