ನವದೆಹಲಿ: ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಅಭಯಾರಣ್ಯದಲ್ಲಿ ನಿಯಮಬಾಹಿರವಾಗಿ ಪ್ರವಾಸೋದ್ಯಮ ಚಟುವಟಿಕೆಗಳು ನಡೆದರೂ ಮೌನ ವಹಿಸಿದ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ) ಅಧಿಕಾರಿಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವಾಲಯವು ವನ್ಯಜೀವಿ ವಿಭಾಗಕ್ಕೆ ನಿರ್ದೇಶನ ನೀಡಿದೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಉಲ್ಲಂಘಿಸಿ ನಿಯಮಬಾಹಿರವಾಗಿ ಹಲವು ಕಾಮಗಾರಿಗಳನ್ನು ನಡೆಸಿರುವ ಅಧಿಕಾರಿಗಳ ಹಾಗೂ ದೂರು ನೀಡಿದರೂ ಕ್ರಮ ಕೈಗೊಳ್ಳದ ಎನ್‌ಟಿಸಿಎ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಹಿತಿ ಹಕ್ಕು ಕಾರ್ಯಕರ್ತ ಅಕ್ಶೀವ್ ಅವರು ದೂರು ಸಲ್ಲಿಸಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಪ್ರಧಾನಿ ಸಚಿವಾಲಯವು ಅರಣ್ಯ ಸಚಿವಾಲಯಕ್ಕೆ ಸೂಚಿಸಿತ್ತು.
‘ಈ ಪ್ರಕರಣದಲ್ಲಿ ಐಎಫ್‌ಎಸ್ ಅಧಿಕಾರಿ ವಿರುದ್ಧ ಆರೋಪ ಮಾಡಲಾಗಿದೆ. ಶಿಸ್ತು ಪ್ರಾಧಿಕಾರವಾಗಿರುವ ರಾಜ್ಯ ಸರ್ಕಾರವೇ ಈ ಪ್ರಕರಣದಲ್ಲಿ ಕ್ರಮ ಕೈಗೊಳ್ಳಬೇಕಿದೆ. ನಿಯಮಗಳನ್ನು ಹಾಗೂ ಮಾರ್ಗಸೂಚಿಗಳನ್ನು ಪರಿಶೀಲಿಸಿ ಅಧಿಕಾರಿ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಸಚಿವಾಲಯವು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚಿಸಿತ್ತು.
‘ಎನ್‌ಟಿಸಿಎ ಅಧಿಕಾರಿಗಳ ವಿರುದ್ಧ ದೂರು ನೀಡಲಾಗಿತ್ತು. ಆದರೆ, ಸಚಿವಾಲಯವು ತಪ್ಪು ಮಾಹಿತಿ ನೀಡಿದೆ ಹಾಗೂ ಹೊಣೆಯಿಂದ ಜಾರಿಕೊಂಡಿದೆ. ಎನ್‌ಟಿಸಿಎ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ಇರುವುದು ಪರಿಸರ ಸಚಿವಾಲಯಕ್ಕೆ. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಅಕ್ಶೀವ್ ಅವರು ಸಚಿವಾಲಯಕ್ಕೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಇದೀಗ, ಎನ್‌ಟಿಸಿಎ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಚಿವಾಲಯ ತೀರ್ಮಾನಿಸಿದೆ.
ದೂರಿನಲ್ಲಿ ಏನಿತ್ತು?:
‘ಹುಲಿ ಮೀಸಲು ಪ್ರದೇಶದ ಕೋರ್ ಪ್ರದೇಶವಾದ ನುಜ್ಜಿ ನರ್ಸರಿ ಪ್ರದೇಶದಲ್ಲಿ ಬೃಹತ್ ಮರಗಳನ್ನು ಕಡಿದು ಆರ್ಕಿಡೇರಿಯಂ ನಿರ್ಮಿಸಲಾಗಿದೆ. ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಕೋರ್ ಪ್ರದೇಶದಲ್ಲಿ ಯಾವುದೇ ಹೊಸ ಪ್ರವಾಸಿ ನಿರ್ಮಾಣ ಕಾಮಗಾರಿಗೆ ಅನುವು ಮಾಡಿಕೊಡುವುದಿಲ್ಲ ಎಂದು ಎನ್‌ಟಿಸಿಎ ಈ ಹಿಂದೆಯೇ ತೀರ್ಮಾನ ತೆಗೆದುಕೊಂಡಿದೆ. ಆದರೆ, ಈ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಕಾಮಗಾರಿ ನಡೆಸಲು ಅವಕಾಶ ನೀಡಲಾಗಿದೆ’ ಎಂದು ಆಕ್ಶೀವ್ ದೂರಿದ್ದರು.
‘ಹುಲಿ ಸಂರಕ್ಷಿತ ಪ್ರದೇಶದ ಹುಲಿ ಸಂರಕ್ಷಣಾ ಯೋಜನೆಯಲ್ಲಿ ಉಲ್ಲೇಖವಿರದಿದ್ದರೂ ಕ್ಯಾಸಲ್ ರಾಕ್ ವಲಯದಲ್ಲಿ ಕಾನೂನುಬಾಹಿರವಾಗಿ ಜಂಗಲ್ ರೈಡ್ ಹೆಸರಿನಲ್ಲಿ ಕೆನೋಪಿ ವಾಕ್ ಪ್ರದೇಶ, ಪಾಪುಲ್ವಾಡಿ ಜಲಪಾತ ಪ್ರದೇಶ ಸೇರಿದಂತೆ ಹಲವೆಡೆ ಜಂಗಲ್ ಸಫಾರಿ ಆರಂಭಿಸಲಾಗಿದೆ. ಅನುಮತಿ ನೀಡಿರುವ ಚಾರಣ ಪಥಗಳನ್ನು ಹೊರತುಪಡಿಸಿ ಇನ್ನೂ ಐದು ದಾರಿಗಳಲ್ಲಿ ಅಕ್ರಮವಾಗಿ ಚಾರಣಕ್ಕೆ ಅವಕಾಶ ಕಲ್ಪಿಸಿದ್ದಾರೆ’ ಎಂದು ದೂರಲಾಗಿತ್ತು.
‘ಶಿವಪುರ ಬಳಿ ತೂಗು ಸೇತುವೆಯನ್ನು ಅರಣ್ಯ ಸಂರಕ್ಷಣಾ ಕಾಯ್ದೆ 1980 ನ್ನು ಉಲ್ಲಂಘಿಸಿ ನಿರ್ಮಿಸಲಾಗಿದೆ. ನೀಲಿ ಜಲಪಾತದ ಬಳಿಯಲ್ಲಿ ಅನಧಿಕೃತವಾಗಿ ಪ್ರವಾಸೋದ್ಯಮ ಚಟುವಟಿಕೆಗೆ ಅವಕಾಶ ಕಲ್ಪಿಸಲಾಗಿದೆ. ಕಾಳಿ ನದಿಯ ಹಿನ್ನೀರಿನಲ್ಲಿ ಬೋಟ್ ಸಫಾರಿ ಆರಂಭಿಸಲಾಗಿದೆ. ವನ್ಯಜೀವಿ ಕಾಯ್ದೆಗಳನ್ನು ಗಾಳಿಗೆ ತೂರಿ ಈ ಎಲ್ಲ ಚಟುವಟಿಕೆಗಳಿಗೆ ಅನುವು ಮಾಡಿಕೊಡಲಾಗಿದೆ’ ಎಂದು ದೂರಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.