ಬೆಂಗಳೂರು: 'ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧನ ವಿಚಾರ ನಿಮಗೆ (ಮಾಧ್ಯಮ) ಏನು ಮಾಹಿತಿ ಇದೆಯೋ ನನಗೂ ಅದೇ ಮಾಹಿತಿಯಿದೆ. ಕೊಲೆಯಲ್ಲಿ ಭಾಗಿಯಾಗಿದ್ದಾರೆಂದು ದರ್ಶನ್ ಅವರನ್ನು ಬಂಧಿಸಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ತನಿಖೆಯಲ್ಲಿ ಏನು ವಿಚಾರಗಳು ಹೊರ ಬರುತ್ತದೆಯೊ ಅದರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ' ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, 'ಕಾನೂನು ಎಲ್ಲರಿಗೂ ಒಂದೇ. ದರ್ಶನ್ ಅವರಿಗೂ ಕಾನೂನು ಒಂದೇ. ಪರಮೇಶ್ವರವರಿಗೂ ಕಾನೂನು ಒಂದೇ. ಕಾನೂನನ್ನು ಯಾರೂ ಕೈಗೆತ್ತಿಕೊಳ್ಳಬಾರದು' ಎಂದರು.
'ರೇಣುಕಾಸ್ವಾಮಿ ತಪ್ಪು ಮಾಡಿದ್ದರೆ ಅವರ ಮೇಲೆ ಪೊಲೀಸರಿಗೆ ದೂರು ನೀಡಬಹುದಿತ್ತು. ಪೊಲೀಸರು ತನಿಖೆ ಮಾಡುತ್ತಿದ್ದರು. ಆದರೆ ಈಗ ಏನು ಮಾಹಿತಿ ಬರುತ್ತಿದೆಯೊ, ಅದರಿಂದ ಪ್ರಾಣ ಹೋಗಿದೆ. ಕಾನೂನಿನ ಪ್ರಕಾರ ಏನು ಕ್ರಮ ತೆಗೆದುಕೊಳ್ಳಬೇಕು ಅದನ್ನು ಪೊಲೀಸ್ ಇಲಾಖೆ ತೆಗೆದುಕೊಳ್ಳುತ್ತದೆ' ಎಂದೂ ಹೇಳಿದರು.
ಪ್ರಕರಣದಿಂದ ಬಚಾವಾಗಲು ದರ್ಶನ್ ಪ್ರಭಾವಿ ರಾಜಕಾರಣಿಗಳಿಗೆ ಕರೆ ಮಾಡಿದ್ದರೆಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ, 'ನನಗೆ ಗೊತ್ತಿದ್ದಂತೆ ಯಾರೂ ಪ್ರಯತ್ನ ಮಾಡಿಲ್ಲ. ನನ್ನ ಹತ್ತಿರ ಅಂತೂ ಯಾರು ಪ್ರಯತ್ನ ಮಾಡಿಲ್ಲ. ಸರ್ಕಾರದಿಂದ ನಾವ್ಯಾರು ಮಧ್ಯಪ್ರವೇಶ ಮಾಡಲ್ಲ' ಎಂದರು
'ರೇಣುಕಾಸ್ವಾಮಿ ಕುಟುಂಬದ ಪರವಾಗಿ ಸರ್ಕಾರ ಏನು ಮಾಡಬಹುದು ಎಂದು ಮುಖ್ಯಮಂತ್ರಿ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ' ಎಂದೂ ತಿಳಿಸಿದರು.
