ADVERTISEMENT

ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಆದಿತ್ಯ ರಾವ್

ಮೂರು ವರ್ಷದಿಂದ ಸಂಪರ್ಕವೇ ಇರಲಿಲ್ಲ: ಆದಿತ್ಯ ರಾವ್ ಸಹೋದರ ಅಕ್ಷತ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2020, 20:09 IST
Last Updated 22 ಜನವರಿ 2020, 20:09 IST
ಆದಿತ್ಯ ರಾವ್
ಆದಿತ್ಯ ರಾವ್   

ಮಂಗಳೂರು: ನಗರದ ಬಜ್ಪೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇರಿಸಿದ ಪ್ರಕರಣದ ಆರೋಪಿ ಆದಿತ್ಯರಾವ್‌ ಬೆಂಗಳೂರಿನಲ್ಲಿ ಪೊಲೀಸರಿಗೆ ಶರಣಾಗಿದ್ದು, ಎಸಿಪಿ ಬೆಳ್ಳಿಯಪ್ಪ ಹಾಗೂ ವಿನಯ್‌ ಅವರ ತಂಡ ಬೆಂಗಳೂರಿಗೆ ತೆರಳಿ, ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಆರೋಪಿಯನ್ನು ನಗರಕ್ಕೆ ಕರೆ ತಂದಿದೆ.

ಬುಧವಾರ ರಾತ್ರಿ ಆರೋಪಿಯ ವಿಚಾರಣೆ ನಡೆಸುವ ಸಾಧ್ಯತೆ ಇದ್ದು, ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಈ ಬಗ್ಗೆ ಮಾಹಿತಿ ನೀಡಲು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್‌. ಹರ್ಷ, ಗುರುವಾರ ಬೆಳಿಗ್ಗೆ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.

ಹೋಟೆಲ್‌ನಲ್ಲಿ ಕೆಲಸ: ಆರೋಪಿ ಆದಿತ್ಯರಾವ್‌ ನಗರದ ಬಲ್ಮಠದಲ್ಲಿರುವ ‘ಕುಡ್ಲ’ ಕ್ವಾಲಿಟಿ ಹೋಟೆಲ್‌ನಲ್ಲಿ ಬಿಲ್ಲಿಂಗ್‌ ಕ್ಲರ್ಕ್‌ ಆಗಿ ಡಿಸೆಂಬರ್ 15 ರಂದು ಕೆಲಸಕ್ಕೆ ಸೇರಿದ್ದ. ಆರೋಗ್ಯದ ಕಾರಣ ನೀಡಿ, ಇದೇ 5 ರಂದು ಕೆಲಸಕ್ಕೆ ರಾಜೀನಾಮೆ ನೀಡಿದ್ದ.

ADVERTISEMENT

‘ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ವಿಚಿತ್ರವಾಗಿ ವರ್ತಿಸುತ್ತಿದ್ದ. ಅಲ್ಲದೇ ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಸದಾ ತನ್ನ ಜತೆಗೆ ಒಂದು ಬ್ಯಾಗ್‌ ಅನ್ನು ಇಟ್ಟುಕೊಳ್ಳುತ್ತಿದ್ದ. ಬಿಡುವಿನ ವೇಳೆಯಲ್ಲಿ ಡೇರಿಯಲ್ಲಿ ಏನನ್ನೋ ಬರೆಯುತ್ತಿದ್ದ. ಆತನ ಕುರ್ಚಿಯ ಬಳಿ ಬಿಳಿ ಪೌಡರ್‌ ಬಿದ್ದಿರುತ್ತಿತ್ತು’ ಎಂದು ಹೋಟೆಲ್‌ನ ಸಿಬ್ಬಂದಿ ಮಾಹಿತಿ ನೀಡಿದರು.

ಹೋಟೆಲ್‌ನಲ್ಲಿ ಇದ್ದ ಸಂದರ್ಭದಲ್ಲಿಯೇ ಯೂಟ್ಯೂಬ್‌ನಲ್ಲಿ ಬಾಂಬ್‌ ತಯಾರಿಕೆಯ ಕುರಿತು ಮಾಹಿತಿ ಪಡೆದಿದ್ದ. ಅದಕ್ಕಾಗಿಯೇ ಆನ್‌ಲೈನ್‌ ಮೂಲಕ ಬಿಳಿ ಪೌಡರ್ ತರಿಸಿಕೊಂಡಿದ್ದ. ಅದನ್ನು ಬಳಸಿ, ಬಾಂಬ್‌ ತಯಾರಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಆರೋಪಿಯ ಪತ್ತೆಗಾಗಿ ನಗರದ ಪೊಲೀಸರು, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಹೋಟೆಲ್‌ಗಳಲ್ಲಿ ಶೋಧ ನಡೆಸಿದ್ದರು. ಈ ಸಂದರ್ಭದಲ್ಲಿ ಕುಡ್ಲ ಹೋಟೆಲ್‌ನ ಸಿಬ್ಬಂದಿ ಆರೋಪಿಯನ್ನು ಪತ್ತೆ ಹಚ್ಚಿದ್ದು, ಈತ ಇಲ್ಲಿಯೇ ಕೆಲಸ ಮಾಡುತ್ತಿದ್ದ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಸಂಪರ್ಕ ಇರಲಿಲ್ಲ: ಮಣಿಪಾಲದವರಾದ ಆದಿತ್ಯರಾವ್‌ ತಂದೆ ಹಾಗೂ ಸಹೋದರ ಅಕ್ಷತ್‌ ರಾವ್‌, ಸದ್ಯಕ್ಕೆ ನಗರದ ಚಿಲಿಂಬಿಯಲ್ಲಿರುವ ಅಪಾರ್ಟಮೆಂಟ್‌ನಲ್ಲಿ ವಾಸವಾಗಿದ್ದಾರೆ. ಅಕ್ಷತ್‌ರಾವ್‌ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.

