ಬೆಂಗಳೂರು: ‘ಸೂರ್ಯಕಿರಣ’ ವಿಮಾನಗಳ ಪತನದಿಂದಾಗಿ ಉಂಟಾದ ದುಃಖದ ಕಾರ್ಮೋಡದ ಮಧ್ಯೆ ಬುಧವಾರದಿಂದ ಏಷ್ಯಾದ ಬೃಹತ್ ಏರೋ ಇಂಡಿಯಾ 2019 ಪ್ರದರ್ಶನ ಆರಂಭಗೊಳ್ಳಲಿದೆ.
ಏರೋ ಇಂಡಿಯಾ ಪ್ರದರ್ಶನದ ತಯಾರಿ ಕುರಿತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳ ವಾರ ಸಂಜೆ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಪುಲ್ವಾಮಾದಲ್ಲಿ ಉಗ್ರರ ದಾಳಿ ಮತ್ತು ಸೂರ್ಯಕಿರಣ ವಿಮಾನಗಳ ಪತನದ ಕರಿಛಾಯೆ ಮಾಧ್ಯಮಗೋಷ್ಠಿಯನ್ನೂ ಆವರಿಸಿತ್ತು.
12 ನೇ ಏರೋ ಇಂಡಿಯಾ ಪ್ರದರ್ಶನಕ್ಕೆ ‘ದ ರನ್‌ವೇ ಟು ಎ ಬಿಲಿಯನ್ ಆಪರ್ಚುನಿಟೀಸ್’ ಎಂಬ ಘೋಷ ವಾಕ್ಯ ನೀಡಲಾಗಿದ್ದು, ಭಾರತದಲ್ಲಿ ವೈಮಾನಿಕ ಕ್ಷೇತ್ರಕ್ಕಿರುವ ಅವಕಾಶಗಳ ಬಗ್ಗೆ ವಿಶ್ವದ ಗಮನ ಸೆಳೆಯುವುದರ ಜೊತೆಗೆ ಹೂಡಿಕೆಗೆ ಅವಕಾಶ ಕಲ್ಪಿಸುವುದಕ್ಕೆ ಇದು ವೇದಿಕೆಯಾಗಲಿದೆ.
ಒಟ್ಟು 5 ದಿನಗಳ ಈ ಕಾರ್ಯಕ್ರಮವನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಉದ್ಘಾಟಿಸಲಿದ್ದು, ಮುಖ್ಯಮಂತ್ರಿ ಎಚ್.ಡಿ.
ಕುಮಾರಸ್ವಾಮಿ ಮುಖ್ಯ ಅತಿಥಿಯಾಗಿ ಭಾಗಹಿಸುವರು.
ಇದನ್ನೂ ಓದಿ:ವಿಮಾನ ದುರಂತಕ್ಕೆ ಬೆಚ್ಚಿತು ಇಸ್ರೊ ಬಡಾವಣೆ
ಈ ಐದೂ ದಿನಗಳನ್ನು ವಿಶೇಷ ದಿನಗಳಾಗಿ ವಿಂಗಡಿಸಲಾಗಿದೆ. ಫೆ 20 ಬಿಜಿನೆಸ್ ಡೇ, ಫೆ 21 ನವೋದ್ಯಮ ದಿನ, ಫೆ 22 ತಂತ್ರಜ್ಞಾನ ದಿನ, ಫೆ 23 ಮಹಿಳಾ ದಿನ, ಫೆ 24 ಸಮಾರೋಪ ದಿನ ಎಂದು ಆಚರಿಸಲಾಗುವುದು. ಹಿಂದೆಂದಿಗಿಂತಲೂ ಈ ಬಾರಿ ಹೆಚ್ಚು ಕಂಪನಿಗಳು ಮತ್ತು ದೇಶಗಳು ಪ್ರದರ್ಶನದಲ್ಲಿ ಭಾಗವಹಿಸುತ್ತಿವೆ. 10 ದೇಶಗಳ ಸಚಿವರು ಪಾಲ್ಗೊಳ್ಳುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಸೂರ್ಯಕಿರಣ ಪತನಗೊಂಡ ಹಿನ್ನೆಲೆಯಲ್ಲಿ ಬುಧವಾರ ಸೂರ್ಯ ಕಿರಣ ವಿಮಾನಗಳ ವೈಮಾನಿಕ ಕಸರತ್ತು ಇರುವುದಿಲ್ಲ ಎಂದೂ ನಿರ್ಮಲಾ ಸೀತಾರಾಮನ್ ಅವರುಸ್ಪಷ್ಟಪಡಿಸಿದರು.
