ADVERTISEMENT

ತಿರುಪತಿ ಪ್ರಸಾದದಲ್ಲಿ ಕಲಬೆರಕೆ ಖಂಡನೀಯ: ಸುಗುಣೇಂದ್ರತೀರ್ಥ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2024, 0:35 IST
Last Updated 22 ಸೆಪ್ಟೆಂಬರ್ 2024, 0:35 IST
ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಸ್ವಾಮೀಜಿ
ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಸ್ವಾಮೀಜಿ   

ಉಡುಪಿ: ‍‘ಹಿಂದೂ ಧರ್ಮೀಯರ ಅತ್ಯಂತ ಪ್ರಮುಖ ಶ್ರದ್ಧಾ ಕೇಂದ್ರವಾದ ತಿರುಪತಿಯ ಶ್ರೀವೆಂಕಟೇಶ್ವರ ದೇವರ ಪರಮ ಪಾವನವಾದ ಲಾಡು ಪ್ರಸಾದಕ್ಕೆ ಕಲಬೆರಕೆಯ ತುಪ್ಪವನ್ನು ಮಿಶ್ರಣ ಮಾಡುವ ಮೂಲಕ ದೊಡ್ಡ ಅಪಚಾರವನ್ನು ಮಾಡಲಾಗಿದೆ. ಇದು ಖಂಡನೀಯ‘ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಸ್ವಾಮೀಜಿ ಹೇಳಿದ್ದಾರೆ.

ದೇವಸ್ಥಾನ ಮತ್ತು ಮಠ ಮಂದಿರಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಆಕ್ರಮಣಗಳನ್ನು ಶಾಶ್ವತವಾಗಿ ತಡೆಯಬೇಕಿದೆ. ಇದಕ್ಕಾಗಿ ರಾಜಕೀಯ ಪಕ್ಷಗಳ ಕಪಿಮುಷ್ಟಿಯಿಂದ ದೇವಸ್ಥಾನ ಮತ್ತು ಮಠ ಮಂದಿರಗಳನ್ನು ಮುಕ್ತಗೊಳಿಸಬೇಕು ಎಂದು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

ಸನಾತನ ಧರ್ಮದ ಸಂರಕ್ಷಣೆಗಾಗಿ ರಾಷ್ಟ್ರ ಮಟ್ಟದಲ್ಲಿ ಸಂತರ, ಪೀಠಾಧಿಪತಿಗಳ ನೇತೃತ್ವದ ಮಾರ್ಗದರ್ಶಕ ಮಂಡಳಿಯನ್ನು ರಚಿಸಬೇಕು. ಯಾವುದೇ ಕಾರಣಕ್ಕೂ ರಾಜಕೀಯ ಹಸ್ತಕ್ಷೇಪ ಇರಬಾರದು ಎಂದೂ ಹೇಳಿದ್ದಾರೆ.

ADVERTISEMENT

ಭಂಡಾರಿಕೇರಿ ಶ್ರೀ ಖಂಡನೆ: ತಿರುಪತಿಯ ಶ್ರೀನಿವಾಸನ ಸನ್ನಿಧಿಯಲ್ಲಿ ನಡೆದಿರುವ ಅಪಚಾರ ಖಂಡನೀಯ ಎಂದಿರುವ ಭಂಡಾರಕೇರಿ ಮಠಾಧೀಶ ವಿದ್ಯೇಶತೀರ್ಥ ಸ್ವಾಮೀಜಿ, ಧರ್ಮ ಸಂಸತ್ ಅನ್ನು ರಚಿಸಬೇಕು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಿರುಪತಿ ಲಾಡುವಿನ ಶುದ್ಧತೆ ಯಥಾಸ್ಥಿತಿಗೆ

(ತಿರುಪತಿ ವರದಿ): ತಿರುಪತಿಯ ಲಾಡು ಪ್ರಸಾದದ ಪರಿಶುದ್ಧತೆಯನ್ನು ಯಥಾಸ್ಥಿತಿಗೆ ತರಲಾಗಿದೆ ಎಂದು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ತಿಳಿಸಿದೆ.

