ADVERTISEMENT

ಏರೋ ಇಂಡಿಯಾ 2023: ‘ರೋಚಕ ಪ್ರದರ್ಶನ: ಕ್ಷಣ ಕ್ಷಣವೂ ಸವಾಲು’

ಯುದ್ಧ ವಿಮಾನಗಳ ಹಾರಾಟದ ಹಿಂದಿನ ಕಥೆ ಬಿಚ್ಚಿಟ್ಟ ತಂಡ

ಸಚ್ಚಿದಾನಂದ ಕುರಗುಂದ
Published 16 ಫೆಬ್ರುವರಿ 2023, 20:24 IST
Last Updated 16 ಫೆಬ್ರುವರಿ 2023, 20:24 IST
ಸ್ಕ್ವಾಡ್ರನ್‌ ಲೀಡರ್‌ ಸೂರಜ್‌ ಕುಲಕರ್ಣಿ
ಸ್ಕ್ವಾಡ್ರನ್‌ ಲೀಡರ್‌ ಸೂರಜ್‌ ಕುಲಕರ್ಣಿ   

ಬೆಂಗಳೂರು: ‘ಪ್ರತಿ ಕ್ಷಣ ನಮಗೆ ಸವಾಲು. ಮೈಯೆಲ್ಲಾ ಕಣ್ಣಾಗಿರಬೇಕು. ಎಚ್ಚರ ತಪ್ಪುತ್ತೇವೆ ಎನ್ನುವ ಮನಃಸ್ಥಿತಿಯಲ್ಲಿ ನಾವು ಇರಲೇಬಾರದು...’

’ಏರೋ ಇಂಡಿಯಾ–2023’ರಲ್ಲಿ ಏರೋ ಶೋ ಅನ್ನು ಪ್ರತಿ ದಿನವೂ ಕರಾರುವಾಕ್ಕಾಗಿ ಆಯೋಜಿಸಿ ಯಶಸ್ವಿಗೊಳಿಸುತ್ತಿರುವ ಹಾರಾಟ ಪ್ರದರ್ಶನ ತಂಡದ ಮನದಾಳದ ಮಾತುಗಳಿವು.

2019ರ ಫೆ.19ರಂದು ಯಲಹಂಕ ವಾಯುನೆಲೆಯಿಂದ ತಾಲೀಮು ಆರಂಭಿಸಿದ್ದ ‘ಸೂರ್ಯಕಿರಣ’ ತಂಡದ ಎರಡು ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದು, ವಾಯುನೆಲೆಯಿಂದ 17 ಕಿ.ಮೀ. ದೂರದಲ್ಲಿರುವ ಇಸ್ರೋ ಲೇಔಟ್‌ನಲ್ಲಿ ಬಿದ್ದಿದ್ದವು. ಪೈಲಟ್‌ ಆಗಿದ್ದ ವಿಂಗ್ ಕಮಾಂಡರ್ ಸಾಹಿಲ್ ಗಾಂಧಿ ಮೃತಪಟ್ಟಿದ್ದರು.

ADVERTISEMENT

ಈ ಘಟನೆ ಬಳಿಕ, ಅವಘಡಗಳು ಸಂಭವಿಸದಂತೆ ವಾಯುಪಡೆಯ ತಂಡ ಮತ್ತಷ್ಟು ಕ್ರಮಬದ್ಧ ಯೋಜನೆಗಳನ್ನು ರೂಪಿಸಿದೆ. ಇದರಿಂದಾಗಿಯೇ ವಿಮಾನಗಳು ಕಡಿಮೆ ಅಂತರದಲ್ಲಿ ಅತಿ ವೇಗದಲ್ಲಿ ಮತ್ತು ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಸಾಗುವ ಸಾಹಸ ಮತ್ತು ರೋಮಾಂಚನಕಾರಿ ಪ್ರದರ್ಶನಗಳನ್ನು ಯಶಸ್ವಿಯಾಗಿ ಕೈಗೊಳ್ಳುತ್ತಿದೆ.

‌‘ವೈಮಾನಿಕ ಪ್ರದರ್ಶನದಲ್ಲಿ ಎಲ್ಲವೂ ಸವಾಲುಗಳಿಂದ ಕೂಡಿರುತ್ತವೆ. ಬಹಳ ಜಾಗರೂಕತೆ ವಹಿಸಬೇಕು. ಯಾವ ಸಂಗತಿಯನ್ನೂ ನಿರ್ಲಕ್ಷಿಸುವಂತಿಲ್ಲ. ಸಮಯ, ಸ್ಥಳ, ಗುರಿ ಮತ್ತು ವಿಮಾನಗಳ ನಡುವಣ ಅಂತರ, ಪೈಲಟ್‌ಗಳ ಜತೆ ಸಂಪರ್ಕ ಮುಂತಾದ ಅಂಶಗಳು ಮುಖ್ಯವಾಗುತ್ತವೆ. ಹಕ್ಕಿಗಳ ಬಗ್ಗೆಯೂ ನಿಗಾವಹಿಸುತ್ತೇವೆ’ ಎಂದು ಸ್ಕ್ವಾಡ್ರನ್‌ ಲೀಡರ್‌ ಸೂರಜ್‌ ಕುಲಕರ್ಣಿ ತಿಳಿಸಿದರು.

