ADVERTISEMENT

ಡಿಕೆಶಿ ಬೆಂಬಲಿಗರ ವಿರುದ್ಧ ರಮ್ಯಾ ಸಿಡುಕು: ‘ಗುಡ್ ಕಾಪಿ ಪೇಸ್ಟ್ ಜಾಬ್‘ ಎಂದ ನಟಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಮೇ 2022, 7:01 IST
Last Updated 12 ಮೇ 2022, 7:01 IST
ರಮ್ಯ ಹಾಗೂ ಡಿಕೆ ಶಿವಕುಮಾರ್
ರಮ್ಯ ಹಾಗೂ ಡಿಕೆ ಶಿವಕುಮಾರ್   

ಬೆಂಗಳೂರು; ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಕ್ಕೆ ಡಿಕೆಶಿ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ರಮ್ಯ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

'ಪಿಎಸ್‌ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ಹಾಗೂ ಸಚಿವ ಅಶ್ವತ್ಥ್ ನಾರಾಯಣ್ ಅವರು ಗೌಪ್ಯವಾಗಿ ಭೇಟಿಯಾಗಿದ್ದರು' ಎಂದು ಡಿಕೆಶಿ ಹೇಳಿದ್ದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸುವ ರೀತಿಯಲ್ಲಿ ಟ್ವೀಟ್ ಮಾಡಿದ್ದ ರಮ್ಯಾ ಅವರು, ‘ಬೇರೆ ಬೇರೆ ಪಕ್ಷಗಳ ನಾಯಕರು ಭೇಟಿಯಾಗುವುದು ಸಹಜ, ಪರಸ್ಪರ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ. ಬೇರೆ ಬೇರೆ ಪಕ್ಷಗಳ ನಾಯಕರ ಕುಟುಂಬಗಳ ನಡುವೆ ಮದುವೆ ಸಂಬಂಧಗಳು ಏರ್ಪಟ್ಟಿವೆ. ಹಾಗಿರುವಾಗ, ಕಾಂಗ್ರೆಸ್‌ನ ಹಿರಿಯ ನಾಯಕ ಎಂ.ಬಿ. ಪಾಟೀಲ್ ಮತ್ತು ಅಶ್ವತ್ಥ ನಾರಾಯಣ ಅವರ ಭೇಟಿ ಬಗ್ಗೆ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿರುವುದು ಅಚ್ಚರಿ ಎನಿಸುತ್ತಿದೆ.ಇವುಗಳನ್ನೆಲ್ಲ ಬಿಟ್ಟು ಕಾಂಗ್ರೆಸ್ ಪಕ್ಷದ ನಾಯಕರು ಒಗ್ಗಟ್ಟಾಗಿ ಚುನಾವಣೆ ಎದುರಿಸಬಾರದೇ?’ ಎಂದಿದ್ದರು.

ADVERTISEMENT

ಈ ಹೇಳಿಕೆ ಬೆನ್ನಲ್ಲೇ ಟ್ವಿಟರ್ ಸೇರಿದಂತೆ ಅನೇಕ ಸಾಮಾಜಿಕ ಜಾಲತಾಣಗಳಲ್ಲಿ ಡಿಕೆಶಿ ಬೆಂಬಲಿಗರು ರಮ್ಯ ಅವರ ಅವಹೇಳನ ಮಾಡುವ ಟ್ವೀಟ್ ಮಾಡುತ್ತಿದ್ದಾರೆ. ಈ ಟ್ವೀಟ್‌ಗಳನ್ನು ಹಂಚಿಕೊಂಡಿರುವ ರಮ್ಯ ಅವರು ಡಿಕೆಶಿ ಬೆಂಬಲಿಗರ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೆಪಿಸಿಸಿ ಸಾಮಾಜಿಕ ಜಾಲತಾಣಗಳ ವಿಭಾಗದ ಅಧ್ಯಕ್ಷ ಬಿ.ಆರ್. ನಾಯ್ಡು ಅವರು, ‘ರಮ್ಯಾ ಅವರೇ ನಿಮಗೆ ಇವಾಗ ಎಚ್ಚರವಾಯಿತಾ? ಇಷ್ಟು ದಿನ ಎಲ್ಲಿದ್ದಿರಿ? ನಟ ಅಂಬರೀಷ ಅವರು ನಿಧನರಾಗಿದ್ದಾಗ ಕೂಡ ನೀವು ಬಂದಿರಲಿಲ್ಲ. ದಯವಿಟ್ಟು ಇದನ್ನು ಮಂಡ್ಯದ ಮತದಾರರಿಗೆ ತಿಳಿಸುವಿರಾ?’ ಎಂದು ಕೇಳಿದ್ದರು.

ಇದೇ ಟ್ವೀಟ್‌ನ್ನು ರಿಟ್ವೀಟ್ ಮಾಡಿ ಬಿ.ಆರ್. ನಾಯ್ಡು ಅವರಿಗೆರಮ್ಯಾ ತಿರುಗೇಟು ನೀಡಿದ್ದಾರೆ. ‘ಗುಡ್ ಕಾಪಿ ಪೇಸ್ಟ್ ಜಾಬ್’ (ನಕಲು ಮಾಡುವುದು) ಎಂದು ಕಿಚಾಯಿಸಿದ್ದಾರೆ.

