ಚಿತ್ರದುರ್ಗ: ದಕ್ಕಲಿಗರು ಮತ್ತು ಆದಿಜಾಂಬವರ ಒಡನಾಟದ ಕುರಿತು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ನೀಡಿದ ಹೇಳಿಕೆಗೆ ಆದಿಜಾಂಬವ ಮಠ ಬೇಸರ ವ್ಯಕ್ತಪಡಿಸಿದೆ. ಸಚಿವರು ಕೂಡಲೇ ಸಮುದಾಯಕ್ಕೆ ಸ್ಪಷ್ಟೀಕರಣ ನೀಡಬೇಕು ಎಂದು ಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ ಆಗ್ರಹಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ, ‘ದಕ್ಕಲಿಗರ ಶ್ರೇಯೋಭಿವೃದ್ಧಿಗೆ ಶ್ರಮಿಸುವುದಾಗಿ ಸಚಿವರು ನೀಡಿದ ವಾಗ್ದಾನ ಸ್ವಾಗತಾರ್ಹ. ಆದರೆ, ‘ದಕ್ಕಲಿಗರು ಆದಿಜಾಂಬವರ ಬಹಿಷ್ಕೃತ ಮಕ್ಕಳು’ ಎಂಬ ಅವರ ಹೇಳಿಕೆ ತಪ್ಪು ಅರ್ಥಗಳಿಗೆ ಅವಕಾಶ ಕಲ್ಪಿಸಿದೆ. ಅನ್ಯಥಾ ಭಾವಿಸದೇ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಬೇಕು’ ಎಂದರು.
‘ಸಚಿವರ ಈ ಹೇಳಿಕೆಯಿಂದ ಆದಿಜಾಂಬವ ಮಠದ ವೈಚಾರಿಕ ಪರಂಪರೆ, ಸೇವೆ ಮತ್ತು ಘನತೆಗೆ ಚ್ಯುತಿ ಉಂಟಾಗಿದೆ. ಆದಿಜಾಂಬವ ಕುಲಗುರುಗಳ ಪರಂಪರೆಯನ್ನು ಮೈಗೂಡಿಸಿಕೊಂಡಿರುವ ನಾರಾಯಣಸ್ವಾಮಿ ಅವರ ನಡೆಯಿಂದ ಮಾದಿಗ ಸಮುದಾಯ ಕಳವಳಗೊಂಡಿದೆ. ಮಠದ ನೂರಾರು ಭಕ್ತರು ನಮ್ಮನ್ನು ಪ್ರಶ್ನೆ ಮಾಡುವಂತಾಗಿದೆ. ಇದು ಸಮಾಜಕ್ಕೆ ತಪ್ಪು ಸಂದೇಶ ರವಾನೆ ಮಾಡಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
‘ಆದಿಜಾಂಬವ ಪರಂಪರೆಯ ಮಠಾಧೀಶರನ್ನು ಮಾದಿಗ ಉಪಜಾತಿಗಳು ಕುಲಗುರುವಾಗಿ ಶತಮಾನಗಳ ಹಿಂದೆಯೇ ಸ್ವೀಕರಿಸಿವೆ. ಉಪಜಾತಿಗಳಿಂದ ಯಾರಾದರೂ ಬಹಿಷ್ಕಾರಕ್ಕೆ ಒಳಗಾದ ಸಂದರ್ಭದಲ್ಲಿ ಮಠ ಮಧ್ಯಪ್ರವೇಶಿಸಿ ತಪ್ಪುಗಳ ಬಗ್ಗೆ ಅರಿವು ಮೂಡಿಸಿದೆ. ಪ್ರತಿಯೊಬ್ಬರನ್ನು ಮುಖ್ಯವಾಹಿನಿಗೆ ಕರೆತರುವ ಪ್ರಯತ್ನ ಮಾಡಿದೆ. ಮಾದಿಗರು ಮತ್ತು ಮಾಶಾಳರ ನಡುವೆ ಮದುವೆ ನಡೆಸಿ ವೈಚಾರಿಕ ನಿಲುವು ಪ್ರಕಟಿಸಿದೆ’ ಎಂದು ಹೇಳಿದರು.
‘ಒಕ್ಕೂಟದಿಂದ ದೂರ ಇಡಲಾಗಿದೆ’
ದಲಿತ ಮತ್ತು ಹಿಂದುಳಿದ ಮಠಾಧೀಶರ ಒಕ್ಕೂಟದಿಂದ ಆದಿಜಾಂಬವ ಮಠವನ್ನು ಉದ್ದೇಶಪೂರ್ವಕವಾಗಿ ದೂರ ಇಡಲಾಗಿದೆ ಎಂದು ಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
‘ದಲಿತ ಮತ್ತು ಹಿಂದುಳಿದ ಮಠಾಧೀಶರು ಸೇರಿ ಒಕ್ಕೂಟ ರಚನೆಯಾಗಿದೆ. ಮಾದಿಗ ಸಮುದಾಯದ ಆದಿಜಾಂಬವ ಮಠ ಕೂಡ ಹಿಂದುಳಿದಿದೆ. ಈ ಮಠವನ್ನೂ ಒಕ್ಕೂಟದಲ್ಲಿ ಸೇರಿಸಿಕೊಂಡಿದ್ದರೆ ಇನ್ನಷ್ಟು ಬಲ ಬರುತ್ತಿತ್ತು. ನಮ್ಮನ್ನು ದೂರ ಇಟ್ಟಿರುವ ಬಗ್ಗೆ ಭಕ್ತರಲ್ಲಿ ಅಸಮಾಧಾನವಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.
ಆದಿಜಾಂಬವ ಮಠದ ಶಿವಮುನಿ ಸ್ವಾಮೀಜಿ, ಟ್ರಸ್ಟಿಗಳಾದ ನಾಗಕುಮಾರ, ಚಿದಾನಂದ ಇದ್ದರು.
***
ಆದಿಜಾಂಬವ ಮಠಕ್ಕೆ ಶತಮಾನಗಳ ಇತಿಹಾಸವಿದೆ. ಕುಲಗುರು ಪಟ್ಟವನ್ನು ಸಮುದಾಯ ನೀಡಿದೆ. ಬೇರೆ ಮಠ ಮತ್ತು ಸ್ವಾಮೀಜಿಯ ಟೀಕೆ, ಸ್ಪರ್ಧೆ ಮಾಡುವುದು ನಮ್ಮ ಉದ್ದೇಶವಲ್ಲ.
ಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ,ಆದಿಜಾಂಬವ ಮಠ
***
ದಕ್ಕಲಿಗರನ್ನು ಮುಖ್ಯವಾಹಿನಿಗೆ ತರುವ ಇಚ್ಛೆ ಇದ್ದರೆ ಅವರನ್ನು ದತ್ತು ಪಡೆಯಿರಿ. ಆದಿಜಾಂಬವರ ಬಹಿಷ್ಕೃತ ಮಕ್ಕಳು ಎಂಬ ಹಣೆಪಟ್ಟಿ ಕಟ್ಟುವುದು ಅಕ್ಷಮ್ಯ.
ಗುರುಪ್ರಕಾಶಮುನಿ ಸ್ವಾಮೀಜಿ
ಆದಿಜಾಂಬವ ಶಾಖಾ ಮಠ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.