ADVERTISEMENT

ಪ್ರಾಥಮಿಕಶಾಲಾ ಶಿಕ್ಷಕರ ಸಂಘದಲ್ಲಿ ಹಣ ದುರುಪಯೋಗ ಆರೋಪ: ಇಲಾಖಾ ವಿಚಾರಣೆಗೆ ಅನುಮತಿ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2018, 19:23 IST
Last Updated 25 ಆಗಸ್ಟ್ 2018, 19:23 IST

ಬೆಂಗಳೂರು:ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಾಗಿದ್ದ ಬಸವರಾಜ ಗುರಿಕಾರ, ನಾರಾಯಣ ಸ್ವಾಮಿ ಮತ್ತು ಎಸ್‌.ಡಿ. ಗಂಗಣ್ಣವರ್‌ ಸಂಘದ ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಆರೋಪ ಕುರಿತು ಇಲಾಖಾ ವಿಚಾರಣೆ ನಡೆಸಲು ಪ್ರಾಥಮಿಕ ಶಿಕ್ಷಣ ಇಲಾಖೆ ಉಪ ಲೋಕಾಯುಕ್ತರಿಗೆ ಅನುಮತಿ ನೀಡಿದೆ.

ಶಂಕರಗೌಡ ಬಿ. ಪಾಟೀಲ ಅವರು ಶಿಕ್ಷಕರ ಸಂಘದಲ್ಲಿ ಹಣದ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ನೀಡಿದ್ದ ದೂರಿನ ತನಿಖೆ ನಡೆಸಿದ್ದ ತನಿಖಾಧಿಕಾರಿಗಳು ಕೊಟ್ಟ ವರದಿಯನ್ನು ಪರಿಶೀಲಿಸಿದ ಉಪ ಲೋಕಾಯುಕ್ತರು, ಮೂವರ ವಿರುದ್ಧ ಲೋಕಾಯುಕ್ತ ಕಾಯ್ದೆ 12 (3) ಅನ್ವಯ ವಿಚಾರಣೆಗೆ ಶಿಫಾರಸು ಮಾಡಿದ್ದರು.

‘ಮೂವರೂ ತಮ್ಮ ಮೇಲಿನ ಆರೋಪಗಳನ್ನು ಅಲ್ಲಗಳೆಯಲು ವಿಫಲರಾಗಿದ್ದಾರೆ. ಕರ್ತವ್ಯ ಪರಿಪಾಲನೆ ಮಾಡದೆ ಲೋಪ ಎಸಗಿದ್ದಾರೆ.ಆರೋಪಗಳಿಗೆ ಸೂಕ್ತ ಸಮಜಾಯಿಷಿ ನೀಡದೆ ದುರ್ನಡತೆ ತೋರಿರುವುದರಿಂದ ಶಿಸ್ತು ಕ್ರಮಕ್ಕೆ ಅರ್ಹರಾಗಿದ್ದಾರೆ’ ಎಂದು ಉಪ ಲೋಕಾಯುಕ್ತರು ಶಿಕ್ಷಣ ಇಲಾಖೆಗೆ ಈಚೆಗೆ ಕಳುಹಿಸಿದ ವರದಿಯಲ್ಲಿ ಹೇಳಿದ್ದರು.

ADVERTISEMENT

ರಾಜ್ಯದ 1.80 ಲಕ್ಷ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸ್ಮಾರ್ಟ್‌ಕಾರ್ಡ್‌ ವಿತರಿಸಲು ಪ್ರತಿಯೊಬ್ಬರಿಂದ ₹ 210 ಸಂಗ್ರಹಿಸಲಾಗಿದೆ. ಈ ಬಾಬ್ತು ₹ 50,18,417 ಸಂಘದ ಖಾತೆಯಲ್ಲಿ ಜಮೆ ಮಾಡಲಾಗಿತ್ತು. ಇದರಲ್ಲಿ ₹ 25,06,380 ಮತ್ತು ₹ 19,20,000 ಹಣವನ್ನು ಕ್ರಮವಾಗಿ ಕಂಪ್ಯೂಟರ್‌ ಎಜುಕೇಷನ್‌ ಕನ್ಸಲ್ಟೆನ್ಸಿ ಹಾಗೂ ಇನ್ಫೋಟೆಕ್‌ ಪ್ರೈವೇಟ್‌ ಲಿ. ಸಂಸ್ಥೆಗಳಿಗೆ ಪಾವತಿಸಿ 18,100 ಸ್ಮಾರ್ಟ್‌ಕಾರ್ಡ್‌ ಪಡೆಯಲಾಗಿತ್ತು. ಆದರೆ, ಸ್ಮಾರ್ಟ್‌ಕಾರ್ಡ್‌ ‍ಸ್ವೀಕರಿಸಿದ ದಾಖಲೆಗಳನ್ನು ಸರಿಯಾಗಿ ನಿರ್ವಹಿಸಿರುವುದಿಲ್ಲ’ ಎಂದು ಆರೋಪಿಸಲಾಗಿತ್ತು.

ಅಲ್ಲದೆ, 2010ರಲ್ಲಿ ಗೃಹ ನಿರ್ಮಾಣ ಸಂಘ ಸ್ಥಾಪಿಸಿ, ಶಿಕ್ಷಕರಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿದ್ದು ನಿವೇಶನ ಕೊಡದೆ ವಂಚಿಸಲಾಗಿದೆ. ಆಡಿಟ್ ವರದಿ ಅನ್ವಯ 2009ರಲ್ಲಿ ಸಂಘದ ವಾರ್ಷಿಕ ಆದಾಯ ₹ 36 ಲಕ್ಷ ಇರುತ್ತದೆ. ಅದೇ ವರ್ಷ ವಾರ್ಷಿಕ ಸಮ್ಮೇಳನಕ್ಕಾಗಿ ₹ 19 ಲಕ್ಷ ಸಂಗ್ರಹಿಸಲಾಗಿದೆ. ₹ 43 ಲಕ್ಷ ಸಾಲ ಪಡೆದು ಸಮ್ಮೇಳನಕ್ಕೆ ₹ 62 ಲಕ್ಷ ಖರ್ಚು ಮಾಡಲಾಗಿದೆ. ಇದು ಸಂಘದ ವಾರ್ಷಿಕ ಆದಾಯದ ಎರಡು ಪಟ್ಟಾಗಿದೆ. ಹಾಗೆ 2008ರಲ್ಲೂ ವಾರ್ಷಿಕ ಸಮ್ಮೇಳನಕ್ಕೆ ಭಾರಿ ಹಣ ವ್ಯಯಿಸಲಾಗಿದೆ ಎಂದು ದೂರಲಾಗಿತ್ತು.

ಬಸವರಾಜ ಗುರಿಕಾರ ಹಾಗೂ ಗಂಗಣ್ಣವರ್‌ ಸೇವೆಯಿಂದ ನಿವೃತ್ತರಾಗಿದ್ದಾರೆ. ನಾರಾಯಣಸ್ವಾಮಿ ಸದ್ಯ ಸಂಘದ ಅಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

* ಇದೊಂದು ಹಳೇ ಪ್ರಕರಣ. ನಮ್ಮ ತಪ್ಪು ಏನೂ ಇಲ್ಲ. ಸಂಘದ ವ್ಯವಹಾರ ಆಗಿರುವುದರಿಂದ ಇಲಾಖಾ ವಿಚಾರಣೆಗೆ ಆದೇಶಿಸುವ ಅಗತ್ಯವಿರಲಿಲ್ಲ
-ಬಸವರಾಜ ಗುರಿಕಾರ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.