ಬೆಂಗಳೂರು: ಉಸಿರಾಟದ ತೊಂದರೆಗೆ ಚಿಕಿತ್ಸೆಪಡೆಯಲು ಸಿಂಗಪುರಕ್ಕೆ ಹೋಗಿ ಬಂದ ಬಳಿಕ ರೆಬೆಲ್‌ಸ್ಟಾರ್ ಅಂಬರೀಷ್ ತಮ್ಮ ಆರೋಗ್ಯದ ಕುರಿತು ಸ್ವಲ್ಪ ಹೆಚ್ಚೇ ಚಿಂತಿತರಾಗಿದ್ದರು. ತೀರಾ ಇತ್ತೀಚೆಗೆ ತಮ್ಮ ಜಾತಕವನ್ನೂ ಹಲವು ಆಪ್ತರಿಗೆ ಕಳುಹಿಸಿಕೊಟ್ಟು, ಸಲಹೆ ಪಡೆದಿದ್ದರು ಎನ್ನುವುದು ಗೊತ್ತಾಗಿದೆ.
ಹಾಗೆ ನೋಡಿದರೆ ಅಂಬರೀಷ್ ಅಷ್ಟೇನೂ ಧಾರ್ಮಿಕ ಪ್ರವೃತ್ತಿಯವರಲ್ಲ. ದೇವರಿಗೆ ಶ್ರದ್ಧೆಯಿಂದ ಕೈಮುಗಿದು ತನ್ನ ಕೆಲಸದಲ್ಲಿ ನಿಷ್ಠೆಯಿಂದ ತೊಡಗಿಕೊಳ್ಳುವುದು ಅವರ ರೂಢಿ. ‘ನಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಿದರೆ ಅದೇ ದೇವರ ಪೂಜೆ’ ಎಂದು ಹಿಂದೊಮ್ಮೆ ಅವರ ಸಂದರ್ಶನದಲ್ಲಿ ಹೇಳಿದ್ದರು. ಆದರೆ ಇತ್ತೀಚೆಗೆ ತಮ್ಮ ಆರೋಗ್ಯ ಹದಗೆಡುವುದನ್ನು ಅರಿತಿದ್ದರಿಂದ ಸ್ವಲ್ಪ ಮಟ್ಟಿಗೆ ಆತ್ಮೀಯ ಗೆಳೆಯರ ಸಲಹೆಯಂತೆ ಹಲವರಿಗೆ ತಮ್ಮ ಜಾತಕವನ್ನು ತೋರಿಸಿದ್ದಾರೆ.
ಅಂಬರೀಷ್ ಪ್ರತಿ ವರ್ಷ ತಿರುಪತಿಗೆ ಒಮ್ಮೆ ಭೇಟಿ ನೀಡುತ್ತಿದ್ದರು. ಡಾ.ರಾಜ್‌ಕುಮಾರ್ ಅವರ ಜತೆಗೆ ಶಬರಿಮಲೆಗೆ ಹೋದದ್ದುಂಟು. ಬಳಿಕ ಆತ್ಮೀಯ ಗೆಳೆಯರಾದ ವಿಷ್ಣುವರ್ಧನ್ ಮತ್ತು ರಾಜೇಂದ್ರ ಸಿಂಗ್ ಬಾಬು ಜೊತೆಗೆ ಶಬರಿಮಲೆಗೆ ಹಲವು ಸಲ ಹೋಗಿಬಂದಿದ್ದಾರೆ. ಆದರೆ ಅವರಿಗೆ ದೈವಭಕ್ತಿ ಎನ್ನುವುದು ಎಂದೂ ಪ್ರದರ್ಶನದ ವಸ್ತು ಆಗಿರಲಿಲ್ಲ.
‘ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ನಾನೇ ಧರ್ಮಸ್ಥಳದಿಂದ ಪ್ರಸಾದ ತಂದುಕೊಟ್ಟಿದ್ದೆ. ಬಳಿಕ ಅವರೂ ಒಮ್ಮೆ ಧರ್ಮಸ್ಥಳಕ್ಕೆ ಹೋಗಿ ಬಂದಿದ್ದರು. ಹಲವು ಆಪ್ತರ ಬಳಿ ತಮ್ಮ ಜಾತಕ ತೋರಿಸಿ ಅವರು ಸಲಹೆ ಪಡೆದದ್ದು ನಿಜ. ನಮ್ಮ ತಂದೆಯವರು ಜಾತಕ ಚೆನ್ನಾಗಿ ನೋಡೋರು. ಅವರು ಹಿಂದೆ ವಿಷ್ಣು ಜಾತಕವನ್ನೂ ನೋಡಿದ್ದರು. ಮುಂದೆ ಈತ ಬಹಳ ದೊಡ್ಡ ಮನುಷ್ಯನಾಗ್ತಾನೆ ಅಂತ ಅವತ್ತೇ ತಂದೆಯವರು ಹೇಳಿದ್ದರು. ಇತ್ತೀಚೆಗೆ ಅವರ ಆರೋಗ್ಯ ಕೆಟ್ಟ ಬಳಿಕ ನಾನೂ ಬೇರೆಯವರಿಗೆ ಅವರ ಜಾತಕ ತೋರಿಸಿ ಮನೆಯಲ್ಲಿ ವಿಶೇಷ ಪೂಜೆ ಮಾಡಿಸಿದ್ದುಂಟು’ ಎನ್ನುತ್ತಾರೆ ಅಂಬರೀಷ್‌ರ ನಿಕಟ ಸ್ನೇಹಿತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು.‘ಆದರೆ ತನ್ನ ಆರೋಗ್ಯದ ಬಗ್ಗೆ ಇತರರು ಮಾಡುವ ಸಲಹೆಗಳನ್ನೆಲ್ಲ ಆತ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ’ ಎಂದೂ ಅವರು ಹೇಳುತ್ತಾರೆ.
