ನವದೆಹಲಿ: ವೀಕ್ಷಕರ ಗ್ಯಾಲರಿಯಿಂದ ಲೋಕಸಭೆಯ ಚೇಂಬರ್‌ಗೆ ಜಿಗಿದ ಇಬ್ಬರು ಆರೋಪಿಗಳ ಕುರಿತಾದ ಒಂದೊಂದೇ ಮಾಹಿತಿ ಹೊರಬೀಳುತ್ತಿದೆ. ಆರೋಪಿ ಮನೋರಂಜನ್ ಮೈಸೂರಿನ ಸಂಸದ ಪ್ರತಾಪ್ ಸಿಂಹ ಕಚೇರಿಗೆ ಆಗಾಗ್ಗೆ ಭೇಟಿ ನೀಡುತ್ತಿದ್ದ ಎಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
ಆರೋಪಿ ಮನೋರಂಜನ್, ಮತ್ತೊಬ್ಬ ಆರೋಪಿ ಸಾಗರ್ ಶರ್ಮಾನನ್ನು ತನ್ನ ಸ್ನೇಹಿತನೆಂದು ಸಂಸದರ ಕಚೇರಿಗೆ ಪರಿಚಯಿಸಿದ್ದ. ಹೊಸ ಸಂಸತ್ ಭವನವನ್ನು ನೋಡಬೇಕೆಂಬ ಮನವಿ ಮೇರೆಗೆ ಅವರಿಗೆ ಪಾಸ್‌ಗಳನ್ನು ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಬುಧವಾರ ಒಟ್ಟು ಮೂರು ಪಾಸ್‌ಗಳನ್ನು ವಿತರಿಸಲಾಗಿತ್ತು. ಮೂರನೇ ಪಾಸ್ ಪಡೆದಿದ್ದ ಮಹಿಳೆ ಮಗುವಿನ ಜೊತೆ ಬಂದಿದ್ದರು. ಪಾಸ್‌ನಲ್ಲಿ ಮಗುವಿನ ಹೆಸರು ನಮೂದಿಸದ ಕಾರಣ ಪ್ರವೇಶ ಸಿಗದೆ ವಾಪಸ್ ಆಗಿದ್ದರು. ಈ ಇಬ್ಬರು ಆರೋಪಿಗಳಿಗೂ ಮಹಿಳೆಗೂ ಯಾವುದೇ ಸಂಬಂಧ ಇಲ್ಲ ಎಂದು ವರದಿ ತಿಳಿಸಿದೆ.
ಮನೋರಂಜನ್ ಮೂರು ತಿಂಗಳಿನಿಂದ ಸಂಸತ್ ಪ್ರವೇಶದ ಪಾಸ್‌ಗಾಗಿ ಸಂಸದ ಪ್ರತಾಪ್ ಸಿಂಹ ಮತ್ತು ಅವರ ಕಚೇರಿಗೆ ದುಂಬಾಲು ಬಿದ್ದಿದ್ದ ಎಂದು ತಿಳಿದುಬಂದಿದೆ.
ಆಗಿದ್ದೇನು?
2001ರ ಸಂಸತ್ ದಾಳಿಗೆ 22 ವರ್ಷವಾಗಿದ್ದು, ಅದೇ ದಿನ ಲೋಕಸಭೆಗೆ ಆಗಂತುಕರು ಪ್ರವೇಶಿಸಿದ್ದಾರೆ. ಲೋಕಸಭೆಯ ಕಲಾಪ ನಡೆಯುತ್ತಿದ್ದಾಗ ವೀಕ್ಷಕರ ಗ್ಯಾಲರಿಯಿಂದ ಧುಮುಕಿದ ಇಬ್ಬರು, ಹಳದಿ ಬಣ್ಣದ ಹೊಗೆ ಸಿಂಪಡಿಸಿದ್ದಾರೆ. ಬಳಿಕ, ಸಂಸದರು ಅವರನ್ನು ಹಿಡಿದಿದ್ದಾರೆ. ಅದೇ ಸಮಯದಲ್ಲಿ ಸಂಸತ್ತಿನ ಹೊರಗಡೆ ಮತ್ತಿಬ್ಬರು, ಬಣ್ಣದ ಹೊಗೆ ಸಿಂಪಡಿಸಿ, ಸರ್ವಾಧಿಕಾರ ನಡೆಯುವುದಿಲ್ಲ ಎಂದು ಘೋಷಣೆ ಕೂಗಿದ್ದಾರೆ. ಈ ಎರಡೂ ಪ್ರಹಸನಗಳಲ್ಲಿ ಭಾಗಿಯಾದ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ.
ಮಧ್ಯಾಹ್ನ 1 ಗಂಟೆ ಸುಮಾರಿಗೆ ಇಬ್ಬರು ವ್ಯಕ್ತಿಗಳು ಲೋಕಸಭೆಯ ಸಾರ್ವಜನಿಕ ಗ್ಯಾಲರಿಯಿಂದ ಚೇಂಬರ್‌ಗೆ ಹಾರಿದ್ದಾರೆ. ಒಬ್ಬನು ಮೇಜುಗಳ ಮೇಲೆ ಜಿಗಿದರೆ, ಇನ್ನೊಬ್ಬ ಗ್ಯಾಲರಿಯಿಂದ ನೇತಾಡುತ್ತಿದ್ದ. ಬಳಿಕ ಆತನೂ ಮೇಜಿನ ಮೇಲೆ ಜಿಗಿದ ಎಂದು ಸದನದಲ್ಲಿದ್ದ ಸಂಸದರು ಹೇಳಿದ್ದಾರೆ. ಲೋಕಸಭೆಗೆ ಪ್ರವೇಶಿಸಿದ ಆಗಂತುಕರಲ್ಲಿ ಒಬ್ಬ ನಾನು ದೇಶ ಪ್ರೇಮಿ, ಪ್ರತಿಭಟನೆ ಮಾಡಲು ಬಂದಿದ್ದೇನೆ ಎಂದು ಹೇಳಿರುವುದಾಗಿ ಸಂಸದರು ಹೇಳಿದ್ದಾರೆ. ಇಬ್ಬರನ್ನೂ ಥಳಿಸಿದ ಸಂಸದರು ಬಳಿಕ ಭದ್ರತಾ ಸಿಬ್ಬಂದಿಗೆ ಒಪ್ಪಿಸಿದ್ದಾರೆ. ಆಗಂತುಕರು ಶೂನಲ್ಲಿ ಗ್ಯಾಸ್ ಕ್ಯಾನ್‌ಗಳನ್ನು ಅಡಗಿಸಿಟ್ಟುಕೊಂಡಿದ್ದರು. ಅದರಿಂದ ಹಳದಿ ಬಣ್ಣದ ಹೊಗೆ ಸಿಂಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.