ADVERTISEMENT

ಬರ್ತ್‌ಡೇ ಬಂದಾಗಲೆಲ್ಲ ಭಯವಾಗುತ್ತಿದೆ: ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಯಶ್

​ಪ್ರಜಾವಾಣಿ ವಾರ್ತೆ
Published 8 ಜನವರಿ 2024, 15:33 IST
Last Updated 8 ಜನವರಿ 2024, 15:33 IST
<div class="paragraphs"><p>ಮೃತ ಯುವಕರ ಪೋಷಕರಿಗೆ ನಟ ಯಶ್‌ ಸಾಂತ್ವನ ಹೇಳಿದರು.</p></div>

ಮೃತ ಯುವಕರ ಪೋಷಕರಿಗೆ ನಟ ಯಶ್‌ ಸಾಂತ್ವನ ಹೇಳಿದರು.

   

ಲಕ್ಷ್ಮೇಶ್ವರ (ಗದಗ ಜಿಲ್ಲೆ): ನಟ ಯಶ್‌ ಜನ್ಮದಿನದ ಅಂಗವಾಗಿ ಅವರ ಅಭಿಮಾನಿಗಳು ಕಟೌಟ್‌ ನಿಲ್ಲಿಸಲು ಸಿದ್ಧತೆ ನಡೆಸಿದ್ದ ವೇಳೆ ವಿದ್ಯುತ್‌ ಪ್ರವಹಿಸಿ ಮೂವರು ಯುವಕರು ಮೃತಪಟ್ಟ ಘಟನೆ ತಾಲ್ಲೂಕಿನ ಸೂರಣಗಿ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.

ಯಶ್‌ ಅಭಿಮಾನಿಗಳಾದ ಮುರಳಿ ನಡುವಿನಮನೆ (20), ನವೀನ ಗಾಜಿ (19) ಹಾಗೂ ಹನುಮಂತಪ್ಪ ಹರಿಜನ (21) ಮೃತಪಟ್ಟ ಯುವಕರು.

ADVERTISEMENT

ಅಭಿಮಾನಿಗಳ ಸಾವಿನ ಸುದ್ದಿ ಕೇಳಿ ಆಘಾತಕ್ಕೆ ಒಳಗಾದ ರಾಕಿಂಗ್‌ ಸ್ಟಾರ್‌ ಯಶ್‌ ಪ್ರವಾಸ ರದ್ದುಗೊಳಿಸಿ, ಸೋಮವಾರ ಸೂರಣಗಿ ಗ್ರಾಮಕ್ಕೆ ಬಂದರು. ಯಶ್‌ ಅವರನ್ನು ನೋಡಿದ ತಕ್ಷಣ ಕುಟುಂಬಸ್ಥರ ದುಃಖದ ಕಟ್ಟೆಯೊಡೆಯಿತು. ಮಕ್ಕಳನ್ನು ಕಳೆದುಕೊಂಡು ಆಘಾತಕ್ಕೆ ಒಳಗಾಗಿದ್ದ ಪೋಷಕರನ್ನು ಕಂಡು ಯಶ್‌ ಕೂಡ ಭಾವುಕರಾದರು.

ಲಕ್ಷ್ಮೇಶ್ವರ ತಾಲ್ಲೂಕಿನ ಸೂರಣಗಿಯ ಅಂಬೇಡ್ಕರ್‌ ನಗರದ ಯಶ್‌ ಅಭಿಮಾನಿಗಳು ಜನ್ಮದಿನಾಚರಣೆ ಅಂಗವಾಗಿ ಬೃಹತ್‌ ಕಟೌಟ್‌ ನಿಲ್ಲಿಸಲು ಸಿದ್ಧತೆ ನಡೆಸಿದ್ದರು. ಯಶ್‌ ಅವರ ಚಿತ್ರವಿದ್ದ 20 ಅಡಿ ಎತ್ತರದ ಬ್ಯಾನರ್‌ ಅನ್ನು ಮೆಟಲ್‌ ಫ್ರೇಮ್‌ನಿಂದ ಬಿಗಿಗೊಳಿಸಲಾಗಿತ್ತು. ಬಳಿಕ ಅದನ್ನು ಎರಡು ದೊಡ್ಡ ಮರದ ಕಂಬಗಳಿಗೆ ಕಟ್ಟಿ ಮೇಲೆತ್ತಿ ನಿಲ್ಲಿಸುವ ಸಂದರ್ಭದಲ್ಲಿ ವಿದ್ಯುತ್‌ ತಂತಿಗೆ ಮೆಟಲ್‌ ಫ್ರೇಮ್‌ ತಾಗಿ, ವಿದ್ಯುತ್ ಪ್ರವಹಿಸಿ ಮೂವರು ಯುವಕರು ಮೃತಪಟ್ಟಿದ್ದಾರೆ. ಜತೆಗೆ ಮೂರು ಮಂದಿ ಯುವಕರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ದುರ್ಘಟನೆಯ ವಿಡಿಯೊ ವೀಕ್ಷಿಸಿದ ಸಾವಿರಾರು ನೆಟ್ಟಿಗರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

