ಬೆಂಗಳೂರು: ಅರ್ಜುನ್ ಸರ್ಜಾ ವಿರುದ್ಧ#MeToo ಆರೋಪ ಮಾಡಿದ್ದ ಶ್ರುತಿ ಹರಿಹರನ್, ತಾನು ಅನುಭವಿಸಿದ ನೋವು ಸಂಕಟವನ್ನು ಬಹಿರಂಗ ಪಡಿಸಿದರು. ಈ ಬಗ್ಗೆ ಹೋರಾಟಕ್ಕೆ ಸಿದ್ಧರಾದ ಶ್ರುತಿ ಅವರಿಗೆನಟ ಚೇತನ್ ‘ಫೈರ್’ ಸಂಸ್ಥೆ ಮೂಲಕ ಬೆಂಬಲ ವ್ಯಕ್ತಪಡಿಸಿದರು.
ಚೇತನ್ ಬೆಂಬಲಕ್ಕೆ ಅರ್ಜುನ್ ಸರ್ಜಾ ಅಭಿಮಾನಿಗಳು ಸೇರಿದಂತೆ ಅನೇಕರು ವಿರೋಧ ವ್ಯಕ್ತಪಡಿಸಿ, ಸಾಮಾಜಿಕ ಮಾಧ್ಯಮಗಳು ಹಾಗೂ ಬಹಿರಂಗವಾಗಿ ಟೀಕಿಸಿದರು. ಫೈರ್ ಸಂಸ್ಥೆಯ ಬಗೆಗೂ ಸಾಕಷ್ಟು ಚರ್ಚೆ ನಡೆದಿತ್ತು. ಅರ್ಜುನ್ ಸರ್ಜಾ ಮತ್ತು ಶ್ರುತಿ ಇಬ್ಬರೂ ಕಾನೂನು ಹೋರಾಟ ನಡೆಸುತ್ತಿದ್ದು, ಇದೀಗ ಚೇತನ್ ಫೈರ್ ಸಂಸ್ಥೆ ಉದ್ದೇಶದ ಬಗ್ಗೆ ಸ್ಪಷ್ಟ ಪಡಿಸಿದ್ದಾರೆ.
‘ಇಡೀ ಚಿತ್ರರಂಗ ಲೈಂಗಿಕ ದೌರ್ಜನ್ಯದ ವಿರುದ್ಧ ದನಿ ಎತ್ತಬೇಕು, ಲೈಂಗಿಕ ಕಿರುಕುಳ ಇರದ ಮಾದರಿ ಚಿತ್ರರಂಗ ಇರಬೇಕು ಎಂದು ನನ್ನ ಹೋರಾಟ ಶುರುವಾಯಿತು. ಇದು ನಾಲ್ಕು ವರ್ಷಗಳ ಹಿಂದೆ ನಾನು ಪ್ರಾರಂಭಿಸಿದ್ದು....ಇದು ಯಾರ ಪರ ಅಥವಾ ವಿರೋಧ ಅಲ್ಲ.
ನಾನು ಎಲ್ಲಿಯೂ ಅರ್ಜುನ್ ಸರ್ಜಾ ತಪ್ಪು ಮಾಡಿದ್ದಾರೆ, ತಪ್ಪು ಮಾಡಿಲ್ಲ ; ಪರ–ವಿರೋಧವಾಗಿ ನಾನು ಮಾತನಾಡಿಲ್ಲ. ಆದರೂ ವೈಯಕ್ತಿಕ ಆರೋಪ, ದಬ್ಬಾಳಿಕೆ ನಡೆಯುತ್ತಿವೆ...
ಪ್ರಿಯಾಂಕ ಉಪೇಂದ್ರ ಅವರು ಹೊರ ಬಂದಿದ್ದು ಐದಾರು ತಿಂಗಳ ಹಿಂದೆ. ವೈಯಕ್ತಿಕ ಕಾರಣಗಳಿಂದಾಗಿ ಅವರು ಸಂಸ್ಥೆಯ ಚಟುವಟಿಕೆ, ಸಭೆಗಳಲ್ಲಿ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕಾಗಿ ಅವರು ಫೈರ್‌ನಿಂದ ಹೊರಗುಳಿದಿದ್ದಾರೆ.’
ಹೋರಾಟದಿಂದ ಹಿಂದೆ ಸರಿಯಲಾರೆ
‘ಶ್ರುತಿ ಹರಿಹರನ್ ಮತ್ತು ಅರ್ಜುನ್ ಸರ್ಜಾ ಪ್ರಕರಣದ ಬಳಿಕ ನನ್ನ ತೇಜೋವಧೆ ನಡೆಯುತ್ತಿದೆ. ಸರ್ಜಾ ಬೆಂಬಲಿಗರ ಆರೋಪಗಳಿಗೆ ನಾನು ಆತ್ಮಸ್ಥೈರ್ಯ ಕಳೆದುಕೊಳ್ಳುವುದಿಲ್ಲ. ಅಮೆರಿಕಕ್ಕೆ ವಾಪಸ್ ಹೋಗುವುದಿಲ್ಲ. ಚಿತ್ರರಂಗದಲ್ಲಿಯೇ ಇದ್ದು ಲೈಂಗಿಕ ಕಿರುಕುಳದ ವಿರುದ್ಧ ಹೋರಾಟವನ್ನು ಮುಂದುವರಿಸುತ್ತೇನೆ’ ಎಂದು ನಟ ಚೇತನ್ ಹೇಳಿದರು.