ಸಿಂಗಪುರದಲ್ಲಿ ಚಿಕಿತ್ಸೆ ಪಡೆದು ಹುಷಾರಾಗಿ ಮರಳಿಬಂದ ಬಳಿಕ ಅಂಬರೀಷ್ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಬೇಕಿತ್ತು ಎನ್ನುವುದು ಅವರು ಕುಟುಂಬದ ಸದಸ್ಯರೊಬ್ಬರ ಮಾತು. ‘ರಜನೀಕಾಂತ್ ಕೂಡಾ ಸಿಂಗಪುರಕ್ಕೆ ಹೋಗಿ ಚಿಕಿತ್ಸೆ ಪಡೆದು ಬಂದಿದ್ದರು. ಆ ಬಳಿಕ ಅವರು ತಮ್ಮ ಊಟ ಇತ್ಯಾದಿಗಳ ಬಗ್ಗೆ ತುಂಬ ಎಚ್ಚರ ವಹಿಸಿದ್ದಾರೆ. ಆದರೆ ಅಂಬರೀಷ್ ಅವರದ್ದು ಸದಾ ಡೋಂಟ್ ಕೇರ್ ಸ್ವಭಾವ’ ಎಂದು ಅವರು ನೆನಪಿಸಿಕೊಂಡರು.
ಖೈಮಾ, ಮೈಸೂರು ಚಾಪ್ಸ್ ಮತ್ತು ಬಿರಿಯಾನಿ, ಅಂಬರೀಷ್ ಅವರ ಅತ್ಯಂತ ಇಷ್ಟದ ಭೋಜನ. ನಡುನಡುವೆ ಮದ್ಯಸೇವನೆಯನ್ನು ನಿಲ್ಲಿಸಿದ್ದರೂ ಪೂರ್ತಿ ಬಿಟ್ಟಿರಲಿಲ್ಲ. ಊಟಕ್ಕೆ ಕುಳಿತರೆ ನಾಲ್ಕು ಲಾರ್ಜ್ ಪೆಗ್ ವಿಸ್ಕಿ ಹೀರುವುದು ಅವರ ಸಹಜ ಆಹಾರ ಪದ್ಧತಿಯಾಗಿತ್ತು. ಆದರೆ ಸಿಗರೇಟ್ ಚಟದಂತೆ ಅಂಟಿಕೊಂಡಿತ್ತು. ಹಿಂದೆಲ್ಲ ಶಟ್ಲ್, ಟೆನಿಸ್, ಗಾಲ್ಫ್ ಆಡುತ್ತಿದ್ದು ಆರೋಗ್ಯವಂತರಾಗಿದ್ದ ಅವರು, ಕಳೆದ ನಾಲ್ಕೈದು ವರ್ಷಗಳಿಂದ ಆಟವಾಡುವುದನ್ನು ನಿಲ್ಲಿಸಿದ್ದರು. ಉಸಿರಾಟದ ತೊಂದರೆಯೇ ಅದಕ್ಕೆ ಕಾರಣ. ಹಾಗಿದ್ದೂ ಕೆಲವು ವಾರಗಳ ಹಿಂದೆ ಮಲೇಷ್ಯಾದಿಂದ ಬಂದಿದ್ದ ಕೆಲವು ಸ್ನೇಹಿತರ ಜೊತೆಗೆ ಗಾಲ್ಫ್ ಆಡಿದ್ದರು.
ಶನಿವಾರ ರಾತ್ರಿ ಮನೆಯಲ್ಲಿ ಸ್ವಲ್ಪ ಊಟ ಮಾಡಿ, ಸ್ವಲ್ಪ ರೆಸ್ಟ್ ತಗೋಬೇಕು ಎಂದು ಕೋಣೆಯತ್ತ ತೆರಳುತ್ತಿದ್ದ ಅವರು ಬಾಗಿಲ ಬಳಿಯೇ ಕುಸಿದು ಬಿದ್ದಿದ್ದರು. ಆಸ್ಪತ್ರೆಗೆ ಸಾಗಿಸುವುದರೊಳಗೆ ಅವರ ಪ್ರಾಣಹೋಗಿದೆ. ‘ಇತ್ತೀಚೆಗೆ ಹೀಗೆಯೇ ಎರಡು ಸಲ ಅವರು ಮನೆಯಲ್ಲಿ ಕುಸಿದು ಬಿದ್ದಿದ್ದರು’ ಎಂದೂ ಅವರ ಕುಟುಂಬದ ನಿಕಟವರ್ತಿಯೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.