ADVERTISEMENT

ಶಾಸಕ ಮಾಡಾಳ್‌ಗೆ ಜಾಮೀನು ನೀಡಿದ್ದ ಬಗ್ಗೆ ಸಿಜೆಐಗೆ ಪತ್ರ ಬರೆದಿದ್ದ ವಕೀಲರ ಸಂಘ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2023, 16:04 IST
Last Updated 27 ಮಾರ್ಚ್ 2023, 16:04 IST
ಶಾಸಕ ಮಾಡಾಳ್ ವಿರೂಪಾಕ್ಷಪ್ಪ
ಶಾಸಕ ಮಾಡಾಳ್ ವಿರೂಪಾಕ್ಷಪ್ಪ   

ಬೆಂಗಳೂರು: ‘ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ದಿನಬೆಳಗಾಗುವುದರೊಳಗೆ ವಿಚಾರಣೆ ನಡೆಸಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗಿದೆ’ ಎಂದು ನ್ಯಾಯಮೂರ್ತಿ ಕೆ.ನಟರಾಜನ್‌ ಅವರ ವಿಚಾರಣಾ ಪ್ರಕ್ರಿಯೆಗೆ ಬೆಂಗಳೂರು ವಕೀಲರ ಸಂಘ ತೀವ್ರ ಆಘಾತ ವ್ಯಕ್ತಪಡಿಸಿತ್ತು.

ಇದೇ 7ರಂದು ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಕೆ.ನಟರಾಜ್‌ ಅವರಿದ್ದ ಏಕಸದಸ್ಯ ನ್ಯಾಯಪೀಠವು, ಆರೋಪಿ ಮಾಡಾಳ್‌ ವಿರೂಪಾಕ್ಷಪ್ಪ ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಮಧ್ಯಂತರ ಜಾಮೀನು ನೀಡಿದ ಕೆಲವೇ ಗಂಟೆಗಳಲ್ಲಿ ಸಂಘದ ಅಧ್ಯಕ್ಷ ವಿವೇಕ್‌ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಟಿ.ಜಿ.ರವಿ ಮತ್ತು ಖಜಾಂಚಿ ಎಂ.ಟಿ.ಹರೀಶ್‌ ಸಂಘವು ತುರ್ತು ಸಭೆ ನಡೆಸಿದ್ದರು.

ನಂತರ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರಿಗೆ ಗಂಭೀರವಾದ ಕಾಳಜಿಯುಕ್ತ ಪತ್ರವೊಂದನ್ನು ಬರೆದಿದ್ದರಲ್ಲದೆ, ‘ಇಂದು ನ್ಯಾಯಮೂರ್ತಿ ಕೆ.ನಟರಾಜನ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ನಡೆಸಿರುವ ಪ್ರಕ್ರಿಯೆ ನ್ಯಾಯಾಂಗದ ಬಗ್ಗೆ ಶ್ರೀಸಾಮಾನ್ಯರಿಗಿರುವ ನಂಬಿಕೆಯನ್ನು ಹುಸಿ ಮಾಡಿದೆ’ ಎಂದು ಆತಂಕ ವ್ಯಕ್ತಪಡಿಸಿದ್ದರು.

ADVERTISEMENT

‘ಹೈಕೋರ್ಟ್‌ನ ಸಾಮಾನ್ಯ ಪ್ರಕ್ರಿಯೆಯ ಅನುಸಾರ ಹೊಸ ಪ್ರಕರಣಗಳು ಅದರಲ್ಲೂ ನಿರೀಕ್ಷಣಾ ಜಾಮೀನು ಕೋರಿಕೆಯ ಕ್ರಿಮಿನಲ್ ಅರ್ಜಿಗಳು ದಾಖಲಾದರೆ ಅವು ನ್ಯಾಯಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಲು ವಾರಗಟ್ಟಲೆ ಸಮಯ ತೆಗೆದುಕೊಳ್ಳುತ್ತವೆ. ಆದರೆ, ದೊಡ್ಡವರ ಪ್ರಕರಣಗಳನ್ನು ಮಾತ್ರ ದಿನಬೆಳಗಾಗುವದರೊಳಗೆ ಪುರಸ್ಕರಿಸಲಾಗುತ್ತಿದೆ’ ಎಂದು ಆ ಪತ್ರದಲ್ಲಿ ವಿವರಿಸಲಾಗಿತ್ತು.

‘ಇವತ್ತು ಮಾಡಾಳ್‌ ವಿರೂಪಾಕ್ಷಪ್ಪ ಅವರ ಅರ್ಜಿ ವಿಚಾರಣೆಯಲ್ಲಿ ಕೈಗೊಂಡ ನಿಲುವನ್ನೇ ಶ್ರೀಸಾಮಾನ್ಯರ ವಿಷಯದಲ್ಲೂ ಅನುಸರಿಸುವಂತಾಗಬೇಕು. ಅದಕ್ಕಾಗಿ ಸದ್ಯ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಕಾದು ಕುಳಿತಿರುವ ಎಲ್ಲ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಒಂದೇ ದಿನದಲ್ಲಿ ನ್ಯಾಯಪೀಠದ ಎದರು ವಿಚಾರಣೆಗೆ ನಿಗದಿಯಾಗುವಂತೆ ಪೋಸ್ಟ್‌ ಮಾಡಲು ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ರಿಜಿಸ್ಟ್ರಿ ಕಚೇರಿಗೆ ನಿರ್ದೇಶಿಸುವಂತಾಗಬೇಕು’ ಎಂದು ಸಂಘವು ಮನವಿ ಮಾಡಿತ್ತು.

‘ನ್ಯಾಯದೇಗುಲ ಎಲ್ಲರಿಗೂ ಸಮಾನವಾಗಿರಬೇಕು. ಉಳ್ಳವರ ಪ್ರಕರಣಗಳನ್ನು ತೀರ್ಮಾನಿಸುವಂತೆಯೇ ಬಡಬೋರೇಗೌಡನ ಅರ್ಜಿಯನ್ನೂ ಪುರಸ್ಕರಿಸುವಂತಾಗಬೇಕು’ ಎಂದು ಸಂಘವು ಕೋರಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.