ADVERTISEMENT

ನೀರಿನ ದರ ಪರಿಷ್ಕರಣೆಗೆ ಕ್ರಮ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 24 ಜುಲೈ 2024, 12:48 IST
Last Updated 24 ಜುಲೈ 2024, 12:48 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಬೆಂಗಳೂರು: ‘ಜಲ ಮಂಡಳಿ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಕಾವೇರಿ ನೀರಿನ ದರ ಪರಿಷ್ಕರಣೆ ಕುರಿತು ವಿಧಾನಸಭೆ ಅಧಿವೇಶನದ ಬಳಿಕ ಮಂಡಳಿಯ ಅಧಿಕಾರಿಗಳ ಜತೆಗೆ ಚರ್ಚಿಸಿ, ಕ್ರಮ ಕೈಗೊಳ್ಳಲಾಗುವುದು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ಜಲ ಮಂಡಳಿಯು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ನೌಕರರ ಸಂಘ, ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಬಳಗದ ಸಹಯೋಗದಲ್ಲಿ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕೆಂಪೇಗೌಡ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಕಾವೇರಿ ನೀರಿನ ದರ ಹೆಚ್ಚಳ ಮಾಡಿ 12 ವರ್ಷಗಳಾಗಿವೆ. ಈಗ ನೀರಿನ ಬೆಲೆ ಹೆಚ್ಚಿಸಬೇಕೆಂಬ ಒತ್ತಡವಿದೆ. ಇಲ್ಲವಾದರೆ ಮಂಡಳಿ ಸತ್ತು ಹೋಗುತ್ತದೆ. ಒಮ್ಮೆಯೇ ದರ ಹೆಚ್ಚಿಸಿದರೆ ವಿರೋಧ ಪಕ್ಷದವರು ಟೀಕೆ ಮಾಡುತ್ತಾರೆ. ಅವರು ಟೀಕೆ ಮಾಡಿದರೂ ಪರವಾಗಿಲ್ಲ, ನಮಗೆ ಮಂಡಳಿ ಉಳಿಯಬೇಕು. ಹೊಸ ಯೋಜನೆಗಳನ್ನು ಕೈಗೊಂಡು ಜನರಿಗೆ ನೀರನ್ನು ಪೂರೈಸಬೇಕು. ಮಂಡಳಿಯಲ್ಲಿ ಸಿಬ್ಬಂದಿ ಕೊರತೆಯೂ ಇದೆ. ವಿಧಾನಸಭೆ ಅಧಿವೇಶನದ ಬಳಿಕ ಮಂಡಳಿ ಅಧ್ಯಕ್ಷರ ಜತೆಗೆ ಸಭೆ ನಡೆಸಿ, ವಿವಿಧ ಪ್ರಸ್ತಾವಗಳ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದರು.

ADVERTISEMENT

‘ನಗರ ಹಾಗೂ ಹೊರವಲಯದ ವ್ಯಾಪ್ತಿಯಲ್ಲಿ ಇರುವ ಕೆರೆಗಳನ್ನು ಜಲಮಂಡಳಿಯ ವಶಕ್ಕೆ ತೆಗೆದುಕೊಳ್ಳಲು ಚಿಂತನೆ ನಡೆದಿದೆ. ಕರ್ನಾಟಕ ರಾಜ್ಯ ಕೆರೆ ಸಂರಕ್ಷಣಾ ಪ್ರಾಧಿಕಾರದ ಜತೆಗೆ ಸಭೆ ನಡೆಸಿ, ನಗರದಲ್ಲಿರುವ ಎಲ್ಲ ಕೆರೆಗಳ ಅಂತರ್ಜಲ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಆರು ಪಟ್ಟಣಗಳಿಗೆ ಉಪನಗರ ಭಾಗ್ಯ
‘ರಾಜಧಾನಿಯ ಹೊರವಲಯದಲ್ಲಿರುವ ದೇವನಹಳ್ಳಿ ನೆಲಮಂಗಲ ಹೊಸಕೋಟೆ ದೊಡ್ಡಬಳ್ಳಾಪುರ ಮಾಗಡಿ ಮತ್ತು ಬಿಡದಿ ಪಟ್ಟಣಗಳನ್ನು ಉಪನಗರಗಳನ್ನಾಗಿ ಅಭಿವೃದ್ಧಿಪಡಿಸಲಾಗುವುದು’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು. ಬಿಜೆಪಿಯ ಧೀರಜ್‌ ಮುನಿರಾಜು ಪ್ರಶ್ನೆಗೆ ಉತ್ತರಿಸಿದ ಅವರು ‘ಈ ಪ್ರಸ್ತಾವನೆಗೆ ಆರ್ಥಿಕ ಇಲಾಖೆ ಇದೇ 16ರಂದು ತಾತ್ವಿಕ ಅನುಮೋದನೆ ನೀಡಿದೆ. ರೈಲು ಮತ್ತು ರಸ್ತೆ ಸಂಪರ್ಕದೊಂದಿಗೆ ಉಪನಗರಗಳನ್ನು ಅಭಿವೃದ್ಧಿಪಡಿಸಲಾಗುವುದು. ಈ ಬಗ್ಗೆ ಎಲ್ಲ ಶಾಸಕರ ಅಭಿಪ್ರಾಯ ಪಡೆದೇ ಮುಂದುವರೆಯುತ್ತೇನೆ. ಆದರೆ ಇವುಗಳನ್ನು ‘ಗ್ರೇಟರ್‌ ಬೆಂಗಳೂರು’ ವ್ಯಾಪ್ತಿಗೆ ಸೇರಿಸಲು ಸಾಧ್ಯವಿಲ್ಲ’ ಎಂದರು.

