ಬೆಂಗಳೂರು: ‘ನ್ಯಾಯದ ಮೇಲೆ ಎಲ್ಲರಿಗೂ ನಂಬಿಕೆ ಮೂಡಬೇಕಾದರೆ ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಯುತ ತೀರ್ಪು ಹೊರಬರಬೇಕು. ಅಪರಾಧಿಗೆ ಶಿಕ್ಷೆಯಾದರೆ ಚಿತ್ರರಂಗ ಖುಷಿಪಡುತ್ತದೆ’ ಎಂದು ನಟ ಕಿಚ್ಚ ಸುದೀಪ್ ಹೇಳಿದರು.
ಭಾನುವಾರ ಕಲಾವಿದರ ಸಂಘದಲ್ಲಿ ಕಾರ್ಯಕ್ರಮವೊಂದರ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದರ್ಶನ್ ಹೆಸರನ್ನು ನೇರವಾಗಿ ಪ್ರಸ್ತಾಪಿಸದೆ ಪ್ರಕರಣದ ಕುರಿತು ಚಾಟಿ ಬೀಸಿದರು.
‘ಮಾಧ್ಯಮದವರು ತೋರಿಸುತ್ತಿರುವುದನ್ನು ನೋಡಿ ವಿಚಾರ ತಿಳಿದುಕೊಳ್ಳುತ್ತಿದ್ದೇವೆ. ಈ ಕೊಲೆ ಪ್ರಕರಣದಲ್ಲಿ ಮಾಧ್ಯಮದವರು ಮತ್ತು ಪೊಲೀಸ್ ಸಿಬ್ಬಂದಿ ಬಹಳ ಪ್ರಯತ್ನ ಹಾಕಿ ಸತ್ಯಾಂಶ ಹೊರತರಲು ಸಾಕಷ್ಟು ಕೆಲಸ ಮಾಡುತ್ತಿದ್ದೀರಿ. ಅದರಲ್ಲಿ ಎರಡನೇ ಮಾತೇ ಇಲ್ಲ’ ಎಂದರು.
‘ಆ ಕುಟುಂಬಕ್ಕೆ ನ್ಯಾಯ ಸಿಗಬೇಕು. ಆ ಹೆಣ್ಣುಮಗುವಿಗೆ ನ್ಯಾಯ ಸಿಗಬೇಕು. ಬಾಳಿ ಬದುಕಬೇಕಾದ ರೇಣುಕಸ್ವಾಮಿ ಅವರು ಎಲ್ಲೋ ರಸ್ತೆಯಲ್ಲಿ ಆ ರೀತಿ ಬಿದ್ದಿದ್ದರಲ್ಲ, ಅವರಿಗೆ ನ್ಯಾಯ ಸಿಗಬೇಕು. ಹುಟ್ಟಬೇಕಾಗಿರುವ ಆ ಮಗುವಿಗೆ ನ್ಯಾಯ ಸಿಗಬೇಕು’ ಎಂದರು.
‘ಮುಖ್ಯಮಂತ್ರಿಗಳೇ ಈ ಪ್ರಕರಣದ ಬಗ್ಗೆ ಹಟ ಹಿಡಿದು ಕುಳಿತಿದ್ದಾರೆ ಎಂಬ ಸುದ್ದಿ ನೋಡಿದೆ. ಕರ್ನಾಟಕದ ದೊಡ್ಡ ಸ್ಥಾನದಲ್ಲಿರುವ ಅವರು, ಮಾಧ್ಯಮದವರು ಹಾಗೂ ಪೊಲೀಸರು ಸರಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದಾಗ, ಕಾಮನ್‌ಮ್ಯಾನ್ ಆಗಿ ನಾನು ಅವರ ಪರ, ಇವರ ಪರ ಎಂದು ಮಾತನಾಡುವುದು ತಪ್ಪಾಗುತ್ತದೆ. ವಿರುದ್ಧವಾಗಿ ಮಾತನಾಡಿದರೂ ತಪ್ಪಾಗುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.