‘ಕಳೆದ 3 ವರ್ಷಗಳಿಂದ ನಮಗೆ ಆತನ ಜತೆಗೆ ಯಾವುದೇ ಸಂಪರ್ಕವಿಲ್ಲ. ಕಳೆದ ವರ್ಷ ಆತ ಜೈಲಿಗೆ ಹೋದ ಸಂದರ್ಭದಲ್ಲೂ ನಾವು ಆತನ ಸಂಪರ್ಕ ಮಾಡಿರಲಿಲ್ಲ. ಕಳೆದ ವರ್ಷ ಫೆಬ್ರುವರಿಯಲ್ಲಿ ತಾಯಿ ತೀರಿಕೊಂಡಿದ್ದು, ಆ ವಿಚಾರವನ್ನು ಜೈಲಿಗೆ ಕರೆ ಮಾಡಿ ತಿಳಿಸಿದ್ದೇವೆ. ಆದರೆ ಆತ ಬಂದಿರಲಿಲ್ಲ’ ಎಂದು ಅಕ್ಷತ್‌ ರಾವ್‌ ತಿಳಿಸಿದರು.‘ಆತ ನಗರದಲ್ಲಿ ಇರುವ ಕುರಿತು ನಮಗೆ ಯಾವುದೇ ಮಾಹಿತಿ ಇರಲಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗಾಗಿ ನಾವು ಪೊಲೀಸರಿಗೆ ಸಹಕಾರ ನೀಡುತ್ತೇವೆ’ ಎಂದು ಹೇಳಿದರು.

‘ಗುಪ್ತಚರ ಇಲಾಖೆ ವೈಫಲ್ಯ’
‘ವಿಮಾನ ನಿಲ್ದಾಣದಲ್ಲಿ ಬಾಂಬ್‌ ಪತ್ತೆಯಾದ ಪ್ರಕರಣದಲ್ಲಿ ಗುಪ್ತಚರ ಇಲಾಖೆಯ ವೈಫಲ್ಯ ಕಂಡುಬರುತ್ತಿದೆ’ ಎಂದು ಶಾಸಕ ಯು.ಟಿ. ಖಾದರ್‌ ಆರೋಪಿಸಿದರು.

‘ಆರೋಪಿಯು ಬೆಂಗಳೂರು ತಲುಪುವ ತನಕ ಪೊಲೀಸರು ಎಲ್ಲಿದ್ದರು? ಎಲ್ಲ ತಂಡಗಳು ಎಲ್ಲಿ ಹೋಗಿದ್ದವು’ ಎಂದು ಪ್ರಶ್ನಿಸಿರುವ ಅವರು, ‘ಆದರೂ ಆರೋಪಿ ಬೆಂಗಳೂರಿಗೆ ತೆರಳಿ ಪೊಲೀಸರ ಮುಂದೆ ಶರಣಾಗಿದ್ದಾನೆ. ಇದರಿಂದ ಗುಪ್ತಚರ ಇಲಾಖೆಯ ವೈಫಲ್ಯ ಕಂಡುಬರುತ್ತದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು’ ಎಂದು ಒತ್ತಾಯಿಸಿದರು.

‘ಆದಿತ್ಯರಾವ್‌ ಬಂಧನ ಅತ್ಯಂತ ಗಂಭೀರ ವಿಚಾರ. ಸಮಾಜದ್ರೋಹಿ ಶಕ್ತಿಗಳು ಎಲ್ಲ ವರ್ಗದಲ್ಲಿ ಇದ್ದಾರೆ. ಕೆಲವರು ಆರೋಪಿಯನ್ನು ಪತ್ತೆ ಹಚ್ಚುವ ಮೊದಲೇ ಸಮುದಾಯವನ್ನು ಗುರಿಯಾಗಿಸಿದ್ದಾರೆ’ ಎಂದು ದೂರಿದರು.

ಚಿಕ್ಕಬಳ್ಳಾಪುರ ಜೈಲಿನಲ್ಲಿದ್ದ
ಚಿಕ್ಕಬಳ್ಳಾಪುರ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇಟ್ಟಿದ್ದ ಆರೋಪಿ ಆದಿತ್ಯ ರಾವ್‌ ಈ ಹಿಂದೆ ಪ್ರಕರಣವೊಂದರಲ್ಲಿ ಚಿಕ್ಕಬಳ್ಳಾಪುರ ಕಾರಾಗೃಹದಲ್ಲಿ ಒಂದು ವರ್ಷ ಸೆರೆವಾಸ ಅನುಭವಿಸಿದ್ದ.

ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇಟ್ಟಿರುವ ಬಗ್ಗೆ ಹುಸಿ ಕರೆ ಮಾಡಿ ಶಿಕ್ಷೆಗೆ ಗುರಿಯಾಗಿದ್ದ ಆರೋಪಿ, 2018ರ ಸೆಪ್ಟೆಂಬರ್‌ 1 ರಿಂದ 2019ರ ಸೆಪ್ಟೆಂಬರ್‌ 23ರ ವರೆಗೆ ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದ ಎಂದು ಕಾರಾಗೃಹದ ಸೂಪರಿಂಟೆಂಡೆಂಟ್ ರೂಪಾವಾಣಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.