ವಿಟ್ಲ (ದಕ್ಷಿಣ ಕನ್ನಡ): ಪುಣಚ ಗ್ರಾಮದ ಪರಿಯಾಲ್ತಡ್ಕ ಸಮೀಪದ ಮನೇಲ ಚರ್ಚ್‌ನ ಧರ್ಮಗುರು ತಮ್ಮದೇ ಸಮುದಾಯದ ವೃದ್ಧ ದಂಪತಿ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಈ ವಿಚಾರಕ್ಕೆ ಸಂಬಂಧಿಸಿ ಚರ್ಚ್‌ನ ಧರ್ಮಗುರು ಮತ್ತು ಮತ್ತೊಬ್ಬ ವ್ಯಕ್ತಿಯ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಕ್ರೈಸ್ಟ್ ಕಿಂಗ್ ಪ್ಯಾರಿಷ್‌ನ ಧರ್ಮಗುರು ನೆಲ್ಸನ್ ಒಲಿವೆರಾ ಮತ್ತು ಆತನ ಜತೆ ಕಾರು ಚಾಲಕನಾಗಿ ತೆರಳಿದ್ದ ಅಲ್ಫಾನ್ಸ್ ಮೊಂತೆರೊ ವಿರುದ್ಧ ಪುಣಚ ಗ್ರಾಮದ ಎರ್ಮೆತ್ತಡ್ಕ ನಿವಾಸಿ ಗ್ರೆಗರಿ ಮೊಂತೆರೊ (79) ನೀಡಿದ ದೂರಿನಂತೆ ಮಾನಭಂಗ ಯತ್ನ ಹಾಗೂ ಹಲ್ಲೆ ಪ್ರಕರಣ ದಾಖಲಾಗಿದೆ.
ಗುರುವಾರ (ಫೆ.29ರಂದು) ಈ ಘಟನೆ ನಡೆದಿದ್ದು ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ದಾಖಲಾಗಿತ್ತು. ಗ್ರೆಗರಿ ಅವರ ಕುತ್ತಿಗೆ ಪಟ್ಟಿ ಹಿಡಿದು ಎಳೆದೊಯ್ದು ಹಲ್ಲೆ ನಡೆಸಿರುವ ಧರ್ಮಗುರು, ರಕ್ಷಣೆಗೆ ಮುಂದಾದ ಗ್ರೆಗರಿ ಅವರ ಪತ್ನಿಯ ಮೇಲೂ ಹಲ್ಲೆ ನಡೆಸಿರುವುದು ವಿಡಿಯೊದಲ್ಲಿ ದಾಖಲಾಗಿದೆ.
‘ಗ್ರೆಗರಿ ಮೊಂತೆರೊ ದಂಪತಿ ಮನೆಗೆ ನೆಲ್ಸನ್ ಒಲಿವೆರಾ ಅವರು ಮನೆ ಶುದ್ಧಿ ನಿಮಿತ್ತ ತೆರಳಿದ್ದರು. ಚರ್ಚ್‌ಗೆ ಯಾವುದೇ ದೇಣಿಗೆ ನೀಡಿ ಸಹಕರಿಸುತ್ತಿಲ್ಲ ಎಂಬ ಕಾರಣಕ್ಕೆ ಅವರು ವೃದ್ಧ ದಂಪತಿಯನ್ನು ಅವಾಚ್ಯವಾಗಿ ನಿಂದಿಸಿದ್ದಾರೆ. ಕಾಲರ್ ಪಟ್ಟಿ ಹಿಡಿದು ಎಳೆದೊಯ್ದು ಹೊಡೆದಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಧರ್ಮಗುರು ಅಮಾನತು
ವೃದ್ಧ ದಂಪತಿಗೆ ಹಲ್ಲೆ ನಡೆಸಿದ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದಂತೆಯೇ ಧರ್ಮಗುರು ನೆಲ್ಸನ್ ಒಲಿವೆರಾ ಅವರನ್ನು ಹುದ್ದೆಯಿಂದ ತೆಗೆದು ಹಾಕಲಾಗಿದೆ.
‘ಮನೇಲದ ಕ್ರೈಸ್ಟ್ ಕಿಂಗ್ ಪ್ಯಾರಿಷ್ ವ್ಯಾಪ್ತಿಯಲ್ಲಿ ನಡೆದ ಘಟನೆಯಿಂದ ನೋವುಂಟಾಗಿದೆ. ಫೆ.29ರಂದು ನಡೆದ ಈ ಘಟನೆಗೆ ವಿಷಾಧಿಸುತ್ತೇವೆ. ದೇಶದ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ಈ ಘಟನೆಯ ತನಿಖೆಗೆ ಸಹಕರಿಸುತ್ತೇವೆ. ಸರ್ಕಾರವು ನಡೆಸುವ ತನಿಖೆಯ ಹೊರತಾಗಿ, ಸತ್ಯ ಸಂಗತಿ ಆಧರಿಸಿ ಕ್ರಮ ಕೈಗೊಳ್ಳುವ ಸಲುವಾಗಿ ಧರ್ಮಪ್ರಾಂತ್ಯದಿಂದಲೂ ನ್ಯಾಯಯುತವಾಗಿ ವಿಚಾರಣೆ ನಡೆಸುತ್ತೇವೆ. ತುರ್ತು ಕ್ರಮವಾಗಿ ಸಂಬಂಧಪಟ್ಟ ಧರ್ಮಗುರುವನ್ನು ಮನೇಲದ ಕ್ರೈಸ್ಟ್ ಕಿಂಗ್ ಚರ್ಚ್‌ನಿಂದ ತೆಗೆದು ಹಾಕುತ್ತೇವೆ. ಅಲ್ಲಿನ ಜನರ ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸಲು ಬೇರೊಬ್ಬರನ್ನು ನಿಯೋಜಿಸುತ್ತೇವೆ’ ಎಂದು ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯವು ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.