ಉನ್ನತಮಟ್ಟದ ತನಿಖೆಗೆ ಒತ್ತಾಯ ಕೇಳಿಬಂದ ಬಗ್ಗೆ ಪ್ರತಿಕ್ರಿಯಿಸಿದ ಅವರು, 'ಎಲ್ಲವನ್ನೂ ಸಿಬಿಐಗೆ ಕೊಡುವ ಅಗತ್ಯವಿಲ್ಲ. ಈಗ 13 ಮಂದಿಯನ್ನು ಬಂಧಿಸಿದ್ದೇವೆ. ಯಾರು ಮಾಡಿದ್ದಾರೆ, ಯಾಕೆ ಮಾಡಿದ್ದಾರೆ ಹೆಚ್ಚು ಕಡಿಮೆ ಎಲ್ಲ ವಿಚಾರಗಳು ಗೊತ್ತಾಗಿದೆ. ಬೇರೆ ತನಿಖಾ ಏಜೆನ್ಸಿಗಳಿಗೆ ಕೊಡುವ ಅಗತ್ಯ ಇಲ್ಲ. ಪ್ರಕರಣದ ಸಮಗ್ರ ವಿವರ ತನಿಖೆ ಸಂಪೂರ್ಣ ಆದ ಮೇಲೆ ಗೊತ್ತಾಗುತ್ತದೆ. ಅದಕ್ಕೂ ಮೊದಲು ನಾನು ಕೇಳೋದಿಲ್ಲ. ಪೊಲೀಸರು ಹೇಳುವುದಿಲ್ಲ' ಎಂದರು.
ರೌಡಿ ಶೀಟ್?
ದರ್ಶನ್ ಮೇಲೆ ರೌಡಿ ಶೀಟ್ ತೆರೆಯುವ ಬಗ್ಗೆ ಕೇಳಿದ ಪ್ರಶ್ನೆಗೆ, 'ಹಲವು ಪ್ರಕರಣಗಳಲ್ಲಿ ದರ್ಶನ್ ಭಾಗಿಯಾಗಿದ್ದಾರೆಂದು, ಮಾಧ್ಯಮಗಳಲ್ಲಿ ಸಾಕಷ್ಟು ಕೇಸ್ ಬಗ್ಗೆ ನಾನು ನೋಡಿದೆ. ಇದನ್ನು ಪೊಲೀಸರು ತನಿಖೆ ಮಾಡುತ್ತಾರೆ. ನಮ್ಮನ್ನು ಕೇಳಿ ಸೆಕ್ಷನ್ ಹಾಕುವುದಿಲ್ಲ. ತನಿಖೆಯಾದಮೇಲೆ ಏನು ಶಿಫಾರಸು ಮಾಡ್ತಾರೆಂದು ನೋಡೋಣ' ಎಂದರು.
'ರೇಣುಕಾಸ್ವಾಮಿ ದರ್ಶನ್ ಅಭಿಮಾನಿ ಎಂಬ ವಿಚಾರ ನನಗೆ ಗೊತ್ತಿಲ್ಲ ಅವರ ಅಭಿಮಾನಿ ಆಗಿದ್ದರು ಅನ್ನೋದನ್ನ ನಾನು ಪತ್ರಿಕೆಯಲ್ಲಿ ನೋಡಿದ್ದೆ ಅಷ್ಟೇ' ಎಂದರು
'ಕೊಲೆ ಆರೋಪಿಗಳಿಗೆ ಬಿರಿಯಾನಿ ತರಿಸಿ ಕೊಟ್ಟ ವಿಚಾರವೂ ನನಗೆ ಗೊತ್ತಿಲ್ಲ. ಹಾಗೆಂದು, ಊಟ ಇಲ್ಲದೆ ಸಾಯಿಸುವುದಕ್ಕೆ ಆಗಲ್ವಲ್ಲ. ಊಟ ತರಿಸಿ ಕೊಡುತ್ತಾರೆ. ಅದರಲ್ಲಿ ಬಿರಿಯಾನಿ ತರಿಸಿಕೊಟ್ರಾ..? ಚಿಕನ್ ತರಿಸಿಕೊಟ್ರಾ ಗೊತ್ತಿಲ್ಲ' ಎಂದರು.
ಸಿಎಂ ಭೇಟಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಗೃಹ ಸಚಿವ ಜಿ. ಪರಮೇಶ್ವರ ಚರ್ಚೆ ನಡೆಸಿದರು. ರಾಜ್ಯ ಪೋಲಿಸ್ ಮಹಾನಿರ್ದೇಶಕ ಅಲೋಕ್‌ಮೋಹನ್, ಗುಪ್ತಚರ ಇಲಾಖಾ ಮುಖ್ಯಸ್ಥ ಶರತ್ ಚಂದ್ರ, ಬೆಂಗಳೂರು ನಗರ ಪೋಲಿಸ್ ಆಯುಕ್ತ ದಯಾನಂದ್ ಕೂಡ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.