ಬೆಂಗಳೂರು: ಸಸ್ಯಾಹಾರ ಹಾಗೂ ಮಾಂಸಾಹಾರದ ಅಡುಗೆಗೆ ಒಂದೇ ಚಮಚ ಬಳಸುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರ ಹೇಳಿಕೆಯನ್ನು ನಟ ಚೇತನ್ ಅವರು ಟೀಕಿಸಿದ್ದಾರೆ.
ಸುಧಾಮೂರ್ತಿಯವರು ಅತಿಯಾದ ಬಿಲ್ಡಪ್‌ನಿಂದ ಗುರುತಿಸಲ್ಪಟ್ಟ ಮತ್ತು ಅನರ್ಹವಾಗಿ ಗೌರವಿಸಲ್ಪಟ್ಟ ಸಾರ್ವಜನಿಕ ವ್ಯಕ್ತಿ ಎಂದು ಚೇತನ್ ಹೇಳಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, ‘ಸುಧಾ ಮೂರ್ತಿಯವರು ನಮ್ಮ ಬ್ರಾಹ್ಮಣ್ಯ-ಬಂಡವಾಳಶಾಹಿ ಸಮಾಜದಿಂದ ಅತಿಯಾದ ಬಿಲ್ಡಪ್‌ನಿಂದ ಗುರುತಿಸಲ್ಪಟ್ಟ ಮತ್ತು ಅನರ್ಹವಾಗಿ ಗೌರವಿಸಲ್ಪಟ್ಟ ಸಾರ್ವಜನಿಕ ವ್ಯಕ್ತಿ’ ಎಂದು ಹೇಳಿದ್ದಾರೆ.
ಅಲ್ಲದೇ ‘ಅವರು ತನ್ನ ಸೀಮಿತ, ಮಡಿವಂತಿಕೆಯ ಚಿಂತನೆಯನ್ನು ಬಹಿರಂಗಪಡಿಸುವ ಹೇಳಿಕೆಗಳನ್ನು ನಿರಂತರವಾಗಿ ಮಾಡುತ್ತಾರೆ ಎಂದು ಹೇಳಿರುವ ಚೇತನ್, ಸುಧಾ ಮೂರ್ತಿಯವರು ಹೆಚ್ಚು ಮಾತನಾಡಬೇಕು. ಅವರ ಆಸ್ತಿ ಜಗದಗಲ — ತಿಳಿವಳಿಕೆ ಚಮಚದಗಲ‘ ಎಂದು ಕುಹಕವಾಡಿದ್ದಾರೆ.
ಇತ್ತೀಚೆಗೆ 'ಖಾನೆ ಮೇ ಕ್ಯಾ ಹೈ' ಯೂಟ್ಯೂಬ್ ಚಾನೆಲ್‌ನ 'ಖಾನೆ ಮೇ ಕೌನ್ ಹೇ' ಎಂಬ ಸಂಚಿಕೆಯಲ್ಲಿ ಸುಧಾ ಮೂರ್ತಿ ಕಾಣಿಸಿಕೊಂಡಿದ್ದರು. ಈ ವೇಳೆ ತಾವು ಪಾಲಿಸುವ ಆಹಾರ ಕ್ರಮದ ಬಗ್ಗೆ ಮಾತನಾಡಿದ್ದರು.
'ನಾನೊಬ್ಬಳು ಶುದ್ಧ ಸಸ್ಯಹಾರಿ. ಮೊಟ್ಟೆ ಸಹಿತ ಯಾವುದೇ ಮಾಂಸಾಹಾರ ಮತ್ತು ಬೆಳ್ಳುಳ್ಳಿಯನ್ನು ಸೇವಿಸುವುದಿಲ್ಲ. ಸಸ್ಯಾಹಾರ–ಮಾಂಸಾಹಾರ ಭಕ್ಷ್ಯಗಳಿಗೆ ಒಂದೇ ಚಮಚ ಬಳಸುತ್ತಾರೆಯೇ ಎಂಬ ಆತಂಕ ನನ್ನ ಮನಸ್ಸನ್ನು ತುಂಬಾ ಕಾಡುತ್ತದೆ' ಎಂದು ಹೇಳಿದ್ದರು.
'ನಾನು ವಿದೇಶಕ್ಕೆ ಹೋದರೂ ಅಲ್ಲಿ ಸಸ್ಯಾಹಾರಿ ರೆಸ್ಟೋರೆಂಟ್‌ಗಳನ್ನು ಹುಡುಕುತ್ತೇನೆ. ಮನೆ ಊಟವನ್ನು ಹೆಚ್ಚಾಗಿ ಇಷ್ಟಪಡುತ್ತೇನೆ. ಪ್ರಯಾಣ ಮಾಡುವಾಗ ಮನೆಯಲ್ಲೇ ತಯಾರಿಸಿದ ಆಹಾರವನ್ನು ಕೊಂಡೊಯ್ಯುತ್ತೇನೆ' ಎಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.