ಬೆಂಗಳೂರು: ‘ಪಕ್ಷಕ್ಕಾಗಿ ಎಲ್ಲರೂ ಕೆಲಸ ಮಾಡಬೇಕು. ಪಕ್ಷದ ಕೆಲಸ ಸಮರ್ಪಕವಾಗಿ ಮಾಡದಿದ್ದರೆ ಅಂತಹವರನ್ನು ಮುಲಾಜಿಲ್ಲದೆ ಬದಲಾವಣೆ ಮಾಡುತ್ತೇವೆ’ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.
ಪಕ್ಷದ ಕೇಂದ್ರ ಕಚೇರಿಯಲ್ಲಿ ಭಾನುವಾರ ನಡೆದ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ, ಪಕ್ಷವನ್ನು ಬಲಪಡಿಸಲು ಎಲ್ಲರೂ ಕಠಿಣ ಪರಿಶ್ರಮ ಹಾಕಬೇಕು ಎಂದು ಸೂಚಿಸಿದರು.
‘ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಶೀಘ್ರದಲ್ಲೇ ಉಪಚುನಾವಣೆ ನಡೆಯಲಿದೆ. ಇದಕ್ಕಾಗಿ ಸದಸ್ಯತ್ವ ನೋಂದಣಿ ಅಭಿಯಾನ ನಡೆಸಬೇಕು. ಎಲ್ಲರೂ ದುಡಿಯಬೇಕು. ಪಕ್ಷಕ್ಕಾಗಿ ದುಡಿಯುದೇ ಇರುವವರನ್ನು ಸಹಿಸುವುದಿಲ್ಲ ಮತ್ತು ಅಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಹಿಂದೇಟು ಹಾಕುವ ಅವಶ್ಯಕತೆ ಇಲ್ಲ’ ಎಂದರು.
‘ಪಕ್ಷ ಸಂಘಟನೆಗೆ ಸಮಿತಿ ರಚಿಸಬೇಕು. ಅದರ ಸದಸ್ಯರೆಲ್ಲರೂ 31 ಜಿಲ್ಲೆಗಳಲ್ಲಿ ಪ್ರವಾಸ ನಡೆಸಬೇಕು. ಕಾರ್ಯಕರ್ತರ ಪಡೆ ಕಟ್ಟಬೇಕು. ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಈ ಪ್ರವಾಸದಲ್ಲಿ ಭಾಗಿಯಾಗಬೇಕು’ ಎಂದು ತಾಕೀತು ಮಾಡಿದರು.
ಪಕ್ಷ ಸಂಘಟನೆಯ ವಿಚಾರವನ್ನು ಪ್ರಧಾನವಾಗಿ ಚರ್ಚಿಸಲಾಯಿತಾದರೂ, ಪಕ್ಷದ ಹುದ್ದೆಗಳನ್ನು ನೀಡುವ ಸಂಬಂಧ ಅಸಮಾಧಾನ ವ್ಯಕ್ತವಾಗಿರುವ ಮತ್ತು ಈಚೆಗೆ ನಡೆದ ಸಭೆಗಳಲ್ಲಿ ಕೆಲ ನಾಯಕರು ಭಾಗಿಯಾಗದೇ ಇರುವ ಬಗ್ಗೆ ಸಭೆಯಲ್ಲಿ ಚರ್ಚೆಯಾಯಿತು ಎಂದು ಪಕ್ಷದ ಮೂಲಗಳು ಹೇಳಿವೆ.
ಪಕ್ಷದ ಕೆಲಸ ಮಾಡದೇ ಪದಾಧಿಕಾರಿಯಾಗಿ ಉಳಿಯಬೇಕು ಎಂದರೆ ಹೇಗೆ? ಈ ಮನಸ್ಥಿತಿ ಬದಲಾಗಬೇಕು. ಪಕ್ಷ ಸಂಘಟನೆಯಲ್ಲಿ ಕ್ರಿಯಾಶೀಲರಾಗಿ ಇದ್ದವರಷ್ಟೇ ಉಳಿಯುತ್ತಾರೆಎಚ್.ಡಿ.ಕುಮಾರಸ್ವಾಮಿ ಜಿಡಿಎಸ್ ರಾಜ್ಯಾಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.