ADVERTISEMENT

ಅದಮಾರು ಪರ್ಯಾಯ ಆರಂಭ

ಶನಿವಾರ ನಸುಕಿನಲ್ಲಿ ಈಶಪ್ರಿಯ ತೀರ್ಥರಿಂದ ಸರ್ವಜ್ಞ ಪೀಠಾರೋಹಣ: ಇಂದು ಧಾರ್ಮಿಕ ದರ್ಬಾರ್‌

​ಪ್ರಜಾವಾಣಿ ವಾರ್ತೆ
Published 17 ಜನವರಿ 2020, 20:15 IST
Last Updated 17 ಜನವರಿ 2020, 20:15 IST
ಪರ್ಯಾಯ ಪೀಠಾರೋಹಣಕ್ಕೂ ಮುನ್ನ ಪಲಿಮಾರು ಮಠದ ವಿದ್ಯಾಧೀಶ ತೀರ್ಥರು ಹಾಗೂ ಅದಮಾರು ಮಠದ ಈಶಪ್ರಿಯ ತೀರ್ಥರು ಆತ್ಮೀಯವಾಗಿ ಚರ್ಚಿಸಿದ ಕ್ಷಣ
ಪರ್ಯಾಯ ಪೀಠಾರೋಹಣಕ್ಕೂ ಮುನ್ನ ಪಲಿಮಾರು ಮಠದ ವಿದ್ಯಾಧೀಶ ತೀರ್ಥರು ಹಾಗೂ ಅದಮಾರು ಮಠದ ಈಶಪ್ರಿಯ ತೀರ್ಥರು ಆತ್ಮೀಯವಾಗಿ ಚರ್ಚಿಸಿದ ಕ್ಷಣ   

ಉಡುಪಿ: ಪಲಿಮಾರು ಮಠದ ಪರ್ಯಾಯ ಅವಧಿ ಮುಗಿದು ಅದಮಾರು ಮಠದ ಪರ್ಯಾಯ ಆರಂಭವಾಗಿದೆ. ಮುಂದಿನ 2 ವರ್ಷ ಅದಮಾರು ಮಠದ ಈಶಪ್ರಿಯ ತೀರ್ಥರು ಸರ್ವಜ್ಞ ಪೀಠಾಧಿಪತಿಯಾಗಿರಲಿದ್ದು, ಕೃಷ್ಣನ ಪೂಜಾ ಕೈಂಕರ್ಯ ನೆರವೇರಿಸಲಿದ್ದಾರೆ.

ಸರ್ವಜ್ಞ ಪೀಠಾರೋಹಣ ಪೂರ್ವಭಾವಿಯಾಗಿ ಶುಕ್ರವಾರ ರಾತ್ರಿ ಧಾರ್ಮಿಕ ವಿಧಿವಿಧಾನಗಳು ನಡೆದವು. ಅದಮಾರು ಶ್ರೀಗಳು ಕಾಪುವಿನ ದಂಡತೀರ್ಥದಲ್ಲಿ ಪವಿತ್ರ ಸ್ನಾನ ಮಾಡಿ, ಉಡುಪಿಯ ಜೋಡುಕಟ್ಟೆ ಮಂಟಪಕ್ಕೆ ಬಂದು ಪಟ್ಟದ ದೇವರಿಗೆ ಪೂಜೆ ಸಲ್ಲಿಸಿದರು.

ಬಳಿಕ ವೈಭವದ ಮೆರವಣಿಗೆಯಲ್ಲಿ ಅಷ್ಠಮಠಗಳ ಯತಿಗಳ ಸಹಿತ ಪರ್ಯಾಯ ಯತಿಗಳನ್ನು ಕೃಷ್ಣಮಠಕ್ಕೆ ಕರೆತರಲಾಯಿತು. ಜಾನಪದ ಕಲಾ ತಂಡಗಳು, ಸ್ತಬ್ಧ ಚಿತ್ರಗಳು, ಕಲಾ ಪ್ರಕಾರಗಳು ಉತ್ಸವದ ಅಂದವನ್ನು ಇಮ್ಮಡಿಗೊಳಿಸಿದ್ದವು. ವಾದ್ಯ ಹಾಗೂ ವೇದಘೋಷಗಳು ಮುಗಿಲು ಮುಟ್ಟಿದವು.

