ಬೆಂಗಳೂರು: ಸಂಕಷ್ಟದಲ್ಲಿರುವ ಕಿರಿಯ ವಕೀಲರ ನೆರವಿಗೆ ಧಾವಿಸಿರುವ ಸುಪ್ರೀಂ ಕೋರ್ಟ್ ವಕೀಲ ಸಜನ್ ಪೂವಯ್ಯ ಮತ್ತು ಸಂಜಾತಿ ಸಜನ್ ಅವರು, ₹1 ಕೋಟಿ ನೆರವು ನೀಡಲು ಮುಂದಾಗಿದ್ದಾರೆ.
‘ಕೊರೊನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ವಕೀಲರಿಗೆ ಕೆಲಸ ಇಲ್ಲವಾಗಿದೆ. ಅದರಲ್ಲೂ ಕಿರಿಯ ವಕೀಲರ ಜೀವನ ನಿರ್ವಹಣೆಯೇ ಕಷ್ಟವಾಗಿದೆ. ಈ ಸಂದರ್ಭದಲ್ಲಿ ಅವರಿಗೆ ನೆರವಾಗುವುದು ಹಿರಿಯರ ಕರ್ತವ್ಯ’ ಎಂದು ಸಜನ್ ಪೂವಯ್ಯ ಅವರು ಬೆಂಗಳೂರು ವಕೀಲರ ಸಂಘಕ್ಕೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
‘ಅಗತ್ಯ ಇರುವ ಕಿರಿಯ ವಕೀಲರಿಗೆ ₹1 ಕೋಟಿ ನೆರವು ನೀಡಲು ನಾವಿಬ್ಬರೂ ನಿರ್ಧರಿಸಿದ್ದೇವೆ. ನೆರವು ಅಗತ್ಯ ಇರುವ ಕಿರಿಯ ವಕೀಲರ ವಿವರ ಒದಗಿಸಿ’ ಎಂದು ಅವರು ಕೋರಿದ್ದಾರೆ.
‘₹1 ಕೋಟಿ ನೆರವು ನೀಡಲು ಸಜನ್ ಪೂವಯ್ಯ ಮುಂದಾಗಿರುವುದು ದೊಡ್ಡ ಕೆಲಸ. ಬೆಂಗಳೂರು ವಕೀಲರ ಸಂಘಕ್ಕೆ ₹20 ಲಕ್ಷ ಹಾಗೂ ವಿವಿಧ ಐದು ವಕೀಲರ ಸಂಘಕ್ಕೆ ಈ ಮೊತ್ತ ವಿಭಜಿಸುವುದಾಗಿ ಅವರು ದೂರವಾಣಿಯಲ್ಲಿ ತಿಳಿಸಿದ್ದಾರೆ. ಇಷ್ಟೊಂದು ದೊಡ್ಡ ಮೊತ್ತದ ನೆರವನ್ನು ಬೇರೆ ಯಾರೂ ನೀಡಿರಲಿಲ್ಲ. ಅವರ ಈ ಕೆಲಸ ಇತರರಿಗೆ ಮಾದರಿ’ ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ. ರಂಗನಾಥ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.