ಬೆಂಗಳೂರು: ‘ಇನ್ನು 10 ವರ್ಷಗಳಲ್ಲಿ ಭಾರತಕ್ಕೆ 1,600 ವಿಮಾನಗಳ ಅಗತ್ಯವಿದೆ. ಇದನ್ನು ಪೂರೈಸಲು ಪ್ರತಿ ವರ್ಷ 150ರಿಂದ 160 ವಿಮಾನಗಳನ್ನು ಉತ್ಪಾದಿಸುವಂತಹ ಮೂಲಸೌಕರ್ಯವನ್ನು ದೇಶದಲ್ಲಿ ಸೃಷ್ಟಿಸಬೇಕಿದೆ’ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
‘ಏರೋ ಇಂಡಿಯಾ 2019’ ವೈಮಾನಿಕ ಪ್ರದರ್ಶನದಲ್ಲಿ ಅಸೋಚಾಂ ವತಿಯಿಂದ ‘ಏರೋಸ್ಪೇಸ್ ಉತ್ಪಾದನೆಗೆ ಪೂರಕ ಪರಿಸರ ನಿರ್ಮಾಣ’ ಎಂಬ ವಿಷಯದ ಕುರಿತು ಬುಧವಾರ ಏರ್ಪಡಿಸಿದ್ದ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.
‘ಭಾರತೀಯ ಏರೋಸ್ಪೇಸ್ ಕ್ಷೇತ್ರ ತುಂಬಾ ಸದೃಢವಾಗುತ್ತಿದೆ. ಈ ಕ್ಷೇತ್ರದ ಜಾಗತಿಕ ಮಾರುಕಟ್ಟೆ ಶೇ 3ರಷ್ಟು ಬೆಳವಣಿಗೆ ದರವನ್ನು ಹೊಂದಿದ್ದರೆ, ಭಾರತದ ಮಾರುಕಟ್ಟೆ ಶೇ 15.7ರಲ್ಲಿ ಅಭಿವೃದ್ಧಿಯಾಗುತ್ತಿದೆ. ಇದಕ್ಕೆ ಪೂರಕವಾಗಿ ಕೈಗಾರಿಕೆಗಳ ನಿರೀಕ್ಷೆ ಏನು, ರಕ್ಷಣಾ ಇಲಾಖೆ ಬೇಡಿಕೆ ಏನು, ಈ ಕುರಿತು ಇರುವ ಕೊರತೆಗಳೇನು. ಇದನ್ನು ನಿವಾರಿಸಲು ಏನು ಕ್ರಮಕೈಗೊಳ್ಳಬೇಕು ಎಂಬ ಬಗ್ಗೆ ಚರ್ಚೆ ನಡೆಯಬೇಕು’ ಎಂದರು.
‘ರಕ್ಷಣಾ ಇಲಾಖೆಯ ಜೊತೆ ನಾಗರಿಕ ವಿಮಾನಯಾನ ಇಲಾಖೆಗಳೆರಡೂ ಸೇರಿ ಈ ವರ್ಷದ ವೈಮಾನಿಕ ಪ್ರದರ್ಶನ ಏರ್ಪಡಿಸಿವೆ. ವಿವಿಧ ಕಂಪನಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೂ ಆಲೋಚನೆ ಹಂಚಿಕೊಳ್ಳಲುಮೊದಲ ಬಾರಿಗೆ ಮುಕ್ತ ಅವಕಾಶ ನೀಡಿದ್ದೇವೆ. ಕೈಗಾರಿಕೆಗಳು ಎದುರಿಸುತ್ತಿದ್ದ ಸಮಸ್ಯೆಗಳನ್ನು ನಿವಾರಿಸಲು ಸರ್ಕಾರ ಬದ್ಧವಾಗಿದೆ’ ಎಂದರು.
‘ವಿಮಾನಗಳ ನಿರ್ವಹಣೆ, ದುರಸ್ತಿ ಹಾಗೂ ತಪಾಸಣೆಗೆ ಅನುಕೂಲಕರ ವಾತಾವರಣ ಕಲ್ಪಿಸಬೇಕಿದೆ. ಈ ಸಲುವಾಗಿ ತರಬೇತಿ ಪಡೆದ ಕೌಶಲಯುತ ಮಾನವ ಸಂಪನ್ಮೂಲವನ್ನು ನಿರ್ಮಿಸುವ ನಿಟ್ಟಿನಲ್ಲೂ ಹೆಜ್ಜೆ ಇಡಬೇಕಿದೆ. ಮೂಲ ಸಾಮಗ್ರಿಗಳ ಉತ್ಪಾದಕರಿಗೆ ಉತ್ತೇಜನ ನೀಡಬೇಕಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.