ಗಡಿ ಮೀರಿ ಬೆಳೆಯುತ್ತಿದೆ ನಗರ

ಬೆಂಗಳೂರು: ‘ಅತ್ಯಂತ ವೇಗವಾಗಿ ಗಡಿ ಮೀರಿ ಬೆಳೆಯುತ್ತಿರುವ ನಗರವನ್ನು ಕಾಪಾಡಬೇಕಿದೆ. ಈ ನಿಟ್ಟಿನಲ್ಲಿ ನಗರದ ಸಮರ್ಪಕ ನಿರ್ವಹಣೆ ಹಾಗೂ ಸರ್ವತೋಮುಖ ಅಭಿವೃದ್ಧಿಗೆ ‘ಗ್ರೇಟರ್‌ ಬೆಂಗಳೂರು ಆಡಳಿತ ಮಸೂದೆ’ ತರಲಾಗಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ‌. ಶಿವಕುಮಾರ್ ಹೇಳಿದರು.

ಜಲಮಂಡಳಿಯು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನೌಕರರ ಸಂಘ ಹಾಗೂ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಬಳಗದ ಸಹಯೋಗದಲ್ಲಿ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಕೆಂಪೇಗೌಡ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ನಗರವು ನಾಡಪ್ರಭು ಕೆಂಪೇಗೌಡರು ಹಾಕಿದ್ದ ಗಡಿಯನ್ನು ಮೀರಿ ಬೆಳೆಯುತ್ತಿದೆ. 1.40 ಕೋಟಿ ಜನರನ್ನು ಹೊಂದಿರುವ ನಗರದಲ್ಲಿ ರಸ್ತೆ ನೀರು ಸೇರಿ ವಿವಿಧ ಮೂಲಸೌಕರ್ಯ ಒದಗಿಸುವುದು ಸುಲಭವಲ್ಲ. ಈ ಕಾರಣದಿಂದಾಗಿಯೇ ನಗರದ ಆಡಳಿತ ನಿರ್ವಹಣೆಗೆ ಪ್ರತ್ಯೇಕ ಮಸೂದೆ ತರಲಾಗಿದೆ. ಇದಕ್ಕೆ ಸುಮಾರು 70 ಸಾವಿರ ಸಲಹೆಗಳನ್ನು ಪಡೆಯಲಾಗಿದೆ. ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ನನ್ನದೇ ಆದ ಹೆಜ್ಜೆ ಗುರುತು ಮೂಡಿಸಬೇಕೆಂದು ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದ್ದೇನೆ’ ಎಂದು ಹೇಳಿದರು.

‘2006ರಲ್ಲಿ ಯೋಜನೆ ರೂಪಿಸದ ಕಾರಣ ವರ್ತುಲ ರಸ್ತೆಯು ನಗರದ ಒಳಗೆ ಬಂದಿದೆ. ಈಗ ಹೊಸದಾಗಿ 150 ಅಡಿ ಅಗಲದ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಸುಮಾರು ₹25 ಸಾವಿರ ಕೋಟಿ ಖರ್ಚಾಗಲಿದೆ. ಇದಕ್ಕೆ ಪ್ರತ್ಯೇಕ ಕಂಪನಿ ಸ್ಥಾಪಿಸಿ ನಿರ್ಮಾಣ ಮಾಡಲಾಗುತ್ತದೆ. ಇದನ್ನು ‘ಬೆಂಗಳೂರು ಬಿಸಿನೆಸ್ ಕಾರಿಡಾರ್’ ಎಂದು ಕರೆಯಲಾಗುವುದು’ ಎಂದು ತಿಳಿಸಿದರು.

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ ‘ಮುಂದಿನ 20 ವರ್ಷಗಳಲ್ಲಿ ನಗರದ ಜನಸಂಖ್ಯೆ ಇನ್ನೂ ಒಂದು ಕೋಟಿ ಹೆಚ್ಚಾಗುವ ಸಾಧ್ಯತೆಯಿದೆ. ಆಗ ಸುಮಾರು 2.5 ಕೋಟಿ ಜನರಿಗೆ ಮೂಲಸೌಕರ್ಯಗಳನ್ನು ನೀಡುವ ಜತೆಗೆ ಎದುರಾಗುವ ಜ್ವಲಂತ ಸಮಸ್ಯೆಗಳ ನಿವಾರಣೆಗೂ ಸಜ್ಜಾಗಬೇಕು. ಈ ನಿಟ್ಟಿನಲ್ಲಿ ಕೆಂಪೇಗೌಡರು ನಿರ್ಮಿಸಿದ ಕೆರೆಗಳನ್ನು ಉಳಿಸಿ ಬೆಳೆಸುವ ಕಾರ್ಯ ಆಗಬೇಕು’ ಎಂದು ಹೇಳಿದರು. ಜಲಮಂಡಳಿ ಅಧ್ಯಕ್ಷ ರಾಮ್‌ ಪ್ರಸಾತ್‌ ಮನೋಹರ್‌ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.