ADVERTISEMENT

ಏರೋ ಇಂಡಿಯಾ 2023: ವೈಮಾನಿಕ ಪ್ರದರ್ಶನ ವೀಕ್ಷಣೆಗೆ ಕಿಕ್ಕಿರಿದ ಜನ

ಎಳೆಬಿಸಿಲು ಏರುವ ಮುನ್ನವೇ ಲಗುಬಗೆಯಿಂದ ಬಂದು ಸೇರಿದ್ದ ಮಂದಿ l ಬೆಳಿಗ್ಗೆ 9 ಗಂಟೆಗೆ ಮೊದಲ ಪ್ರದರ್ಶನ

ವಿಜಯಕುಮಾರ್ ಎಸ್.ಕೆ.
Published 16 ಫೆಬ್ರುವರಿ 2023, 19:55 IST
Last Updated 16 ಫೆಬ್ರುವರಿ 2023, 19:55 IST
ಯಲಹಂಕ ವಾಯುನೆಲೆಯಲ್ಲಿ ವೈಮಾನಿಕ ಪ್ರದರ್ಶನ ವೀಕ್ಷಣೆಗೆ ಸೇರಿದ್ದ ಜನ –ಪ್ರಜಾವಾಣಿ ಚಿತ್ರ/ಎಂ.ಎಸ್.ಮಂಜುನಾಥ್
ಯಲಹಂಕ ವಾಯುನೆಲೆಯಲ್ಲಿ ವೈಮಾನಿಕ ಪ್ರದರ್ಶನ ವೀಕ್ಷಣೆಗೆ ಸೇರಿದ್ದ ಜನ –ಪ್ರಜಾವಾಣಿ ಚಿತ್ರ/ಎಂ.ಎಸ್.ಮಂಜುನಾಥ್   

ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ವೈಮಾನಿಕ ಪ್ರದರ್ಶನ ವೀಕ್ಷಣೆಗೆ ಗುರುವಾರ ಕಿಕ್ಕಿರಿದು ಸೇರಿದ್ದ ಜನ, ವಿಮಾನಗಳ ಹಾರಾಟವನ್ನು ಹತ್ತಿರದಿಂದ ಕಣ್ತುಂಬಿಕೊಂಡು ಸಂಭ್ರಮಿಸಿದರು.

ವೈಮಾನಿಕ ಪ್ರದರ್ಶನದ ಕೊನೆಯ ಎರಡು ದಿನ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿತ್ತು. ಎಳೆಬಿಸಿಲು ಏರುವ ಮುನ್ನವೇ ಲಗುಬಗೆಯಿಂದ ಬಂದು ಸೇರಿದ್ದ ಜನ, ಲೋಹದ ಹಕ್ಕಿಗಳ ಹಾರಾಟಕ್ಕೆ ಕಾತರದಿಂದ ಕಾದಿದ್ದರು. ಬೆಳಿಗ್ಗೆ 9 ಗಂಟೆಗೆ ಮೊದಲ ಪ್ರದರ್ಶನ ಆರಂಭವಾಯಿತು.

ಸುಖೋಯ್, ತೇಜಸ್ ಯುದ್ಧ ವಿಮಾನಗಳು ಘರ್ಜನೆ ನಡುವೆ ನೀಡಿದ ಪ್ರದರ್ಶನ ವೀಕ್ಷಕರನ್ನು ನಿಬ್ಬೆರಗಾಗಿಸಿತು. ಸಾರಂಗ್ ಮತ್ತು ಸೂರ್ಯಕಿರಣ ತಂಡ ನಡೆಸಿದ ಕಸರತ್ತು ನೆರೆದಿದ್ದವರನ್ನು ರೋಮಾಂಚನಗೊಳಿಸಿತು.

ADVERTISEMENT

ಆಕಾಶದಲ್ಲಿ ಬಿಡಿಸಿದ ಚಿತ್ತಾರ, ಎದುರಿನಿಂದ ಬಂದು ಡಿಕ್ಕಿಯಾಗುತ್ತವೆ ಎನ್ನುಷ್ಟರಲ್ಲೇ ಕ್ಷಣಾರ್ಧದಲ್ಲೇ ತಪ್ಪಿಸಿಕೊಂಡು ಬಾಗಿ ಸಾಗುವ ದೃಶ್ಯಗಳು ಅಚ್ಚರಿ ಮೂಡಿಸಿದವು. ಈ ಸಂದರ್ಭದಲ್ಲಿ ಜನರ ಕೇಕೆ ಹಾಕಿ ಸಂಭ್ರಮಿಸಿದರು.

ಒಂದು ಸುತ್ತಿನ ಪ್ರದರ್ಶನ ಮುಗಿದಾಗ ನಂತರ ಜನ ವಸ್ತಪ್ರದರ್ಶನ ಮಳಿಗೆಗಳಿಗೆ ಮುಗಿ ಬಿದ್ದರು.

ದೇಶಿ ಮತ್ತು ವಿದೇಶಿ ಯುದ್ಧ ವಿಮಾನಗಳು, ಅವುಗಳ ತಯಾರಿಕೆ ವಿಧಾನ, ಸಾಮರ್ಥ್ಯ ಎಲ್ಲದರ ಬಗ್ಗೆ ಮಾಹಿತಿ ಪಡೆದುಕೊಂಡರು. ಎಲ್ಲಾ ಮಾದರಿಯ ವಿಮಾನಗಳ ಬಳಿ ನಿಂತು ಮೊಬೈಲ್‌ನಲ್ಲಿ ಸೆಲ್ಫಿ ತೆಗೆದುಕೊಂಡು ಪುಳಕಿತರಾದರು.

‘ಸುಖೋಯ್’, ‘ತೇಜಸ್’ ಖರೀದಿಗೆ ನೂಕುನುಗ್ಗಲು!