ಅಭಿಮಾನಿಗಳ ಸಾವಿನ ಸುದ್ದಿ ಕೇಳಿ ಸೂರಣಗಿಗೆ ಬಂದ ನಟ ಯಶ್‌, ಮೊದಲಿಗೆ ಮುರಳಿ ಮನೆಗೆ ಭೇಟಿ ನೀಡಿದರು. ಅವರ ತಂದೆ ಮಗ ಮೃತಪಟ್ಟ ಘಟನೆಯನ್ನು ವಿವರಿಸುವಾಗ ಯಶ್‌ ಕಣ್ಣುಗಳಲ್ಲಿ ದುಃಖ ಮನೆಮಾಡಿತ್ತು. ಬಳಿಕ ನವೀನ ಮತ್ತು ಹನುಮಂತಪ್ಪ ಅವರ ಮನೆಗಳಿಗೆ ತೆರಳಿ ಸಾಂತ್ವನ ಹೇಳಿದರು.

‘ಯಶ್‌ ಬರ್ತ್‌ಡೇ ಇದೆ ಅಂತ ನನಗೆ ಹೊಸ ಸೀರೆ ತಂದಿದ್ದ. ಸೋಮವಾರ ಸಿಹಿ ಹಂಚಿ, ಊಟ ಹಾಕಿಸುವೆ ಅಂತ ಹೇಳಿದ್ದ. ಭಾನುವಾರ ಬೆಳಿಗ್ಗೆಯಷ್ಟೇ ಹಿಂಗೆಲ್ಲಾ ಮಾತನಾಡಿದ್ದ ಹನುಮಂತ ಈಗ ಇಲ್ಲ. ಅವನಿಲ್ಲ ಎಂಬ ನೋವು ಹೇಗೆ ತಡೆದುಕೊಳ್ಳಲಿ’ ಎಂದು ಕುಟುಂಬದವರು ಕಣ್ಣೀರು ಹಾಕಿದರು. ಆಗ, ಯಶ್‌ ಅವರ ಪೋಷಕರು ಹಸ್ತ ಹಿಡಿದು ಕಣ್ಣೀರಾದರು.

ವಿದ್ಯುತ್‌ ಪ್ರವಹಿಸಿ ಮೃತಪಟ್ಟ ಮೂವರು ಯುವಕರನ್ನು ಸೋಮವಾರ ಸಾಮೂಹಿಕವಾಗಿ ಅಂತ್ಯ ಸಂಸ್ಕಾರ ಮಾಡಲಾಯಿತು. ಈ ವೇಳೆ ಗ್ರಾಮದಲ್ಲಿ ಶೋಕ ಮಡುಗಟ್ಟಿತ್ತು. ಮೃತ ಯುವಕರ ಕುಟುಂಬಕ್ಕೆ ರಾಜ್ಯ ಸರ್ಕಾರ ತಲಾ ₹2 ಲಕ್ಷ ಹಾಗೂ ಗಾಯಾಳುಗಳ ಕುಟುಂಬಕ್ಕೆ ₹50 ಸಾವಿರ ಪರಿಹಾರ ಘೋಷಣೆ ಮಾಡಿದೆ.

ಶಿರಹಟ್ಟಿ ಮೀಸಲು ಕ್ಷೇತ್ರದ ಶಾಸಕ ಡಾ. ಚಂದ್ರು ಲಮಾಣಿ ವೈಯಕ್ತಿಕವಾಗಿ ಮೃತ ಕುಟುಂಬಗಳಿಗೆ ತಲಾ ₹25 ಸಾವಿರ ಹಣ ನೀಡಿದ್ದಾರೆ. ಜತೆಗೆ ಕಾಂಗ್ರೆಸ್‌ ಮುಖಂಡ ಆನಂದ ಗಡ್ಡದೇವರ ಮಠ ಅವರ ಅಭಿಮಾನಿ ಸಂಘದವರು ಮೃತರ ಕುಟುಂಬಗಳಿಗೆ ತಲಾ ₹50 ಸಾವಿರ ಪರಿಹಾರ ಘೋಷಣೆ ಮಾಡಿದ್ದಾರೆ.

