ಬೆಂಗಳೂರು:ವಿಮಾನ ಮತ್ತು ರಕ್ಷಣಾ ವ್ಯವಸ್ಥೆಗೆ ಬೇಕಾದ ಎಲ್ಲ ಉಪಕರಣಗಳನ್ನು ಅಭಿವೃದ್ಧಿಪಡಿಸುವ ಸಾಮರ್ಥ್ಯ ಹಿಂದೂಸ್ತಾನ್ ಏರೋನಾಟಿಕ್ಸ್‌ಗೆ (ಎಚ್‍ಎಎಲ್) ಇದೆ ಎಂದು ಅಮೆರಿಕದ ಕಂಪನಿ ಬೋಯಿಂಗ್ ವಿಶ್ವಾಸ ವ್ಯಕ್ತಪಡಿಸಿದೆ.
ಬೋಯಿಂಗ್‍ನ ಅಂತರರಾಷ್ಟ್ರೀಯ ಮಾರಾಟ ವಿಭಾಗದ ಉಪಾಧ್ಯಕ್ಷ ಥಾಮಸ್ ಬ್ರೆಕೆನ್ರಿಡ್ಜ್ ಅವರು ‘ಪ್ರಜಾವಾಣಿ’ ಜತೆ ಮಾತನಾಡಿ, ಭಾರತದಲ್ಲಿ ಸರ್ಕಾರಿ ಸ್ವಾಮ್ಯದ ಕಂಪನಿಗಳ ಪೈಕಿ ಎಚ್‍ಎಎಲ್ ಜತೆ ಮಾತ್ರ ಸಹಭಾಗಿತ್ವ ಹೊಂದಿರುವುದಾಗಿ ತಿಳಿಸಿದರು.
ಎಚ್‍ಎಎಲ್ ಜತೆಗಿನ ನಮ್ಮ ಸಹಭಾಗಿತ್ವ ಹೊಸದಲ್ಲ. ಹಲವು ವರ್ಷಗಳಷ್ಟು ಹಳೆಯದು. ಇದರಿಂದ ಭಾರತ ಮತ್ತು ಅಮೆರಿಕಕ್ಕೆ ನೆರವಾಗಿದೆ ಎಂದು ಅವರು ಹೇಳಿದರು.
ಭಾರತಕ್ಕೆ ‘ಎಫ್/18 ಸೂಪರ್ ಹಾರ್ನೆಟ್’ ವಿಮಾನ ತಯಾರಿಸಿಕೊಡುವ ಸಲುವಾಗಿ ಎಚ್‍ಎಎಲ್ ಮತ್ತು ಮಹಿಂದ್ರಾ ಡಿಫೆನ್ಸ್ ಸಿಸ್ಟಮ್ಸ್ ಜತೆ ಕಳೆದ ವರ್ಷ ಏಪ್ರಿಲ್‍ನಲ್ಲಿ ಬೋಯಿಂಗ್ ಒಪ್ಪಂದ ಮಾಡಿಕೊಂಡಿದೆ. ವಿಮಾನಯಾನ ಕ್ಷೇತ್ರದಲ್ಲಿನ ಉತ್ಪಾದನೆ, ಕೌಶಲಾಭಿವೃದ್ಧಿ, ಸಂಶೋಧನೆ, ಉದ್ಯೋಗ ಸೃಷ್ಟಿ ಮತ್ತು ಎಂಜಿನಿಯರಿಂಗ್ ಕ್ಷೇತ್ರವನ್ನು ಗಮನದಲ್ಲಿಟ್ಟುಕೊಂಡು ಈ ಒಪ್ಪಂದ ಮಾಡಿಕೊಳ್ಳಲಾಗಿತ್ತು.
ಮೊದಲ ‘22 ಎಎಚ್-64ಇ ಅಪಾಚೆ ಟ್ವಿನ್ ಟರ್ಬೊಶಾಫ್ಟ್ ಅಟ್ಯಾಕ್ ಹೆಲಿಕಾಪ್ಟರ್’ ಅನ್ನು ಈ ವರ್ಷ ಜುಲೈನಲ್ಲಿ ಭಾರತೀಯ ವಾಯುಪಡೆಗೆ ಹಸ್ತಾಂತರಿಸಲಾಗುವುದು ಎಂದೂ ಥಾಮಸ್ ತಿಳಿಸಿದರು. ‘15 ಸಿಎಚ್-47ಎಫ್ ಚಿನೂಕ್ ಹೆವಿ ಲಿಫ್ಟ್ ಹೆಲಿಕಾಪ್ಟರ್’ ಒದಗಿಸುವಂತೆಯೂ ಬೋಯಿಂಗ್‍ಗೆ ಭಾರತ ಮನವಿ ಸಲ್ಲಿಸಿದೆ.
ತೇಜಸ್‌ಗೆ ಇನ್ನು ಸ್ವದೇಶಿ ರೆಡಾರ್
ಬೆಂಗಳೂರು:ಸ್ವದೇಶಿ ನಿರ್ಮಿತ ಲಘು ಯುದ್ಧವಿಮಾನ ತೇಜಸ್‌ಗೆಂದೇ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಬೆಂಗಳೂರಿನ ಪ್ರಯೋಗಾಲಯದಲ್ಲಿ ಹೊಸ ರೇಡಾರ್ ಅಭಿವೃದ್ಧಿಪಡಿಸಲಾಗಿದೆ. ಅದಕ್ಕೆ ‘ಉತ್ತಮ್’ ಎಂದು ಹೆಸರಿಸಲಾಗಿದ್ದು, ಅದರ ಕ್ಷಮತೆ ಪರೀಕ್ಷೆ ಇನ್ನಷ್ಟೇ ನಡೆಯಬೇಕಿದೆ.