‘ಅರ್ಜುನ್ ಸರ್ಜಾ ಅವರ ಮೇಲೆ ನನಗೆ ದ್ವೇಷವಿಲ್ಲ. ಅಪಾರ ಗೌರವವಿದೆ. ನಾನು ‘ಪ್ರೇಮಬರಹ’ ಚಿತ್ರಕ್ಕೆ ನಾಯಕನಾಗಿ ಆಯ್ಕೆಯಾಗಿದ್ದು ನಿಜ. ಆ ವೇಳೆ ಸರ್ಜಾ ನನಗೆ ತೆರಿಗೆ ಕಡಿತಗೊಳಿಸಿ ₹9 ಲಕ್ಷ ಮೊತ್ತದ ಚೆಕ್ ನೀಡಿದ್ದರು. ಈ ಹಣ ಹಿಂದಿರುಗಿಸಲು ಸಿದ್ಧನಿದ್ದೆ. ಆದರೆ, ಮತ್ತೊಂದು ಚಿತ್ರದಲ್ಲಿ ನಾವಿಬ್ಬರು ಜೊತೆಯಾಗಿ ಕೆಲಸ ಮಾಡೋಣ. ಹಣ ವಾಪಸ್ ನೀಡಬೇಡ ಎಂದಿದ್ದರು. ಈ ಹಣಕಾಸಿನ ವಿಚಾರದ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಲಾಗಿದೆ. ಮಂಡಳಿ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಸ್ಪಷ್ಟಪಡಿಸಿದರು.
‘ಮೀ– ಟೂ ಅಭಿಯಾನದ ಮೂಲಕ ಹಲವು ನಟಿಯರು ಕನ್ನಡ ಚಿತ್ರರಂಗವನ್ನು ಕಾಡುತ್ತಿರುವ ಲೈಂಗಿಕ ಕಿರುಕುಳ ಕಾಯಿಲೆಯ ಬಗ್ಗೆ ಸಾಕ್ಷಿಸಮೇತ ಮಾತನಾಡಿದರು. ಆದರೆ, ಚಿತ್ರರಂಗದ ಹಿರಿಯರು ಮಾತ್ರ ಧ್ವನಿ ಎತ್ತಲಿಲ್ಲ’ ಎಂದು ವಿಷಾದಿಸಿದರು.
‘ಶ್ರುತಿ ಹರಿಹರನ್ ಅವರದ್ದು ವೈಯಕ್ತಿಕ ವಿಚಾರ. ಆ ಪ್ರಕರಣ ನ್ಯಾಯಾಲಯದಲ್ಲಿದೆ. ಹಾಗಾಗಿ, ಅದರ ಬಗ್ಗೆ ಮಾತನಾಡುವುದಿಲ್ಲ. ಫೈರ್ ಸಂಸ್ಥೆಯು ಆಂತರಿಕ ಸಮಿತಿಯನ್ನು ಹೊಂದಿದೆ. ಸಂಸ್ಥೆಗೆ ಬೆಂಬಲ ನೀಡುವಂತೆ ವಾಣಿಜ್ಯ ಮಂಡಳಿ, ಕಲಾವಿದರ ಸಂಘಕ್ಕೆ ಕೋರಲಾಗಿದೆ. ನಿರ್ಮಾಪಕರು ಮತ್ತು ನಿರ್ದೇಶಕರ ಸಂಘಕ್ಕೂ ಪತ್ರ ಬರೆಯುತ್ತೇನೆ’ ಎಂದು ಹೇಳಿದರು.
ಚಿತ್ರರಂಗದ ಅಂಗಸಂಸ್ಥೆಗಳು ಆಂತರಿಕ ಸಮಿತಿ ರಚಿಸಿದರೆ ನಮ್ಮ ಅಭ್ಯಂತರವಿಲ್ಲ. ಈ ರೋಗ ನಿರ್ಮೂಲನೆಯಾಗಬೇಕು ಎಂಬುದೇ ನಮ್ಮ ಏಕೈಕ ಗುರಿ ಎಂದರು.
ದೂರು ದಾಖಲು
ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಸಂಬಂಧ ಆಂತರಿಕ ಸಮಿತಿಗೆ ದೂರು ಸಲ್ಲಿಕೆಯಾಗಿದೆ. ಪ್ರಕರಣದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮಕೈಗೊಳ್ಳುವಂತೆ ಚಲನಚಿತ್ರ ಕಾರ್ಮಿಕರ ಸಂಘಕ್ಕೆ ಶಿಫಾರಸು ಮಾಡಲಾಗುವುದು ಎಂದರು.
ನಟ ದಿಲೀಪ್ ನಟಿಗೆ ಲೈಂಗಿಕ ಕಿರುಕುಳ ನೀಡಿದ್ದು ಎಲ್ಲರಿಗೂ ಗೊತ್ತಿದೆ. ಮಲಯಾಳ ಚಿತ್ರರಂಗದ ‘ಅಮ್ಮ’ ಸಂಸ್ಥೆಯೂ ನಟನಿಗೆ ಬೆಂಬಲ ನೀಡಿತು. ಇದನ್ನು ಖಂಡಿಸಿ ಫೈರ್‌ನಿಂದ ಪತ್ರ ಬರೆಯಲು ತೀರ್ಮಾನಿಸಲಾಯಿತು. ದಿಲೀಪ್ ನನ್ನ ಸ್ನೇಹಿತ. ಹಾಗಾಗಿ, ಅಧ್ಯಕ್ಷೆಯಾಗಿ ಪತ್ರ ಬರೆಯುವುದಿಲ್ಲವೆಂದು ಪ್ರಿಯಾಂಕಾ ಉಪೇಂದ್ರ ಹೇಳಿದರು. ಬಳಿಕ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ವೈಯಕ್ತಿಕ ಸಮಸ್ಯೆ ಹಿನ್ನೆಲೆಯಲ್ಲಿ ಅವರು ಸಂಸ್ಥೆಯನ್ನು ತೊರೆದಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.