ಪ್ರಸಾದದ ಪಾವಿತ್ರ್ಯಕ್ಕೆ ಧಕ್ಕೆ ಬಾರದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಲಾಡುವಿನ ‘ದೈವತ್ವ ಮತ್ತು ಪರಿಶುದ್ಧತೆ ಈಗ ಕಳಂಕರಹಿತವಾಗಿದೆ’ ಎಂದು ಅದು ಶುಕ್ರವಾರ ರಾತ್ರಿ ಸಾಮಾಜಿಕ ಜಾಲತಾಣ ದಲ್ಲಿ ಪೋಸ್ಟ್‌ ಮಾಡಿದೆ. ಭಕ್ತರಿಗೆ ತೃಪ್ತಿಯಾಗುವಂತೆ ಲಾಡು ಪ್ರಸಾದದ ಪಾವಿತ್ರ್ಯ ರಕ್ಷಿಸಲು ಟಿಟಿಡಿ ಬದ್ಧವಾಗಿದೆ ಎಂದು ಪೋಸ್ಟ್‌ನಲ್ಲಿ ಅದು ತಿಳಿಸಿದೆ.

‘ಪ್ರಸಾದ; ಶ್ರದ್ಧೆಗೆ ಧಕ್ಕೆಯಾಗದಿರಲಿ’

ಹುಬ್ಬಳ್ಳಿ: ‘ರಾಜ್ಯದ ಎಲ್ಲ‌ ದೇವಸ್ಥಾನಗಳಲ್ಲಿ ನೀಡುವ ಪ್ರಸಾದಕ್ಕೆ ಸಂಬಂಧಿಸಿದಂತೆ ಸ್ವಚ್ಛತೆ, ಜನರ ಶ್ರದ್ಧೆಗೆ‌ ಧಕ್ಕೆ‌ ಆಗದಂತೆ ದೇವಸ್ಥಾನದ ಆಡಳಿತ ಮಂಡಳಿಯವರು ಕಾಲಕಾಲಕ್ಕೆ ಪರಿಶೀಲಿಸಬೇಕು. ಇದರಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತಿರುಪತಿ ಪ್ರಸಾದ ಲಾಡುವಿನ ಬಗ್ಗೆ ಗಂಭೀರ ಆರೋಪ ಕೇಳಿ ಬಂದಿದೆ. ಲಾಡು ತಯಾರಿಕೆಗೆ ರಾಜ್ಯದ ನಂದಿನಿ ತುಪ್ಪ‌ ತರಿಸಿಕೊಳ್ಳ ಲಾಗುತ್ತಿತ್ತು. ಆಂಧ್ರ ಪ್ರದೇಶದ ಹಿಂದಿನ‌ ಸರ್ಕಾರ ಅದನ್ನು ನಿಲ್ಲಿಸಿ, ಬೇರೆ ಕಡೆಯಿಂದ ತುಪ್ಪ ತರಿಸಿಕೊಳ್ಳಲು ಆರಂಭಿಸಿದಾಗಿನಿಂದ ಈ ರೀತಿಯ ಘಟನೆ ನಡೆದಿದೆ’ ಎಂದು ದೂರಿದರು. ‘ಇದಕ್ಕೆ ಸಂಬಂಧಿಸಿದ ಪ್ರಯೋಗಾಲಯದ ವರದಿಯನ್ನು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಅಗಬೇಕು. ಇದು ದೇಶದ ಜನರ ಶ್ರದ್ಧೆ, ಸಂಸ್ಕೃತಿಯ ಪ್ರಶ್ನೆ. ಈ ರೀತಿ ದ್ರೋಹ ಮಾಡುವುದು ಸರಿಯಲ್ಲ. ಇದನ್ನು ಗಂಭೀರವಾಗಿ ಪರಿಗಣಿಸುತ್ತೇವೆ, ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.