ಮೈಸೂರು: ‘ಕೊಡಗಿನಲ್ಲಿ ರಂಗಭೂಮಿಗಾಗಿ 40 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಕ್ಕೆ ನನಗೆ ರಂಗಾಯಣದ ನಿರ್ದೇಶಕ ಸ್ಥಾನ ಸಿಕ್ಕಿದೆ. ಜತೆಗೆ, ನಾನು ಬಿಜೆಪಿಗಾಗಿ ದುಡಿದದ್ದೂ ಸಹಾಯ ಮಾಡಿದೆ’ ಎಂದು ರಂಗಾಯಣದ ನೂತನ ನಿರ್ದೇಶಕರಾಗಿ ಮಂಗಳವಾರ ಅಧಿಕಾರ ಸ್ವೀಕರಿಸಿದ ಅಡ್ಡಂಡ ಸಿ.ಕಾರ್ಯಪ್ಪ ಹೇಳಿದರು.
‘ನಿರ್ದೇಶಕ ಸ್ಥಾನವನ್ನು ನಾನು ಅಪೇಕ್ಷಿಸಿದ್ದೆ. ಹಾಗೆಂದು ಈ ಸ್ಥಾನಕ್ಕೆ ಮೊದಲಿಗನೂ ಅಲ್ಲ, ಕೊನೆಯವನೂ ಅಲ್ಲ. ಸರ್ಕಾರದ ಧೋರಣೆಗಳಿಗೆ ತಕ್ಕಂತೆ ನಾನು ಕೆಲಸ ಮಾಡಬೇಕಾಗುತ್ತದೆ’ ಎಂದು ಅವರು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
‘ಸರ್ಕಾರ ಬದಲಾದರೆ ನಿರ್ದೇಶಕ ಸ್ಥಾನವೂ ಬದಲಾಗಬಹುದು. ಈ ಸ್ಥಾನ ಸರ್ಕಾರಕ್ಕಿಂತ ದೊಡ್ಡದೇನಲ್ಲ. ಈ ಹಿಂದೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಗೆ ಕೇವಲ 8 ತಿಂಗಳ ಅವಧಿಗೆ ಅಧ್ಯಕ್ಷನಾಗಿದ್ದೆ. ಅಧಿಕಾರ ಕಳೆದುಕೊಂಡಾಗ ನನಗೆ ಕೊಂಚವೂ ಬೇಸರ ಆಗಿರಲಿಲ್ಲ’ ಎಂದರು.
‘ಆದರೆ, ನಿರ್ದೇಶಕ ಸ್ಥಾನವನ್ನು ಅವಧಿಗೂ ಮುನ್ನ ಬದಲಿಸಿದರೆ ಸಾಂಸ್ಕೃತಿಕ ಕಾರ್ಯಗಳಿಗೆ ಹಿನ್ನಡೆಯಾಗುತ್ತದೆ. ಮೂರು ವರ್ಷ ಅವಧಿಯನ್ನು ಪೂರ್ಣಗೊಳಿಸಲು ಸರ್ಕಾರ ಅನುವು ಮಾಡಿಕೊಡಬೇಕು’ ಎಂದು ಅವರು ಕೋರಿದರು.
‘ಸಂಕ್ರಾಂತಿ ವೇಳೆಗೆ ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ’ ನಡೆಯಬೇಕಿತ್ತು. ಕೊಂಚ ಮುಂದೆ ಹೋಗಲಿದೆ. ನಿಧಾನವಾದರೂ ಪ್ರಧಾನವಾಗಿರಲಿ ಎನ್ನುವುದು ನನ್ನ ಆಶಯ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.