‘ಬರ್ತ್‌ಡೇ ಅಂದರೆ ಭಯ ಶುರುವಾಗಿದೆ’

‘ಬರ್ತ್‌ಡೇ ಅಂದರೆ ನನಗೀಗ ಭಯ ಶುರು ಆಗುತ್ತಿದೆ. ನಿಜ ಹೇಳಬೇಕು ಅಂದರೆ, ನನ್ನ ಬಗ್ಗೆ ನನಗೆ ಅಸಹ್ಯ ಆಗಿ ಬಿಟ್ಟಿದೆ. ನನ್ನ ಅಭಿಮಾನಿಗಳು ಬ್ಯಾನರ್‌, ಕಟೌಟ್‌ ನಿಲ್ಲಿಸಿ ಅಭಿಮಾನ ವ್ಯಕ್ತಪಡಿಸಬೇಕು ಎಂದು ನಾನೂ ಯಾವತ್ತೂ ಇಷ್ಟಪಡುವುದಿಲ್ಲ’ ಎಂದು ನಟ ಯಶ್‌ ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

‘ಕೋವಿಡ್‌ ಹೆಚ್ಚುತ್ತಿದೆ ಎಂಬ ಕಾರಣಕ್ಕೆ ನಾನು ಈ ವರ್ಷ ಜನರಿಂದ ದೂರ ಉಳಿದು ಕುಟುಂಬದ ಸದಸ್ಯರ ಜತೆಗಷ್ಟೇ ಜನ್ಮದಿನ ಆಚರಿಸಲು ನಿರ್ಧರಿಸಿದ್ದೆ. ಜತೆಗೆ ಅಭಿಮಾನಿಗಳು ಕೇವಲ ನನ್ನ ಬಗ್ಗೆ ಯೋಚನೆ ಮಾಡಿಕೊಂಡು ಇರಬಾರದು. ಅವರೂ ನಮ್ಮಂತೆ ಬೆಳೆಯಬೇಕು ಎಂಬ ಆಸೆಯಿಂದ ನಾನು ಆದಷ್ಟೂ ಜನರಿಂದ ದೂರವೇ ಉಳಿಯಲು ಬಯಸುವೆ. ಆದರೂ, ಪ್ರತಿವರ್ಷ ಈ ಬಗೆಯ ಒಂದಿಲ್ಲೊಂದು ಘಟನೆಗಳು ನಡೆಯುತ್ತಲೇ ಇರುತ್ತವೆ. ಈ ಕಾರಣಕ್ಕೆ ಜನ್ಮದಿನಾಚರಣೆ ಅಂದರೆ ಭಯ ಶುರುವಾಗಿದೆ’ ಎಂದರು.

ಮೃತ ಯುವಕರ ಕುಟುಂಬಕ್ಕೆ ನೆರವಾಗುವಿರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಸೂತಕದ ಮನೆಯಲ್ಲಿ ನಿಂತು ಏನು ಬೇಕಾದರೂ ಘೋಷಣೆ ಮಾಡಬಹುದು; ಅದೇನು ದೊಡ್ಡದಲ್ಲ. ಆದರೆ, ಮನೆಗೆ ಆಧಾರಸ್ತಂಭವಾಗಿದ್ದ ಮಕ್ಕಳನ್ನು ಕಳೆದುಕೊಂಡಿರುವ ಅವರ ಕುಟುಂಬಕ್ಕೆ ನಿಜವಾಗಿ ಏನು ಅವಶ್ಯಕತೆ ಇದೆ ಎಂಬುದನ್ನು ಅರಿತುಕೊಂಡು ಅವರಿಗೆ ನೆರವಾಗುವೆ’ ಎಂದು ತಿಳಿಸಿದರು.

‘ಅಭಿಮಾನಿಗಳ ತಂದೆ ತಾಯಿಗಳ ಮೇಲಿನ ಗೌರವದಿಂದ ಮನೆಗೆ ಭೇಟಿ ಕೊಟ್ಟು ಸಾಂತ್ವನ ಹೇಳಿರುವೆ. ಯಾರೇ ಆಗಲಿ ಅಭಿಮಾನ ತೋರಿಸಲು ಹೋಗಿ ಜೀವಕ್ಕೆ ಅಪಾಯ ಮಾಡಿಕೊಳ್ಳಬೇಡಿ. ಕಟೌಟ್‌, ಬ್ಯಾನರ್‌ ಬೇಡವೇ ಬೇಡ. ಕಾರಿನಲ್ಲಿ ಹೋಗುವಾಗಿ ಚೇಸ್‌ ಮಾಡಿಕೊಂಡು ಬರುವುದನ್ನೂ ಬಿಟ್ಟುಬಿಡಿ. ಮನೆಯಲ್ಲಿರುವ ತಂದೆ ತಾಯಿಗಳ ಬಗ್ಗೆ ಗಮನ ಕೊಡಿ’ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.