ಡ್ರೋನ್ ಒಲಿಂಪಿಕ್: ಎರಡನೇ ದಿನವನ್ನು(ಫೆ.21) ನವೋದ್ಯಮ ದಿನವನ್ನಾಗಿ ಆಚರಿಸಲಾಗುವುದು. ಇದರ ಪ್ರಯುಕ್ತ ಯಲಹಂಕ ವಸ್ತು ಪ್ರದರ್ಶನ ಮೈದಾನದಲ್ಲಿ ಡ್ರೋನ್ ಒಲಿಂಪಿಕ್‌ನ ಫೈನಲ್ ಸ್ಪರ್ಧೆ ನಡೆಯಲಿದೆ.
ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಅವುಗಳೆಂದರೆ ವಿಚಕ್ಷಣೆ, ಭಾರ ಇಳಿಸುವಿಕೆ ಮತ್ತು ರಚನಾ ಕ್ರಮದಲ್ಲಿ ಹಾರಾಟ. ಇದರಲ್ಲಿ ಭಾಗವಹಿಸಲು 120 ಪ್ರವೇಶಗಳು ಬಂದಿದ್ದು, ಜರ್ಮನಿ, ಇಸ್ರೇಲ್, ಯುಕೆ, ಉಕ್ರೇನ್‌ಗಳ ಸ್ಪರ್ಧಿಗಳೂ ಭಾಗವಹಿಸುತ್ತಾರೆ.ಒಟ್ಟು ₹38 ಲಕ್ಷ ಬಹುಮಾನವಿದೆ.
ನಗರದ ಅಶೋಕ ಹೊಟೇಲ್‌ನಲ್ಲಿ ನವೋದ್ಯಮ ಮಂಥನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವೈಮಾನಿಕ ಕ್ಷೇತ್ರದ 15 ಯಶಸ್ವಿ ಭಾರತೀಯ ನವೋದ್ಯಮಿಗಳು ಭಾಗವಹಿಸಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.
ಇದನ್ನೂ ಓದಿ:‘ಸೂರ್ಯಕಿರಣ’ ಭಸ್ಮ: ಪೈಲಟ್ ಸಾವು
ಫೆ. 23 ರಂದು ಮಹಿಳಾ ದಿನ ದಂದು ವೈಮಾನಿಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮಹಿಳೆಯರನ್ನು ಗೌರವಿಸಲಾಗುವುದು. ಅಂದು ಕಾರ್ಯಕ್ರಮದಲ್ಲಿ ಭಾಗವಹಿಸಲು ಅಮೆರಿಕದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಅವರಿಗೆ ಆಹ್ವಾನ ನೀಡಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ ಇನ್ನೂ ಖಚಿತಪಡಿಸಿಲ್ಲ. ವೈಮಾನಿಕ ಕ್ಷೇತ್ರದಲ್ಲಿ ಮಹಿಳೆಯರ ಕುರಿತು ಅಂಚೆ ಚೀಟಿ ಬಿಡುಗಡೆ ಮಾಡಲಾಗುವುದು. ಅಲ್ಲದೆ, ಮಹಿಳೆಯ ಸಾಧನೆ ಕುರಿತ ಪುಸ್ತಕವೂ ಬಿಡುಗಡೆ ಆಗಲಿದೆ. ಮಹಿಳಾ ದಿನದಂದೇ ಮಹಿಳಾ ಪೈಲಟ್ ಗಳು ವಿಮಾನ ಹಾರಾಟದ ತಮ್ಮ ಸಾರ್ಮಥ್ಯವನ್ನು ಪ್ರದರ್ಶಿಸಲಿದ್ದಾರೆ.