‘15 ದಿನಗಳ ಮುನ್ನವೇ ಬೆಂಗಳೂರಿನಲ್ಲಿ ತಾಲೀಮು ಆರಂಭವಾಗಿತ್ತು. ಇದಕ್ಕಿಂತ ಮೊದಲು ಆಯಾ ತಂಡಗಳು ತಮ್ಮ ವಾಯುನೆಲೆಗಳಲ್ಲಿ ಅಭ್ಯಾಸ ಕೈಗೊಂಡಿದ್ದವು. ಇದರಿಂದಾಗಿ, ಪೈಲಟ್‌ಗಳ ನಡುವೆ ಹೆಚ್ಚು ಸಮನ್ವಯ ಸಾಧಿಸಲು
ಅನುಕೂಲವಾಗುತ್ತದೆ. ಎಲ್ಲರೂ ಅತ್ಯುತ್ತಮ ತರಬೇತಿ ಮತ್ತು ಪರಿಣತಿ ಪಡೆದಿದ್ದಾರೆ. ವಿದೇಶಿ ವಿಮಾನಗಳ ಹಾರಾಟದ ಬಗ್ಗೆ ಅಲ್ಲಿನ ತಂಡಗಳ ಮಾಹಿತಿ ಪಡೆದು ಪೈಲಟ್‌ಗಳ ನಡುವೆ ಸಮನ್ವಯ ಸಾಧಿಸುತ್ತೇವೆ’ ಎಂದು ವಿವರಿಸಿದರು.

ವೀಕ್ಷಕ ವಿವರಣೆಗೂ ಎರಡು ತಿಂಗಳ ಸಿದ್ಧತೆ

ವೈಮಾನಿಕ ಹಾರಾಟ ಪ್ರದರ್ಶನದಲ್ಲಿ ಯುದ್ಧ ವಿಮಾನಗಳ ಕುರಿತಾದ ವೀಕ್ಷಕ ವಿವರಣೆಯೂ ಆಕರ್ಷಕ. ಈ ಬಾರಿಯೂ ಇಂಗ್ಲಿಷ್‌, ಹಿಂದಿ, ಕನ್ನಡದಲ್ಲಿ ವಾಯು ಪಡೆಯ ಅಧಿಕಾರಿಗಳು ವೀಕ್ಷಕ ವಿವರಣೆ ನೀಡಿದರು.

ಭಾರತೀಯ ವಾಯುಪಡೆಯ ವಿವಿಧ ವಿಭಾಗಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ವೀಕ್ಷಕ ವಿವರಣೆ
ನೀಡುವ ತಂಡದಲ್ಲಿದ್ದಾರೆ. ಪೈಲಟ್‌ಗಳ ಜತೆ ಸಮಾಲೋಚನೆ ನಡೆಸಿ ವೀಕ್ಷಕ ವಿವರಣೆಯನ್ನು ಸಿದ್ಧಪಡಿಸಲಾಗುತ್ತದೆ.

‘ಎರಡು ತಿಂಗಳ ಮೊದಲು ಸಿದ್ಧತೆಗಳು ಆರಂಭವಾಗುತ್ತವೆ. ಈ ಪ್ರದರ್ಶನದಲ್ಲಿ ವೀಕ್ಷಕ ವಿವರಣೆಯೂ ಅತಿ ಮುಖ್ಯವಾಗುತ್ತದೆ. ಯುವಕರಿಗೆ ಉತ್ತೇಜನ ನೀಡುವಂತಿರಬೇಕು. ಯುವಕರು ಸೇನೆ, ವಾಯು ಪಡೆ ಅಥವಾ ನೌಕಾಪಡೆ ಸೇರಲು ಪ್ರೋತ್ಸಾಹ ನೀಡುವ ಆಶಯವೂ ಇದು ಹೊಂದಿದೆ’ ಎಂದು ಪೈಲಟ್‌ ಪ್ರಾಂಜಲ್‌ ಸಿಂಗ್‌ ವಿವರಿಸಿದರು.

ಕನ್ನಡದಲ್ಲೇ ವೀಕ್ಷಕ ವಿವರಣೆ ನೀಡಿದ ಬೆಂಗಳೂರಿನ ಸ್ಕ್ವಾಡ್ರನ್‌ ಲೀಡರ್‌ ಐಶ್ವರ್ಯ ಅವರು ತಮಗೆ ಈ ಅವಕಾಶ ದೊರೆತಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು.

‘ಪ್ರೇಕ್ಷಕರ ಜತೆ ಸಂವಾದ ನಡೆಸುವುದು ಸಂತೋಷದ ಸಂಗತಿ. ನಾನು ಚಿಕ್ಕವಳಿದ್ದಾಗ ಇಲ್ಲಿಗೆ ಬಂದಿದ್ದೆ. ಈಗ ಯುದ್ಧ ವಿಮಾನಗಳ ಬಗ್ಗೆ ನಮ್ಮ ಭಾಷೆಯಲ್ಲೇ ವಿವರ ನೀಡುವ ಅವಕಾಶವೇ ದೊರೆತಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.

ವೀಕ್ಷಕ ವಿವರಣೆಯ ತಂಡದ ಇನ್ನೊಬ್ಬ ಸದಸ್ಯ ಬೆಂಗಳೂರಿನ ಸಿ. ವಾಸು, ‘ಬೆಂಗಳೂರಿನಲ್ಲಿ ಏರೋ ಇಂಡಿಯಾ ನಡೆಯುತ್ತಿರುವುದು ಹೆಮ್ಮೆಯ ವಿಷಯ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.