ADVERTISEMENT

ಬೆಳಿಗ್ಗೆ 5.57ಕ್ಕೆ ಸರ್ವಜ್ಞ ಪೀಠಾರೋಹಣ: ಈಶಪ್ರಿಯ ತೀರ್ಥರು ಶನಿವಾರ ಬೆಳಗಿನ ಜಾವ 4.50ಕ್ಕೆ ಕನಕನ ಕಿಂಡಿಯಲ್ಲಿ ಕೃಷ್ಣನ ದರ್ಶನ ಮಾಡಲಿದ್ದು, 5.30ಕ್ಕೆ ಕೃಷ್ಣಮಠ ಪ್ರವೇಶಿಸಿ, 5.57ರ ಮುಹೂರ್ತದಲ್ಲಿ ಪರ್ಯಾಯ ಪಲಿಮಾರು ವಿದ್ಯಾಧೀಶ ಶ್ರೀಗಳಿಂದ ಅಕ್ಷಯ ಪಾತ್ರೆ, ಸುಟ್ಟುಗ, ಗರ್ಭಗುಡಿಯ ಕೀಲಿಕೆ ಪಡೆದು, ಪವಿತ್ರ ಸರ್ವಜ್ಞ ಪೀಠಾರೋಹಣ ಮಾಡಲಿದ್ದಾರೆ.

ಬೆಳಿಗ್ಗೆ 10ಕ್ಕೆ ಅದಮಾರುಶ್ರೀಗಳು ಕಡೆಗೋಲು ಕೃಷ್ಣನಿಗೆ ಪರ್ಯಾಯದ ಮೊದಲ ಪೂಜೆ ನೆರವೇರಿಸಲಿದ್ದು, ಮುಂದಿನ 2 ವರ್ಷಗಳ ಕಾಲ ಪರ್ಯಾಯ ಪೀಠದಲ್ಲಿಕುಳಿತು ಮಠದ ಸಂಪೂರ್ಣ ಆಡಳಿತವನ್ನು ನಿಭಾಯಿಸಲಿದ್ದಾರೆ.

ಮಧ್ಯಾಹ್ನ ದರ್ಬಾರ್‌: ಶನಿವಾರ ಮಧ್ಯಾಹ್ನ 2.30ಕ್ಕೆ ರಾಜಾಂಗಣದಲ್ಲಿ ಪರ್ಯಾಯ ಧಾರ್ಮಿಕ ದರ್ಬಾರ್ ನಡೆಯಲಿದ್ದು, ಗಣ್ಯರು, ರಾಜಕೀಯ ನಾಯಕರು ಉಪಸ್ಥಿತರಿರಲಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸೇರಿದಂತೆ ಹಲವು ಕೇಂದ್ರ ಹಾಗೂ ರಾಜ್ಯದ ನಾಯಕರು ಭಾಗವಹಿಸಲಿದ್ದಾರೆ.

ಕೃಷ್ಣನೂರಿನಲ್ಲಿ ಸಂಭ್ರಮ: ಕೃಷ್ಣನೂರಿನಲ್ಲಿ ಅದಮಾರು ಪರ್ಯಾಯ ಮಹೋತ್ಸವದ ಸಂಭ್ರಮ ತುಂಬಿಕೊಂಡಿದೆ. ಇಡೀ ನಗರ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ. ರಥಬೀದಿ ಶುಕ್ರವಾರ ರಾತ್ರಿ ಭಕ್ತರಿಂದ ತುಂಬಿ ತುಳುಕುತ್ತಿತ್ತು. ನಗರದ ಹಲವೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.