ಬೆಂಗಳೂರು: ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಒಂದೂವರೆ ತಿಂಗಳೊಳಗೆ ಅರಣ್ಯ ಇಲಾಖೆಯು ವೃಂದ ಮತ್ತು ನೇಮಕಾತಿ ನಿಯಮಗಳನ್ನು ಗಾಳಿಗೆ ತೂರಿ 17 ಮಂದಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ (ಎಸಿಎಫ್) ಉಪ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗೆ (ಡಿಸಿಎಫ್) ಪದೋನ್ನತಿ ನೀಡಿದೆ.
ಎಸಿಎಫ್‌ಗಳಾಗಿ ಕನಿಷ್ಠ ಐದು ವರ್ಷ ಕಾರ್ಯನಿರ್ವಹಿಸಿದ್ದವರನ್ನು ಡಿಸಿಎಫ್‌ಗಳಾಗಿ ಪದೋನ್ನತಿ ಮಾಡಬಹುದು ಎಂದು ನಿಯಮದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಇದೇ ಜೂನ್ 29ರಂದು ಡಿಸಿಎಫ್‌ಗಳಾಗಿ ಬಡ್ತಿ ಪಡೆದ 17 ಮಂದಿಯೂ ಆ ಹುದ್ದೆಯಲ್ಲಿ ಐದು ವರ್ಷ ಪೂರೈಸಿಲ್ಲ. ಇಬ್ಬರು ಅಧಿಕಾರಿಗಳು 2016ರ ನವೆಂಬರ್ 25ರಂದು ಹಾಗೂ ಉಳಿದ ಅಧಿಕಾರಿಗಳು 2015ರ ನವೆಂಬರ್ 24ರಂದು ಎಸಿಎಫ್‌ಗಳಾಗಿ ಬಡ್ತಿ ಪಡೆದಿದ್ದರು. ಇದಕ್ಕೆ ಸಂಬಂಧಿಸಿದ ದಾಖಲೆಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ.
ಇಲಾಖಾ ಅಧಿಕಾರಿಗಳಿಗೆ ಮುಂಬಡ್ತಿ ನೀಡುವ ಸಂಬಂಧ ಇಲಾಖಾ ಪದೋನ್ನತಿ ಸಮಿತಿ (ಡಿಪಿಸಿ) ಈ ವರ್ಷದ ಮೇ 31ರಂದು ಸಭೆ ನಡೆಸಿ ಬಡ್ತಿಗೆ 31 ಅಧಿಕಾರಿಗಳ ಹೆಸರು ಶಿಫಾರಸು ಮಾಡಿತ್ತು. ಮತ್ತೆ ಜೂನ್ 6ರಂದು ಸಭೆ ನಡೆಸಿ ಆ ಸಂಖ್ಯೆಯನ್ನು 17ಕ್ಕೆ ಇಳಿಸಿತ್ತು. ಆದರೆ, ಜೂನ್ 26ರಂದು ಹೆಸರುಗಳ ಸೇರ್ಪಡೆ, ತಿದ್ದುಪಡಿ ಹಾಗೂ ಪರಿಷ್ಕರಣೆ ಮಾಡಲಾಗಿದೆ. ಒಂದೇ ದಿನ ಐದು ಆದೇಶಗಳನ್ನು ಹೊರಡಿಸಲಾಗಿದೆ.
ಸಾಮಾನ್ಯವಾಗಿ ಡಿಪಿಸಿ ಸಭೆ ನಡೆಯುವ ಮುನ್ನವೇ ಬಡ್ತಿ ಕಡತಕ್ಕೆ ಅಂತಿಮ ರೂಪ ನೀಡಲಾಗುತ್ತದೆ. ಆದರೆ, ಇಲ್ಲಿ ಸಭೆ ನಡೆದ 20 ದಿನಗಳ ಬಳಿಕ ಕಡತ ಪರಿಷ್ಕರಿಸಲಾಗಿದೆ. ಇಲಾಖೆಯಲ್ಲಿ ಖಾಲಿ ಹುದ್ದೆಗಳ ಆಧಾರದಲ್ಲೇ ಆಯ್ಕೆ ಪಟ್ಟಿ ಸಿದ್ಧಪಡಿಸಬೇಕು ಎಂದು ಇಲಾಖಾ ಬಡ್ತಿ ಸಮಿತಿ ನಡಾವಳಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಆದರೆ, ಇಲ್ಲಿ ಅದು ಪಾಲನೆಯಾಗಿಲ್ಲ. ಹೀಗಾಗಿ, ಈ ಬಡ್ತಿ ಪ್ರಕ್ರಿಯೆ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಗಳೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ನಿವೃತ್ತ ಡಿಸಿಎಫ್‌ಗಳಾದ ಲಕ್ಷ್ಮಿನಾರಾಯಣ್, ಬಿ.ಶ್ರೀನಿವಾಸ ರೆಡ್ಡಿ ಹಾಗೂ ಕೆ.ಆರ್.ಕೇಶವಮೂರ್ತಿ ಅವರು ಮುಖ್ಯಮಂತ್ರಿ, ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) ಅವರಿಗೆ ದೂರು ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ, ಪಿಸಿಸಿಎಫ್ ಪುನಟಿ ಶ್ರೀಧರ್ ಅವರು ನಾಲ್ವರು ಎಪಿಸಿಎಫ್‌ಗಳ ಜತೆಗೆ ಗುರುವಾರ ತುರ್ತು ಸಭೆ ನಡೆಸಿದ್ದಾರೆ. ನಿಯಮದ ಬಗ್ಗೆ ಸ್ಪಷ್ಟನೆ ಕೋರಿ ಸಿಬ್ಬಂದಿ ಹಾಗೂ ಆಡಳಿತ ಸುಧಾರಣಾ ಇಲಾಖೆಗೆ ಪತ್ರ ಬರೆದಿದ್ದಾರೆ.
