ಬೆಂಗಳೂರು: ರಾಷ್ಟ್ರೀಯ, ರಾಜ್ಯ ಹೆದ್ದಾರಿ ಹಾಗೂ ಜಿಲ್ಲೆ–ನಗರ ವ್ಯಾಪ್ತಿಯ ರಸ್ತೆಗಳಲ್ಲಿ ಹೆಚ್ಚುತ್ತಿರುವ ಅಪಘಾತಗಳಿಂದ ಸಂಭವಿಸುತ್ತಿರುವ ಸಾವಿಗೆ ಅತಿವೇಗವೇ ಶೇ 90ರಷ್ಟು ಕಾರಣ ಎಂದು ಸಮೀಕ್ಷೆಯೊಂದು ಹೇಳಿದೆ.
ಅಪಘಾತಕ್ಕೆ ಒಳಗಾದ ಶೇ 75ರಷ್ಟು ಕುಟುಂಬಗಳು ಸಂಕಷ್ಟಕ್ಕೆ ತುತ್ತಾಗಿವೆ. ಅಲ್ಲದೇ ಆದಾಯ ನಷ್ಟ ಅನುಭವಿಸಿ ಬಡತನಕ್ಕೆ ಕಾರಣವಾಗುತ್ತಿದೆ ಎಂದು ವಿವಿಧ ಇಲಾಖೆಗಳ ಮೂಲಕ ರಾಜ್ಯ ಸರ್ಕಾರ ನಡೆಸಿದ್ದ ಸಮೀಕ್ಷೆಯ ವರದಿ ತಿಳಿಸಿದೆ.
ಅಪಘಾತಕ್ಕೆ ಅತಿವೇಗದ ಚಾಲನೆಯ ಜತೆಗೆ ಮದ್ಯ ಕುಡಿತ, ವಾಹನ ಹಿಂದಿಕ್ಕಲು ಸ್ಪರ್ಧೆ, ಕಣ್ಣು ಕುಕ್ಕುವ ಎಲ್‌ಇಡಿ ದೀಪಗಳ ಅಳವಡಿಕೆ, ಅವೈಜ್ಞಾನಿಕ ರಸ್ತೆ ನಿರ್ಮಾಣ ಹಾಗೂ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳು
ಕಾರಣವಾಗುತ್ತಿವೆ.
ವೇಗದ ಸಂಚಾರಕ್ಕೆ ಕಡಿವಾಣ ಹಾಕಲು ರಾಜ್ಯ ಪೊಲೀಸರು ಮುಂದಾಗಿದ್ದು, ಆಗಸ್ಟ್ 1ರಿಂದ 130 ಕಿ.ಮೀ ಗಿಂತ ಹೆಚ್ಚಿನ ವೇಗದಲ್ಲಿ ಸಂಚರಿಸುವ ವಾಹನಗಳ ಚಾಲಕರ ವಿರುದ್ಧ ಎಫ್‌ಐಆರ್ ದಾಖಲಿಸುವ ಪ್ರಕ್ರಿಯೆ ಆರಂಭಿಸಿದ್ದಾರೆ.
ಕೆಲವೊಮ್ಮೆ ವಾಹನ ಸವಾರರು ಮಾಡುವ ತಪ್ಪಿನಿಂದ ಹಲವು ಮಂದಿ ಪ್ರಾಣ ಕಳೆದುಕೊಂಡಿರುವ ಉದಾಹರಣೆ ಇದೆ. ಹಾವೇರಿ ಜಿಲ್ಲೆಯ ಗುಂಡೇನಹಳ್ಳಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಜೂನ್‌ನಲ್ಲಿ ಭೀಕರ ಅಪಘಾತ ಸಂಭವಿಸಿತ್ತು. ಹೆದ್ದಾರಿಯ ಬದಿಯಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಟೆಂಪೊ ಟ್ರಾವೆಲರ್
ಡಿಕ್ಕಿಯಾದ ಪರಿಣಾಮ ದೇವಸ್ಥಾನದಿಂದ ವಾಪಸು ಬರುತ್ತಿದ್ದ 13 ಮಂದಿ ಮೃತಪಟ್ಟಿದ್ದರು. ಹೀಗೆ ಹೆದ್ದಾರಿಗಳು ಪ್ರಯಾಣಿಕರಿಗೆ ಮೃತ್ಯುಕೂಪಗಳಾಗುತ್ತಿವೆ ಎಂದು ಅಧಿಕಾರಿಯೊಬ್ಬರು ಹೇಳಿದರು.
ರಾಜ್ಯದಲ್ಲಿ 14 ರಾಷ್ಟ್ರೀಯ ಹೆದ್ದಾರಿ, 114 ರಾಜ್ಯ ಹೆದ್ದಾರಿಗಳು ಹಾದು ಹೋಗಿವೆ. ಒಂದು ವರ್ಷದಲ್ಲಿ ನಡೆದ ಅಪಘಾತಗಳ ಪೈಕಿ ಶೇ 33ರಷ್ಟು ಅಪಘಾತಗಳು ಹಾಗೂ ಶೇ 35ರಷ್ಟು ಸಾವು 7,652 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿವೆ. 27,880 ಕಿ.ಮೀ ರಾಜ್ಯ ಹೆದ್ದಾರಿಯಲ್ಲಿ ಶೇ 25ರಷ್ಟು ಅಪಘಾತ ಹಾಗೂ ಶೇ 28ರಷ್ಟು ಸಾವು ಸಂಭವಿಸಿವೆ ಎಂದು ವರದಿಯಾಗಿದೆ.
