ಬೆಳಗಾವಿ: ಮಂಗಳೂರಿನ ಉಳ್ಳಾಲದ ಫಿಶ್‌ಮಿಲ್ ತಯಾರಿಕ ಘಟಕ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಹೇಳಿದರು.
ವಿಧಾನ ಪರಿಷತ್‌ನಲ್ಲಿ ಜೆಡಿಎಸ್‌ನ ಬಿ.ಎಂ.ಫಾರೂಕ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಫಿಶ್‌ಮಿಲ್ ತಯಾರಿಕಾ ಘಟಕದಿಂದ ಪರಿಸರ, ಜಲ ಮತ್ತು ವಾಯುಮಾಲಿನ್ಯದಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಪರಿಸರಕ್ಕೆ ಹಾನಿಯಾಗುತ್ತಿದೆ ಎಂಬ ಜನರ ನೋವನ್ನು ಫಾರೂಕ್ ಗಮನಕ್ಕೆ ತಂದಿದ್ದಾರೆ. ವಿಶ್ಲೇಷಣಾ ವರದಿ ಪ್ರಕಾರ ಮಿಲ್‌ನಿಂದ ಹೊರಹಾಕುತ್ತಿರುವ ಕಲುಷಿತ ನೀರು, ಸಮುದ್ರಕ್ಕೆ ಬಿಡುವ ನೀರಿನ ಶುದ್ಧತೆಯ ನಿರ್ದಿಷ್ಟ ಪ್ರಮಾಣದ ಒಳಗಿಲ್ಲ. ಶುದ್ಧೀಕರಿಸಿ ಸಮುದ್ರಕ್ಕೆ ಬಿಡುವಲ್ಲಿ ಸಾಕಷ್ಟು ಲೋಪಗಳಾಗಿವೆ. ಇದರಿಂದ ಜಲಚರಗಳಿಗೂ ತೊಂದರೆಯಾಗುತ್ತಿದೆ ಎಂದರು.
ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಕೈಗಾರಿಕಾ ವಲಯಕ್ಕೆ ಘಟಕಗಳನ್ನು ಸ್ಥಳಾಂತರಿಸಲು ಇಚ್ಛಿಸಿದರೆ ಸೂಕ್ತ ವ್ಯವಸ್ಥೆ ಮಾಡಲಾಗುವುದು. ರಿಯಾಯಿತಿ ಹಾಗೂ ಉತ್ತೇಜನಗಳನ್ನು ನೀಡಲಾಗುವುದು ಎಂದು ಕೈಗಾರಿಕಾ ಇಲಾಖೆ ಭರವಸೆ ನೀಡಿದೆ. ಚರ್ಚೆ ನಡೆಸಿದ ನಂತರ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.