‘ದೂರು ನೀಡಿ ಎಂಟು ದಿನಗಳು ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ವಿಳಂಬ ಧೋರಣೆ ಉನ್ನತ ಮಟ್ಟದ ಅಧಿಕಾರಿಗಳು ಅಕ್ರಮದಲ್ಲಿ ಶಾಮೀಲಾಗಿರುವ ಅನುಮಾನ ಮೂಡಿಸುತ್ತಿದೆ. ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜೆಯಲ್ಲಿ ತೆರಳಿದ್ದ ವೇಳೆ ಈ ಕಡತಕ್ಕೆ ಅಂತಿಮ ರೂಪ ನೀಡಲಾಗಿದೆ. ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಿ ಉನ್ನತ ಮಟ್ಟದ ತನಿಖೆ ನಡೆಸಬೇಕು’ ಎಂದು ಲಕ್ಷ್ಮಿನಾರಾಯಣ ಆಗ್ರಹಿಸಿದರು.
‘ಡಿಪಿಎಆರ್ ಸಲಹೆ ಆಧರಿಸಿ ಕ್ರಮ’
‘ಈ ಪ್ರಕರಣದ ಬಗ್ಗೆ ನನಗೆ ದೂರು ಬಂದಿದೆ. ದೂರುದಾರರು ಗಂಭೀರ ಆರೋಪ ಮಾಡಿದ್ದಾರೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ ಉತ್ತರ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂದು ಪಿಸಿಸಿಎಫ್ ಪುನಟಿ ಶ್ರೀಧರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘17 ಅಧಿಕಾರಿಗಳು 2012ರಲ್ಲೇ ಎಸಿಎಫ್‌ಗಳಾಗಿ ಪದೋನ್ನತಿ ಹೊಂದಿದ್ದು, ಈಗಿನ ಮುಂಬಡ್ತಿಯಲ್ಲಿ ಯಾವುದೇ ಲೋಪವಾಗಿಲ್ಲ ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಸಮಗ್ರ ಪರಿಶೀಲನೆ ನಡೆಸಬೇಕಿದೆ. ಇದಕ್ಕೆ ಸ್ವಲ್ಪ ಕಾಲಾವಕಾಶ ಬೇಕು’ ಎಂದು ಅವರು ಹೇಳಿದರು.
ಬಡ್ತಿ ಫಲಾನುಭವಿಗಳು
ಎಸ್.ಜಿ.ನಾಯಕ್., ಎಸ್.ವಿ.ನಾಯಕ್, ಎಚ್.ಆರ್.ಸುಬ್ರಹ್ಮಣ್ಯ, ಎನ್.ಎಚ್.ದೇಸಾಯಿ, ಆರ್.ವಿ.ಹೆಗಡೆ, ಆನಂದ್ ವೈ.ಧುರಿ, ಪೂವಯ್ಯ ಎ.ಟಿ., ಹನುಮಂತಪ್ಪ ಕೆ.ವಿ., ರಘುನಾಥ್ ಆರ್., ಪರೀಶ್ವಂತ್ ಎಸ್.ವರೂರ, ಗೋವರ್ಧನ ಸಿಂಗ್ ಎಂ.ಜಿ, ಭಾಸ್ಕರ್ ಬಿ., ದೇವರಾಜು ವಿ., ರಮೇಶ್ ಬಾಬು ಎನ್., ಜಗನ್ನಾಥ್ ಎನ್.ಎಚ್., ನಾದಶೆಟ್ಟಿ ಆರ್.ಎಸ್., ಮುಕುಂದಚಂದ್ರ.
* ಹಿಂದಿನ ಕಾಂಗ್ರೆಸ್ ಸರ್ಕಾರ ಜನರಿಗೆ ಅನೇಕ ಭಾಗ್ಯಗಳನ್ನು ನೀಡಿತ್ತು. ಈಗಿನ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ‘ಅಕ್ರಮ ಬಡ್ತಿ ಭಾಗ್ಯ’ ಆರಂಭಿಸಿದೆ.
-ಲಕ್ಷ್ಮಿನಾರಾಯಣ, ನಿವೃತ್ತ ಡಿಸಿಎಫ್
ಅಂಕಿ ಅಂಶಗಳು
* ₹67,500 ಎಸಿಎಫ್‌ಗಳ ತಿಂಗಳ ವೇತನ
* ₹1,04,600 ಡಿಸಿಎಫ್‌ಗಳ ತಿಂಗಳ ವೇತನ
* ₹5 ಕೋಟಿ ಬಡ್ತಿಯಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ ಹೊರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.