ಸದ್ಯ ಪ್ರಾಯೋಗಿಕವಾಗಿ ಹೊಸ ‘ಉತ್ತಮ್’ ಅನ್ನು ಬಳಸಲಾಗುತ್ತಿದೆ. ಮುಂದಿನ ತಿಂಗಳು ತೇಜಸ್ ಯುದ್ಧವಿಮಾನಕ್ಕೆ ಅಳವಡಿಸಿ ಪರೀಕ್ಷೆ ನಡೆಸುವ ನಿರೀಕ್ಷೆ ಇದೆ. ಇದು ಏಕಕಾಲದಲ್ಲಿ ಹಲವು ಗುರಿಗಳನ್ನು ಪತ್ತೆ ಹಚ್ಚಬಲ್ಲದಾಗಿದ್ದು, ಶತ್ರು ಪಾಳೆಯದ ಚಲನವಲನದ ಹೈ–ರೆಸಲ್ಯೂಷನ್ ಫೋಟೊ ಸೆರೆಹಿಡಿಯಲಿದೆ ಎಂದುಡಿಆರ್‌ಡಿಒ ಮೂಲಗಳು ತಿಳಿಸಿವೆ.
‘ವಿಮಾನದಿಂದ ವಿಮಾನದ ಮೇಲೆ, ವಿಮಾನದಿಂದ ಯುದ್ಧನೌಕೆಗಳ ಮೇಲೆ ಮತ್ತು ಭೂಮಿ ಮೇಲಿನ ಗುರಿಗಳ ಮೇಲೆ ನಡೆಯಲಿರುವ ವೈಮಾನಿಕ ದಾಳಿಯನ್ನು ಪತ್ತೆಹಚ್ಚಿ ಮುನ್ನೆಚ್ಚರಿಕೆ ನೀಡುವ ಸಾಮರ್ಥ್ಯ ಈ ರೇಡಾರ್‌ಗಿದೆ’ ಎಂದು ಡಿಆರ್‌ಡಿಒದ ಎಲೆಕ್ಟ್ರಾನಿಕ್ಸ್ ಮತ್ತು ರೇಡಾರ್ ಅಭಿವೃದ್ಧಿ ವಿಭಾಗದ ನಿರ್ದೇಶಕ ಎಸ್.ಎಸ್. ನಾಗರಾಜ್ ಮಾಹಿತಿ ನೀಡಿದರು.
ಸದ್ಯ ತೇಜಸ್ ಯುದ್ಧವಿಮಾನಕ್ಕೆ ಇಸ್ರೇಲ್‌ನ ‘ಇಎಲ್‌ಟಿಎ’ ಕಂಪನಿ ಅಭಿವೃದ್ಧಿಪಡಿಸಿರುವ ‘ಇಎಲ್/ಎಂ 2052 ರೇಡಾರ್’ ಅನ್ನು ಬಳಸಲಾಗುತ್ತಿದೆ.
ತೇಜಸ್‌ನತ್ತ ಪ್ರೇಕ್ಷಕರ ಚಿತ್ತ:
ಡಿಆರ್‌ಡಿಒ ಪ್ರದರ್ಶನ ಮಳಿಗೆಯಲ್ಲಿ ಆಯೋಜಿಸಲಾಗಿರುವ ತೇಜಸ್ ಯುದ್ಧವಿಮಾನದ 360 ಡಿಗ್ರಿ ವರ್ಚುವಲ್ ರಿಯಾಲಿಟಿ ಕೇಂದ್ರದತ್ತಲೇ ಬಹುತೇಕ ಪ್ರೇಕ್ಷಕರು ಚಿತ್ತ ನೆಟ್ಟಿದ್ದರು. ತೇಜಸ್‌ಹಾರಾಟದ ಅನುಭವ ಪಡೆಯುವ ತವಕ ಅಲ್ಲಿ ಸೇರಿದ್ದವರಲ್ಲಿತ್ತು. ವರ್ಚುವಲ್ ರಿಯಾಲಿಟಿ ಕೇಂದ್ರ ಪ್ರವೇಶಿಸಲು ನೂರಾರು ಮಂದಿ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ ಸಂಜೆವರೆಗೆ ಸಾಮಾನ್ಯವಾಗಿತ್ತು.
ಪ್ರಮುಖ ಒಪ್ಪಂದಗಳಿಲ್ಲ
ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಮೂರು ದಿನ ಪೂರ್ಣಗೊಂಡಿದೆ. ಆದರೂ ವಿದೇಶಿ ಕಂಪನಿಗಳು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿಲ್ಲ. ರಫೇಲ್ ಒಪ್ಪಂದದ ಕುರಿತಾಗಿ ಉಂಟಾದ ವಿವಾದ, ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.
‘ನೀವು ಸಾರ್ವತ್ರಿಕ ಚುನಾವಣೆಯ ಸನಿಹದಲ್ಲಿದ್ದೀರಿ. ಹೀಗಾಗಿ ಪ್ರಮುಖ ಕಾರರುಗಳಿಗೆ ಸಹಿ ಹಾಕಲು ನಾವು ಹಿಂದೇಟು ಹಾಕುತ್ತಿದ್ದೇವೆ’ ಎಂದು ರಷ್ಯಾದ ನಿಯೋಗದಲ್ಲಿದ್ದವರೊಬ್ಬರು ಪ್ರಜಾವಾಣಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.