ADVERTISEMENT

ನೈಸ್‌ ವರದಿ ನೀಡಿದ್ದಕ್ಕೆ ಬೆದರಿಕೆ: TB ಜಯಚಂದ್ರಗೆ ಭದ್ರತೆ- ಸಚಿವ HK ಪಾಟೀಲ

ಟಿಬಿ ಜಯಚಂದ್ರ ಅವರಿಗೆ ಬೆದರಿಕೆ ಕರೆ ಹಿನ್ನೆಲೆ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2023, 9:16 IST
Last Updated 29 ಜುಲೈ 2023, 9:16 IST
ಎಚ್.ಕೆ. ಪಾಟೀಲ
ಎಚ್.ಕೆ. ಪಾಟೀಲ   

ಹುಬ್ಬಳ್ಳಿ: 'ಶಾಸಕ ಟಿ.ಬಿ. ಜಯಚಂದ್ರ ಅವರು ನೈಸ್ ಸಂಸ್ಥೆಗೆ ಸಂಬಂಧಿಸಿ ದಿಟ್ಟತನದ ವರದಿ ನೀಡಿದ್ದರಿಂದ, ಅವರಿಗೆ ಬೆದರಿಕೆ ಕರೆ ಬಂದಿರಬಹುದು. ಸರ್ಕಾರ ಅವರಿಗೆ ಸೂಕ್ತ ಭದ್ರತೆ ನೀಡಲಿದೆ' ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಶನಿವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಜಯಚಂದ್ರ ಅವರು ನೈಸ್ ಯೋಜನೆ ಕುರಿತು ವರದಿ ನೀಡುವಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅವರ ದಿಟ್ಟತನದ ವರದಿ ಸಹಿಸಲಾರದವರು ಬೆದರಿಕೆ ಕರೆ ಮಾಡುತ್ತಿದ್ದಾರೆ ಎಂದು ಮಾಧ್ಯಮದಿಂದ ತಿಳಿದು ಬಂದಿದೆ. ಆದರೆ, ಅವರು ಅದ್ಯಾವುದಕ್ಕೂ ಹೆದರುವ, ಅಂಜುವ ಹಾಗೂ ಅಳಕವೂ ವ್ಯಕ್ತಿಯಲ್ಲ' ಎಂದರು.

'ಶಾಸಕರು ಅಸಮಾಧನ ವ್ಯಕ್ತಪಡಿಸಿ ಪತ್ರ ಬರೆದ ವಿಷಯ ಈಗಾಗಲೇ ಶಾಸಕಾಂಗ ಸಭೆಯಲ್ಲಿ ಚರ್ಚೆಯಾಗಿದೆ. ಅದು ಮುಗಿದ ಅಧ್ಯಾಯ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ದೆಹಲಿಯಲ್ಲಿ ಕರೆದ ಸಭೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಈಗಾಗಲೇ ಎರಡು ಬಾರಿ ಸಭೆ ಕರೆದಿದ್ದು, ಅನಿವಾರ್ಯ ಕಾರ್ಣದಿಂದ ಮುಂದೂಡಲಾಗಿತ್ತು. ರಾಜ್ಯದ ಅಭಿವೃದ್ಧಿಗೆ ಯಾವೆಲ್ಲ ಯೋಜನೆ ಹಾಕಿಕೊಳ್ಳಬೇಕು, ಪಕ್ಷ ಸಂಘಟನೆಯನ್ನು ಹೇಗೆ ಇನ್ನಷ್ಟು ಬಲಿಷ್ಠಗೊಳಿಸಬೇಕು ಹಾಗೂ ಲೋಕಸಭೆ ಚುನಾವಣೆಗೆ ಹೇಗೆ ಸನ್ನದ್ಧರಾಗಬೇಕು ನಡೆಸಬೇಕು ಎನ್ನುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ' ಎಂದು ತಿಳಿಸಿದರು.

ADVERTISEMENT

'ಪ್ರವಾಸೋದ್ಯಮ ಇಲಾಖೆಗೆ ಹೊಸ ರೂಪ ಕೊಡುವ ಪ್ರಯತ್ನ ನಡೆಯುತ್ತಿದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಕೆಲ ದಿನಗಳ ಹಿಂದೆ ₹300 ಕೋಟಿ ವೆಚ್ಚದ ಹೂಡಿಕೆ ಯೋಜನೆಗೆ ಅನುಮತಿ‌ ನೀಡಲಾಗಿದೆ. ಇದರ ಜೊತೆಗೆ ಸ್ತ್ರೀ ಶಕ್ತಿ ಯೋಜನೆ ಪ್ರವಾಸೋದ್ಯಮಕ್ಕೆ ಆನೆಬಲ ತಂದು‌ಕೊಟ್ಟಿದೆ. ಯಾತ್ರಾ ಮತ್ತು‌ ಪ್ರವಾಸಿ ಸ್ಥಳಗಳು ಭರ್ತಿಯಾಗುತ್ತಿವೆ. ಇವನ್ನು ಗಮನಿಸಿದರೆ ಮೂಲ‌ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿವೆ. ಅದಕ್ಕೆ ತಕ್ಕಂತೆ ಪ್ರವಾಸಿ ಸ್ಥಳಗಳನ್ನು ಮೇಲ್ದರ್ಜೆಗೆ ಏರಿಸಲು ಕ್ರಮ ಕೈಗೊಳ್ಳಲಾಗುವುದು' ಎಂದರು.

'ಉಡುಪಿ ಪ್ರಕರಣದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಕ್ತ ನಿರ್ಣಯ‌ಕೈಗೊಳ್ಳುತ್ತಾರೆ' ಎಂದು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.