ಬೆಂಗಳೂರು: ‘ನನ್ನ ಹಾಗೂ ನನ್ನ ಕುಟುಂಬದ ವಿರುದ್ಧ ಸುಳ್ಳು ಆರೋಪ ಮಾಡಿ ಬೆದರಿಕೆ ಹಾಕಿದ್ದಾರೆ’ ಎಂದು ಆರೋಪಿಸಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಮತ್ತು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ವಿರುದ್ಧ ಲೋಕಾಯುಕ್ತ ವಿಶೇಷ ತನಿಖಾ ದಳದ (ಎಸ್‌ಐಟಿ) ಎಡಿಜಿಪಿ ಚಂದ್ರಶೇಖರ್ ಅವರು ಶುಕ್ರವಾರ ಸಂಜಯನಗರ ಠಾಣೆಗೆ ದೂರು ನೀಡಿದ್ದಾರೆ.
ಚಂದ್ರಶೇಖರ್ ಅವರ ದೂರು ಆಧರಿಸಿ ಪೊಲೀಸರು ಎನ್ಸಿಆರ್ (ಗಂಭೀರ ಸ್ವರೂಪವಲ್ಲದ ಅಪರಾಧ) ದಾಖಲಿಸಿಕೊಂಡಿದ್ದಾರೆ.
‘ಕುಮಾರಸ್ವಾಮಿ ವಿರುದ್ಧ ದಾಖಲಾಗಿರುವ ಮೊಕದ್ದಮೆ ಸಂಖ್ಯೆ 16/2014 ಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಸಾಕ್ಷ್ಯಾಧಾರಗಳು ಲಭ್ಯವಾದ ಕಾರಣ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ರಾಜ್ಯಪಾಲರ ಅನುಮತಿ ಕೋರಿರುತ್ತೇನೆ. ಸೆ.28 ಮತ್ತು 29 ರಂದು ಕುಮಾರಸ್ವಾಮಿ ಅವರು ಸುದ್ದಿಗೋಷ್ಠಿ ನಡೆಸಿ ನನ್ನ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ ಜೀವ ಬೆದರಿಕೆ ಹಾಕಿದ್ದಾರೆ. ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಸಹ ದುರುದ್ದೇಶಪೂರಿತ ಹೇಳಿಕೆ ನೀಡಿದ್ದಾರೆ. ಸುರೇಶ್ ಬಾಬು ತಮ್ಮ ಮೇಲೆ ಸುಳ್ಳು ಆರೋಪ ಹೊರಿಸಿ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.
‘ನನ್ನನ್ನು ಕರ್ನಾಟಕ ರಾಜ್ಯ ಕೇಡರ್‌ನಿಂದ ಅನ್ಯ ರಾಜ್ಯಕ್ಕೆ ಕಳುಹಿಸುವುದಾಗಿ ಕುಮಾರಸ್ವಾಮಿ ಬೆದರಿಕೆ ಹಾಕಿದ್ದಾರೆ. ನಕಲಿ ವೈದ್ಯಕೀಯ ಪ್ರಮಾಣ ಪತ್ರ ತಂದಿದ್ದೇನೆ. ಲಂಚ ತೆಗೆದುಕೊಂಡಿದ್ದೇನೆ ಎಂದು ಆರೋಪಿಸಿದ್ದಾರೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
‘ಪ್ರಾಸಿಕ್ಯೂಷನ್ ಅನುಮತಿ ಕೋರಿ ರಾಜ್ಯಪಾಲರಿಗೆ ಲೋಕಾಯುಕ್ತ ಎಸ್‌ಐಟಿ ಕಳಿಸಿರುವ ಪತ್ರಗಳು ಮತ್ತು ದಾಖಲೆಗಳನ್ನು ಪತ್ರಿಕಾಗೋಷ್ಠಿಗಳಲ್ಲಿ ಉಲ್ಲೇಖಿಸಿದ್ದಾರೆ. ಲೋಕಾಯುಕ್ತದಿಂದ ರಾಜ್ಯಪಾಲರಿಗೆ ಕಳುಹಿಸಲಾದ ಈ ದಾಖಲೆಗಳು, ಅದೇ ಪ್ರಕರಣದಲ್ಲಿ ಆರೋಪಿಯಾದ ಕುಮಾರಸ್ವಾಮಿ ಅವರ ಕೈಗೆ ಸಿಕ್ಕಿದ್ದಾದರೂ ಹೇಗೆ? ಅವರು ತಮ್ಮ ಪದವಿಯ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆಯೇ ಎಂಬ ಪ್ರಶ್ನೆ ಮೂಡುತ್ತದೆ’ ಎಂದು ದೂರಿನಲ್ಲಿ ವಿವರಿಸಿದ್ದಾರೆ.
‘ಸೆ. 29 ರಂದು ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಅವರು ನನ್ನ ವಿರುದ್ಧ ಸುಳ್ಳು ಮತ್ತು ದುರುದ್ಧೇಶಪೂರಿತ ಆರೋಪಗಳನ್ನು ಮಾಡಿದ್ದಾರೆ. ಸುರೇಶ್ ಬಾಬು ಸಹ ನನ್ನ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಮೂಲಕ ಬೆದರಿಕೆ ಹಾಕಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಚಂದ್ರಶೇಖರ್ ಅವರು ಮಾಧ್ಯಮಗಳಲ್ಲಿ ಪ್ರಕಟಗೊಂಡಿರುವ ಹೇಳಿಕೆಯ ತುಣುಕುಗಳು, ಪೆನ್ ಡ್ರೈವ್ ಅನ್ನು ದೂರಿನೊಂದಿಗೆ ಸಲ್ಲಿಸಿದ್ದಾರೆ.
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಚಂದ್ರಶೇಖರ್ ಪತ್ರ ಬರೆದಿದ್ದರು. ಆ ಬಳಿಕ, ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿ, ಚಂದ್ರಶೇಖರ್ ವಿರುದ್ಧ ಆರೋಪ ಮಾಡಿದ್ದರು.
₹50 ಕೋಟಿ ನೀಡುವಂತೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ವಿಜಯ ತಾತ ನೀಡಿದ ದೂರು ಆಧರಿಸಿ, ಕುಮಾರಸ್ವಾಮಿ ವಿರುದ್ಧ ಇತ್ತೀಚೆಗಷ್ಟೇ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.