ADVERTISEMENT

ನಟ ದರ್ಶನ್‌ ಆರೋಗ್ಯ ವರದಿ ಹೈಕೋರ್ಟ್‌ಗೆ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2024, 16:07 IST
Last Updated 6 ನವೆಂಬರ್ 2024, 16:07 IST
ನಟ ದರ್ಶನ್‌
ನಟ ದರ್ಶನ್‌   

ಬೆಂಗಳೂರು: ಹೈಕೋರ್ಟ್‌ನ ನಿರ್ದೇಶನದ ಅನುಸಾರ ಚಿತ್ರದುರ್ಗದ ರೇಣುಕ ಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ನಟ ದರ್ಶನ್‌ ಆರೋಗ್ಯಕ್ಕೆ ಸಂಬಂಧಿಸಿದ ವೈದ್ಯಕೀಯ ವರದಿಯನ್ನು ಅವರ ಪರ ವಕೀಲರು ಹೈಕೋರ್ಟ್‌ಗೆ ಬುಧವಾರ ಸಲ್ಲಿಸಿದ್ದಾರೆ.

ದರ್ಶನ್‌ ಅವರಿಗೆ ಇತ್ತೀಚೆಗಷ್ಟೇ ಮಧ್ಯಂತರ ಜಾಮೀನು ನೀಡಿದ್ದ ನ್ಯಾಯಮೂರ್ತಿ ಎಸ್‌.ವಿಶ್ವಜಿತ್‌ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠವು, ‘ಯಾವಾಗ ಶಸ್ತ್ರಚಿಕಿತ್ಸೆ, ಎಷ್ಟು ದಿನ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ. ತದನಂತರ ಚಿಕಿತ್ಸೆ ಏನಾದರೂ ಇರಲಿದೆಯೇ ಎಂಬ ವಿವರಗಳನ್ನು ಜೈಲಿನಿಂದ ಬಿಡುಗಡೆಯಾದ ಒಂದು ವಾರದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು’ ಎಂಬ ಷರತ್ತು ವಿಧಿಸಿತ್ತು.

ಈ ಆದೇಶದ ಅಡಿಯಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಆರು ವಾರಗಳ ಷರತ್ತುಬದ್ಧ ಮಧ್ಯಂತರ ಜಾಮೀನು ಪಡೆದು ಜೈಲಿನಿಂದ ಹೊರಬಂದಿರುವ ದರ್ಶನ್‌, ಸದ್ಯ ಬೆಂಗಳೂರಿನ ಬಿಜಿಎಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ADVERTISEMENT

ಏತನ್ಮಧ್ಯೆ, ವರದಿಯ ಮುಖ್ಯಾಂಶಗಳ ಬಗ್ಗೆ ವಿವರಿಸಿರುವ ಮೂಲಗಳು, ‘ದರ್ಶನ್ ಆಪರೇಷನ್ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ಸದ್ಯ ಅವರಿಗೆ ಫಿಸಿಯೋಥೆರಪಿ ನೀಡಲಾಗುತ್ತಿದೆ. ಆದರೆ, ಫಿಸಿಯೋಥೆರಪಿಯೇ ಅಂತಿಮ ಅಲ್ಲ ಎನಿಸುತ್ತಿದೆ. ಆದಾಗ್ಯೂ, ಸದ್ಯದ ನೋವಿನಿಂದ ಅವರು ಚೇತರಿಕೆ ಕಾಣದೇ ಇದ್ದಲ್ಲಿ ಶಸ್ತ್ರಚಿಕಿತ್ಸೆ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ವರದಿಯಲ್ಲಿ ವಿವರಿಸಲಾಗಿದೆ’ ಎಂದು ಹೇಳಿವೆ.

‘ದರ್ಶನ್‌ಗೆ ಶಸ್ತ್ರಚಿಕಿತ್ಸೆ ವಿಧಾನಗಳ ಬಗ್ಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ಆದರೆ, ಅವರಿನ್ನೂ ಶಸ್ತ್ರಚಿಕಿತ್ಸೆಗೆ ಒಪ್ಪಿಗೆ ಸೂಚಿಸಿಲ್ಲ. ರೋಗಿ ಒಪ್ಪಿದ ನಂತರವೇ ಶಸ್ತ್ರಚಿಕಿತ್ಸೆಯ ದಿನಾಂಕದ ಬಗ್ಗೆ ಅಂತಿಮ ನಿರ್ಧಾರ ಮಾಡಲಾಗುವುದು ಎಂದು ಬಿಜಿಎಸ್ ಆಸ್ಪತ್ರೆಯ ಡಾ.ನವೀನ್ ನೀಡಿರುವ ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ’ ಎಂದು ಮೂಲಗಳು ಹೇಳಿವೆ.

ಪವಿತ್ರಾಗೌಡ ಜಾಮೀನು ವಿಚಾರಣೆ: ಇದೇ ಪ್ರಕರಣದ ಮೊದಲ ಆರೋಪಿ ಪವಿತ್ರಾಗೌಡ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ನ್ಯಾಯಮೂರ್ತಿ ಎಸ್‌.ವಿಶ್ವಜಿತ್‌ ಶೆಟ್ಟಿ ಅವರ ಏಕಸದಸ್ಯ ನ್ಯಾಯಪೀಠದಲ್ಲಿ ಗುರುವಾರ (ನ.7) ವಿಚಾರಣೆಗೆ ನಿಗದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.