ADVERTISEMENT

ಜನಸಾಹಿತ್ಯ ಸಮ್ಮೇಳನ ಯಶಸ್ವಿಯಾಗಲೆಂದು ನಟ ಕಿಶೋರ್‌ ಶುಭ ಹಾರೈಕೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2023, 3:15 IST
Last Updated 7 ಜನವರಿ 2023, 3:15 IST
   

ಬೆಂಗಳೂರು: ಹಾವೇರಿಯ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪರ್ಯಾಯವಾಗಿ ಬೆಂಗಳೂರಿನಲ್ಲಿ ಆಯೋಜನೆಗೊಂಡಿರುವ ‘ಜನಸಾಹಿತ್ಯ ಸಮ್ಮೇಳನ’ಕ್ಕೆ ಬಹುಭಾಷಾ ನಟ ಕಿಶೋರ್‌ ಕುಮಾರ್‌ ಶುಭ ಹಾರೈಸಿ ಬೆಂಬಲ ಸೂಚಿಸಿದ್ದಾರೆ.

ಹಾವೇರಿಯಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತಾರತಮ್ಯ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಮುಸ್ಲಿಂ ಸಮುದಾಯ ಮತ್ತು ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ನೀಡಿಲ್ಲ ಎಂಬ ದೂರುಗಳಿವೆ. ಹೀಗಾಗಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರತಿಯಾಗಿ ಬೆಂಗಳೂರಿನಲ್ಲಿ ಇದೇ 8ರಂದು ಜನ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಪ್ರಕಟಿಸಿರುವ ಕಿಶೋರ್‌ ಕುಮಾರ್‌, ‌ಜನಸಾಹಿತ್ಯ ಸಮ್ಮೇಳನ ಜನೋತ್ಸವವಾಗಿ ಯಶಸ್ವಿಯಾಗಲೆಂಬ ಹಾರೈಸುವುದಾಗಿ ಹೇಳಿದ್ದಾರೆ.

ADVERTISEMENT

‘ಆಳುವ ಅರೆಮನೆಗೆ ಸೀಮಿತವಾಗಿದ್ದ ಸಾಹಿತ್ಯ, 12ನೇ ಶತಮಾನದ ವಚನಕಾರರ ಬಂಡಾಯದಿಂದ ಜನಸಾಹಿತ್ಯ ಕ್ರಾಂತಿಯಾದ ಹಾಗೆ, ಒಡೆದಾಳುವ ನಿರಂಕುಶ ಧರ್ಮಾಂಧ ರಾಜಕಾರಣದ ಸಂಕೋಲೆಯಿಂದ ಮುಕ್ತವಾಗಿ, ಕನ್ನಡ ನಾಡಿನ ಅಸ್ಮಿತೆಯ, ಸಾಂಸ್ಕೃತಿಕ ಜೀವಂತಿಕೆಯ, ಸೃಜನಶೀಲ ಜೀವಶಕ್ತಿಯ, ಜೀವ ಪ್ರೀತಿಯ ಸಂಕೇತವಾಗಿ, ಜನಸಾಹಿತ್ಯ ಸಮ್ಮೇಳನ ಜನೋತ್ಸವವಾಗಿ ಯಶಸ್ವಿಯಾಗಲೆಂಬ ಹಾರೈಕೆ’ ಎಂದು ಅವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.