ಬೆಂಗಳೂರು: ‘ದೇಶದ ರಕ್ಷಣಾ ಸಾಮಗ್ರಿಗಳ ಉತ್ಪಾದನೆಯಲ್ಲಿ ಕರ್ನಾಟಕವೇ ನಂಬರ್ 1’ ಎಂದು ಬಿಜೆಪಿ ಹೇಳಿದೆ.
ರಕ್ಷಣಾ ಸಾಮಗ್ರಿಗಳ ವಿಚಾರವಾಗಿ ಟ್ವೀಟ್ ಮಾಡಿರುವ ಬಿಜೆಪಿ, ‘ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತದ ಕನಸನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ನನಸು ಮಾಡುತ್ತಿದೆ’ ಎಂದು ಬರೆದುಕೊಂಡಿದೆ.
‘ದೇಶದ ರಕ್ಷಣಾ ಸಾಮಗ್ರಿಗಳ ಉತ್ಪಾದನೆಯಲ್ಲಿ ಕರ್ನಾಟಕದ ಪಾಲು ಶೇ 67 ರಷ್ಟಿದ್ದು, ರಫ್ತಿನಲ್ಲೂ ಸಿಂಹಪಾಲನ್ನು ಹೊಂದಿರುವುದೇ ಇದಕ್ಕೆ ಸಾಕ್ಷಿ’ ಎಂದು ತಿಳಿಸಿದೆ.
ಬೆಂಗಳೂರನ್ನು ದೇಶದ ಏರೋಸ್ಪೇಸ್ ರಾಜಧಾನಿ ಹಾಗೂ ಕರ್ನಾಟಕ ದೇಶದಲ್ಲೇ ಆರ್ಥಿಕವಾಗಿ ಮುಂದಿರುವ ರಾಜ್ಯ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪ್ರಶಂಸಿಸಿರುವ ವಿಡಿಯೊವನ್ನು ಬಿಜೆಪಿ ಹಂಚಿಕೊಂಡಿದೆ.
ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನ 14ನೇ ಆವೃತ್ತಿಯ ‘ಏರೋ ಇಂಡಿಯಾ–2023’ಕ್ಕೆ ಯಲಹಂಕ ವಾಯುನೆಲೆಯಲ್ಲಿ ಸೋಮವಾರ ಚಾಲನೆ ನೀಡಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ‘2024-25ರ ವೇಳೆಗೆ ಭಾರತವು 5 ಬಿಲಿಯನ್ ಡಾಲರ್ (₹41.34 ಸಾವಿರ ಕೋಟಿ) ಮೌಲ್ಯದ ರಕ್ಷಣಾ ಸರಕುಗಳನ್ನು ರಫ್ತು ಮಾಡುವ ಗುರಿ ಹೊಂದಿದೆ’ ಎಂದು ಹೇಳಿದ್ದರು.
‘ರಕ್ಷಣಾ ಸರಕುಗಳ ರಫ್ತು ವಲಯದಲ್ಲಿ ಜಾಗತಿಕವಾಗಿ ಮುಂಚೂಣಿ ಸ್ಥಾನ ಪಡೆಯುವ ನಿಟ್ಟಿನಲ್ಲಿ ದೇಶವು ಸಾಗುತ್ತಿದೆ. ಸದ್ಯ ₹12.4 ಸಾವಿರ ಕೋಟಿ (1.5 ಬಿಲಿಯನ್ ಡಾಲರ್) ಮೊತ್ತದಷ್ಟು ರಕ್ಷಣಾ ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತಿದೆ. ಈ ವಹಿವಾಟು ಹೆಚ್ಚಿಸುವ ನೀತಿಗಳನ್ನು ರೂಪಿಸಲಾಗಿದೆ’ ತಿಳಿಸಿದ್ದರು.
ಇವನ್ನೂ ಓದಿ..
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.