ಭಾಗವಹಿಸುತ್ತಿರುವ ದೇಶಗಳು:51
ಅಧಿಕೃತ ಪ್ರತಿನಿಧಿಗಳು:44 (ಅಮೆರಿಕಾ, ಯುಕೆ, ರಷ್ಯಾ, ಜೆಕ್ ಗಣರಾಜ್ಯ, ಕಝಕಿಸ್ತಾನ್, ಯುಎಇ, ಚೀನಾ, ಫ್ರಾನ್ಸ್, ಬಾಂಗ್ಲಾದೇಶ, ನೈಜೀರಿಯಾ)
ಈ ಬಾರಿಯ ಪ್ರಥಮಗಳೇನು
* ಜಾಗತಿಕ ಸಿಇಒಗಳ ದುಂಡು ಮೇಜಿನ ಸಭೆ
* ಡ್ರೋನ್ ಒಲಿಂಪಿಕ್
* ಜ್ಞಾನ ಸಮಾವೇಶಗಳು
ಭಾಗವಹಿಸುತ್ತಿರುವ ಪ್ರಮುಖ ಕಂಪನಿಗಳು
* ಲಾಕ್ಹೀಡ್ ಮಾರ್ಟಿನ್(ಅಮೆರಿಕಾ)
* ಎಸ್‌ಎಎಬಿ(ಸ್ವೀಡನ್)
* ಬೋಯಿಂಗ್(ಅಮೆರಿಕ)
* ಏರ್‌ಬಸ್(ಫ್ರಾನ್ಸ್)
* ರೋಸೊಬೊರಾನ್(ರಷ್ಯಾ)
* ಡಾಸೊ(ಫ್ರಾನ್ಸ್)
* ಬಿಎಇ ಸಿಸ್ಟಮ್(ಯುಕೆ)
ಪ್ರಥಮ ಬಾರಿಗೆ ಪಾಲ್ಗೊಳ್ಳುವ ವಿಮಾನಗಳು
* ಏರ್‌ಬಸ್ 330 ನಿಯೊ
* ಏರ್‌ಬಸ್ ಸಿ–295 ಟ್ರಾನ್ಸ್‌ಪೋರ್ಟ್ ಜೆಟ್
* ಎನ್‌ಎಎಲ್ –ಸರಸ್
* ಎಚ್ಎಎಲ್‌ನ– ಎಚ್‌ಟಿಟಿ–40 ಬೇಸಿಕ್ ಟ್ರೈನರ್
* ಎಚ್‌ಎಎಲ್‌ನ ಎಲ್‌ಯುಎಚ್
ವಿಂಟೇಜ್ ವಿಮಾನಗಳು
* ಬಿ–52 ಬಾಂಬರ್, ಬೋಯಿಂಗ್
* ಡಕೋಟ
ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶ
* ಫೆ 23 ಮತ್ತು 24 ರಂದು ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶ ಇದೆ.
ಬೃಹತ್ ಪ್ರದರ್ಶನ
ಏನೆಲ್ಲಾ ಇದೆ– 2019;2017
ಪ್ರದರ್ಶಕರು– 403;214
ಭಾರತೀಯ ಪ್ರದರ್ಶಕರು– 238;132
ಅಂತರರಾಷ್ಟ್ರೀಯ ಪ್ರದರ್ಶಕರು– 165;82
ಭಾಗವಹಿಸುವ ವಿಮಾನಗಳು– 63;58
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.