‘ಅಲ್ಲದೇ ಅವಹೇಳನಕಾರಿ ಸಂದೇಶಗಳನ್ನು ‘ಕಚೇರಿ’ಯಿಂದ ನಾಯಕರಿಗೆ ಹಾಗೂ ಕಾರ್ಯಕರ್ತರಿಗೆ ಕಳುಹಿಸಿ ನನ್ನನ್ನು ಟ್ರೋಲ್ ಮಾಡಿ ಎಂದು ಹೇಳಿಕೊಡಲಾಗಿದೆ. ನೀವೇನು ಆ ತೊಂದರೆ ತೆಗೆದುಕೊಳ್ಳಬೇಡಿ, ನಾನೇ ಮಾಡುವೆ’ ಎಂದು ನಿಂದನಾಕಾರಿ ಸಂದೇಶಗಳ ಸ್ಕ್ರೀನ್ ಶಾಟ್ಹಾಕಿಕೊಂಡಿದ್ದಾರೆ.

ಡಿಕೆಶಿ ಹೇಳಿದ್ದೇನು?

ಪಿಎಸ್ಐ ನೇಮಕಾತಿ ಅಕ್ರಮ, ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅಕ್ರಮಗಳಲ್ಲಿ ತಮ್ಮ ವಿರುದ್ಧ ವಾಗ್ದಾಳಿ ನಡೆಸದಂತೆ ಮನವೊಲಿಸಲು ಸಚಿವ ಅಶ್ವತ್ಥ ನಾರಾಯಣ ಅವರು, ಕಾಂಗ್ರೆಸ್ ನಾಯಕ ಎಂ.ಬಿ. ಪಾಟೀಲರನ್ನು ಭೇಟಿಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆರೋಪಿಸಿದ್ದರು.

ಆದರೆ, ಅಶ್ವತ್ಥ ನಾರಾಯಣ ಮತ್ತು ಎಂ.ಬಿ. ಪಾಟೀಲ ಇಬ್ಬರೂ ಭೇಟಿಯ ಸುದ್ದಿಯನ್ನು ನಿರಾಕರಿಸಿದ್ದಾರೆ.

ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ್ದ ಶಿವಕುಮಾರ್‌, ‘ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಅಶ್ವತ್ಥ ನಾರಾಯಣ ಅವರು ಎಂ.ಬಿ. ಪಾಟೀಲರನ್ನು ಭೇಟಿಮಾಡಿದ್ದಾರೆ. ತಮ್ಮ ಇಲಾಖೆಗಳ ಹಗರಣಗಳ ಬಗ್ಗೆ ಯಾರೂ ಧ್ವನಿ ಎತ್ತಬಾರದು ಎಂಬುದು ಅವರ ಉದ್ದೇಶ’ ಎಂದರು.

‘ಇದೊಂದು ಖಾಸಗಿ ಭೇಟಿ ಎಂದು ಅವರು ಹೇಳಬಹುದು. ಪಾಟೀಲರು ಶಿಕ್ಷಣ ಸಂಸ್ಥೆ ನಡೆಸುತ್ತಿರುವುದರಿಂದ ಅವರ ಸಲಹೆ ಪಡೆಯುವುದಕ್ಕೆ ಹೋಗಿದ್ದಾಗಿಯೂ ಸಬೂಬು ನೀಡಬಹುದು’ ಎಂದರು.

‘ಸಚಿವರು ಭೇಟಿ ಮಾಡಿಲ್ಲ’

‘ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ನಮ್ಮ ಮನೆಗೆ ಭೇಟಿ ನೀಡಿದ್ದರು ಎಂಬುದು ಸುಳ್ಳು ಮಾಹಿತಿ. ನಾವು ಭೇಟಿ ಮಾಡಿಲ್ಲ’ ಎಂದು ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನಾನು ಒಂದು ರಾಜಕೀಯ ಪಕ್ಷದ ನಾಯಕ. ಅವರು ಸಚಿವರು. ಭೇಟಿ ಆದರೆ ತಪ್ಪಿಲ್ಲ. ನನ್ನ ಮಗ ಮತ್ತು ಅವರ ಮಕ್ಕಳು ಸಹಪಾಠಿಗಗಳು. ಅದರಲ್ಲಿ ತಪ್ಪು ಹುಡುಕಲಾಗದು’ ಎಂದರು.

ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಅಶ್ವತ್ಥ ನಾರಾಯಣ ಕುಟುಂಬದ ಪಾತ್ರ ಕುರಿತ ಆರೋಪವಿದೆ. ತನಿಖೆ ನಡೆದಿರುವ ಹಂತದಲ್ಲಿ ಸಚಿವರಾಗಿ ಮುಂದುವರಿಯುವುದು ಸರಿಯಲ್ಲ. ತಕ್ಷಣ ರಾಜೀನಾಮೆ ನೀಡಬೇಕು’ ಎಂದು ಎಂ.ಬಿ. ಪಾಟೀಲ್ ಆಗ್ರಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.