ಯಲಹಂಕ ವಾಯುನೆಲೆಯಲ್ಲಿ ಸುಖೋಯ್, ತೇಜಸ್‌, ಸಾರಂಗ್, ಸೂರ್ಯಕಿರಣ, ಮಿಗ್–29 ವಿಮಾನಗಳ ಖರೀದಿಗೆ ನೂಕುನುಗ್ಗಲೇ ಏರ್ಪಟ್ಟಿತ್ತು!

ಹೌದು, ಈ ವಿಮಾನಗಳ ಖರೀದಿಗೆ ಜನ ಮುಗಿಬಿದ್ದಿದ್ದರು. ಆದರೆ, ಅವು ನಿಜವಾದ ವಿಮಾನಗಳಲ್ಲ, ಅವುಗಳ ಮಾದರಿಯಲ್ಲೇ ಇದ್ದ ಆಟಿಕೆ ವಿಮಾನಗಳು. ಎಚ್‌ಎಎಲ್ ಫ್ಯಾಮಿಲಿ ವೆಲ್‌ಫೇರ್ ಅಸೋಸಿಯೇಷನ್ ತೆರೆದಿರುವ ಮಳಿಗೆಯಲ್ಲಿ ಹಲವು ಬಗೆಯ ಆಟಿಕೆ ವಿಮಾನಗಳನ್ನು ಮಾರಾಟಕ್ಕೆ ಇಡಲಾಗಿತ್ತು.

ಮನೆ ಮತ್ತು ಕಚೇರಿಗಳಲ್ಲಿ ಟೇಬಲ್ ಮೇಲೆ ಮತ್ತು ಶೋಕೇಸ್‌ಗಳಲ್ಲಿ ಇಡಲು ತಯಾರಿಸಿರುವ ವಿವಿಧ ಗಾತ್ರದ ಆಟಿಕೆ ವಿಮಾನಗಳು ಜನರನ್ನು ಆಕರ್ಷಿಸಿದ್ದವು. ₹400ರಿಂದ ₹2100 ಮೌಲ್ಯದ ಈ ಆಟಿಕೆ ವಿಮಾನಗಳಿದ್ದವು. ಅದಲ್ಲದೇ ಎಚ್‌ಎಎಲ್ ಲೋಗೊ ಇರುವ ಟಿ–ಶರ್ಟ್‌ಗಳು, ಕೀ ಚೈನ್‌ಗಳೂ ಜನರನ್ನು ಆಕರ್ಷಿಸಿದ್ದವು.


ಕೆರೆ ಏರಿ ಮೇಲೆ ಜನರ ದಂಡು

ವಾಯುನೆಲೆಗೆ ಪ್ರವೇಶ ‍ಪಡೆಯಲು ಸಾಧ್ಯವಾಗದ ಜನ ಹೆದ್ದಾರಿ ಬದಿಯಲ್ಲಿರುವ ಹುಣಸ ಮಾರನಹಳ್ಳಿ ಕೆರೆಯ ಏರಿಯ ಮೇಲೆ ಕುಳಿತು ಲೋಹದ ಹಕ್ಕಿಗಳ ಕಸರತ್ತು ವೀಕ್ಷಿಸಿದರು.

ವಿಮಾನಗಳು ಆಗಸದಲ್ಲೇ ಕಸರತ್ತು ನಡೆಸುತ್ತಿದ್ದರಿಂದ ಹೊರಗಿದ್ದ ಜನರಿಗೂ ಹತ್ತಿರ ದಿಂದಲೇ ನೋಡಿದ ಅನುಭವ ಆಯಿತು. ರಸ್ತೆ ಬದಿಯಲ್ಲಿ ವಾಹನ ದಟ್ಟಣೆ ಉಂಟಾಗದಂತೆ ಸಂಚಾರ ಪೊಲೀಸರನ್ನೂ ನಿಯೋಜಿಸಲಾಗಿತ್ತು. ಕೆರೆಯ ಸುತ್ತಲೂ ಜನ ಜಾತ್ರೆಯೇ ಸೇರಿತ್ತು.
ಸಂಚಾರ ದಟ್ಟಣೆ

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಗುರುವಾರ ಬೆಳಿಗ್ಗೆಯಿಂದಲೇ ಸಂಚಾರ ದಟ್ಟಣೆ ಉಂಟಾಗಿತ್ತು.

ಮೇಖ್ರಿ ವೃತ್ತ, ಹೆಬ್ಬಾಳ ದಿಂದಲೇ ಸಂಚಾರ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಬಸ್, ಲಾರಿ ಸೇರಿ ಭಾರಿ ವಾಹನಗಳನ್ನು ತಡೆದು ಸರ್ವೀಸ್ ರಸ್ತೆಯಲ್ಲಿ ಕಳುಹಿಸಿದರು. ಸಂಜೆ ವಾಯುನೆಲೆಯಿಂದ ಹೊರಟವರೂ ದಟ್ಟಣೆಯಲ್ಲಿ ಸಿಲುಕಿದರು.

ವಿದೇಶಿ ಯುದ್ಧ ವಿಮಾನದಲ್ಲಿ ಹತ್ತಿ ಕುಳಿತು ಫೋಟೊ ತೆಗೆಸಿಕೊಳ್ಳಲು ಆವರಣದಲ್ಲಿ ಅವಕಾಶ ಇತ್ತು. ಅದಕ್ಕೆ ಹತ್ತಲು ಜನ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತಿದ್ದು ಸಾಮಾನ್ಯವಾಗಿತ್ತು. ಮಧ್ಯಾಹ್ನವೂ ಎರಡನೇ ಸುತ್ತಿನ ವೈಮಾನಿಕ ಪ್ರದರ್ಶನ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.