ಬೆಂಗಳೂರಿನಲ್ಲಿ ಅಪಘಾತದಿಂದ ಅತಿಹೆಚ್ಚಿನ ಸಾವು–ನೋವುಗಳು ಸಂಭವಿಸಿವೆ. ಬೆಳಗಾವಿ, ತುಮಕೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ಹಾಸನ, ಚಿತ್ರದುರ್ಗ, ಮೈಸೂರು, ವಿಜಯನಗರ, ರಾಮನಗರ ಜಿಲ್ಲೆಗಳು ನಂತರದ ಸ್ಥಾನ ಪಡೆದಿವೆ.
ಐದನೇ ಸ್ಥಾನದಲ್ಲಿ ರಾಜ್ಯ:
ಅಪಘಾತಗಳ ಸಂಖ್ಯೆಯಲ್ಲಿ ಉತ್ತರಪ್ರದೇಶ ದೇಶದಲ್ಲೇ ಮೊದಲ ಸ್ಥಾನದಲ್ಲಿರುವ ರಾಜ್ಯ. ತಮಿಳುನಾಡು ಎರಡನೇ ಸ್ಥಾನದಲ್ಲಿದೆ. ಕರ್ನಾಟಕ ಐದನೇ ಸ್ಥಾನದಲ್ಲಿದೆ. ಬೈಕ್‌ಗಳಿಂದ ಅಪಘಾತ ಆಗಿರುವ ಪ್ರಕರಣಗಳಲ್ಲಿ, ರಾಜ್ಯ ನಾಲ್ಕನೇ ಸ್ಥಾನದಲ್ಲಿದೆ. ಇಲ್ಲೂ ಉತ್ತರ ಪ್ರದೇಶವೇ ಮೊದಲ ಸ್ಥಾನದಲ್ಲಿದ್ದರೆ, ತಮಿಳುನಾಡು ನಂತರದ ಸ್ಥಾನದಲ್ಲಿದೆ.
‘ಹೆದ್ದಾರಿಗಳಲ್ಲಿ ಚಲಿಸುವ ವಾಹನಗಳು, ರಸ್ತೆಯ ಬದಿಯಲ್ಲಿ ನಿಲುಗಡೆ ಮಾಡಿರುವ ವಾಹನಗಳಿಗೆ ಡಿಕ್ಕಿ ಹೊಡೆಯುತ್ತಿರುವುದರಿಂದ ಭೀಕರ ಅಪಘಾತಗಳು ಸಂಭವಿಸುತ್ತಿವೆ. ಇದರಿಂದ ಜೀವಹಾನಿ ಆಗುತ್ತಿದೆ. ಹೆದ್ದಾರಿಯಲ್ಲಿ ವಾಹನಗಳಲ್ಲಿ ಗಸ್ತು ತಿರುಗುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ’ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ತಿಳಿಸಿದರು.
ಅಪಘಾತ ತಗ್ಗಿಸಲು ಹಲವು ಕ್ರಮ
*ಜಿಲ್ಲಾಧಿಕಾರಿಗಳು ಆಯಾ ಜಿಲ್ಲೆಯ ರಸ್ತೆ ಸುರಕ್ಷತಾ ಸಮಿತಿ ಸಭೆ ನಡೆಸಿ ಅಪಘಾತ ಪ್ರಕರಣ ಗಳನ್ನು ನಿಯಂತ್ರಿಸುವಂತೆ ಸೂಚಿಸಲಾಗಿದೆ.
*ಲೋಕೋಪಯೋಗಿ ಇಲಾಖೆ, ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಅಪಘಾತ ವಲಯ ಗುರುತಿಸಬೇಕು. ಅಂತಹ ವಲಯಗಳನ್ನು ದುರಸ್ತಿ ಪಡಿಸಬೇಕು.
*ಆರೋಗ್ಯ ಇಲಾಖೆ, ರಾಜ್ಯದಾದ್ಯಂತ ‘ಟ್ರಾಮಾ ಕೇರ್ ಸೆಂಟರ್’ ಆರಂಭಿಸಬೇಕು. ಅಗತ್ಯ ಸಿಬ್ಬಂದಿ ನಿಯೋಜಿಸಬೇಕು. ಅಲ್ಲದೇ ಆಂಬುಲೆನ್ಸ್ ನೀಡಬೇಕು.
*ರಸ್ತೆ ಬಳಕೆದಾರರು ನಿಯಮ ಉಲ್ಲಂಘಿಸಿದ್ದರೆ ಪೊಲೀಸ್, ಸಾರಿಗೆ ಇಲಾಖೆಯು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಅಪಘಾತ ವಲಯಗಳಲ್ಲಿ ತಂತ್ರಜ್ಞಾನ ಅಳವಡಿಕೆ ಮಾಡಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.