ಹೊಸಕೋಟೆ (ಬೆಂಗಳೂರು ಗ್ರಾಮಾಂತರ): ತಾಲ್ಲೂಕಿನ ದೊಡ್ಡಬೆಳಮಂಗಲ ಗ್ರಾಮದ ಹಂದಿ ಸಾಕಾಣಿಕೆ ಕೇಂದ್ರದ ಹಂದಿಗಳಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆಯಾಗಿದೆ.
ರಾಜ್ಯದಲ್ಲಿಯೇ ಮೊದಲ ಬಾರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಆಫ್ರಿಕನ್ ಹಂದಿ ಜ್ವರ ಕಾಣಿಸಿಕೊಂಡಿರುವುದು ಸಾಕಾಣಿಕೆದಾರರ ನಿದ್ದೆಗೆಡೆಸಿದೆ. ಮಾಂಸ ಮಾರಾಟದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.
ನಾಗಾಲ್ಯಾಂಡ್ ಮತ್ತಿತರ ಕಡೆ ಆಫ್ರಿಕನ್ ಹಂದಿ ಜ್ವರದ ಪ್ರಕರಣ ಪತ್ತೆಯಾಗಿತ್ತು. ಅಲ್ಲಿನ ಹಂದಿಗಳನ್ನು ಜಿಲ್ಲೆಗೆ ತಂದಾಗ ಸೋಂಕು ಹರಡಿರುವ ಸಾಧ್ಯತೆ ಇದೆ. ಫಾರಂನಿಂದ ಮತ್ತೊಂದು ಫಾರಂಗೆ ರವಾನೆ ಮಾಡುವಾಗಲೂ ಸೋಂಕು ಹರಡಿರಬಹುದು ಎಂದು ಪಶುವೈದ್ಯರು ಶಂಕಿಸಿದ್ದಾರೆ.
ಆರು ತಿಂಗಳು ಬೀಗ:
ಮುಂಜಾಗ್ರತೆಯಾಗಿ ಕೇಂದ್ರವನ್ನು ಆರು ತಿಂಗಳವರೆಗೆ ಮುಚ್ಚುವಂತೆ ಜಿಲ್ಲಾಡಳಿತ ಆದೇಶಿಸಿದೆ. ಈ ಕೇಂದ್ರದ ಸುತ್ತಲಿನ ಒಂದು ಕಿ.ಮೀ ಪ್ರದೇಶವನ್ನು ರೋಗಪೀಡಿತ ವಲಯ ಹಾಗೂ ಹತ್ತು ಕಿ.ಮೀ ಪ್ರದೇಶವನ್ನು ಜಾಗೃತಿ ವಲಯವೆಂದು ಘೋಷಿಸಲಾಗಿದೆ.
ಈ ಕೇಂದ್ರದಲ್ಲಿ ಒಟ್ಟು 550 ಹಂದಿಗಳನ್ನು ಸಾಕಲಾಗಿತ್ತು. ಕಳೆದ ತಿಂಗಳಿನಿಂದ ಒಂದೊಂದೇ ಹಂದಿ ಮೃತಪಡುತ್ತಿದ್ದವು. ಇವುಗಳ ಅಂಗಾಂಗಗಳನ್ನು ಭೋಪಾಲ್‌ನ ರಾಷ್ಟ್ರೀಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅಲ್ಲಿಂದ ಬಂದ ವರದಿ ಆಫ್ರಿಕನ್ ಹಂದಿ ಜ್ವರ ಕಾಣಿಸಿಕೊಂಡಿರುವುದನ್ನು ದೃಢಪಡಿಸಿದೆ.
ಈವರೆಗೆ ಒಟ್ಟು 203 ಹಂದಿಗಳು ಸೋಂಕಿನಿಂದ ಮೃತಪಟ್ಟಿವೆ. ಈ ಹಿನ್ನೆಲೆಯಲ್ಲಿ ಸಾಕಾಣಿಕೆ ಕೇಂದ್ರದಲ್ಲಿದ್ದ ಉಳಿದ ಹಂದಿಗಳನ್ನು ಸಾಯಿಸಿ ವೈಜ್ಞಾನಿಕ ವಿಧಾನ ಅನುಸರಿಸಿ ಗುಂಡಿ ತೋಡಿ ಮುಚ್ಚಲಾಗಿದೆ. ಸೋಂಕು ಬೇರೆಡೆ ಹರಡದಂತೆ ಕೇಂದ್ರದ ಮೇಲೆ ಪಶುಪಾಲನೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ನಿಗಾವಹಿಸಿದ್ದಾರೆ.
ಒಂದು ಕಿಲೋ ಮೀಟರ್ ವ್ಯಾಪ್ತಿಯ ಎಲ್ಲಾ ಹಂದಿ ಸಾಕಾಣಿಕಾ ಕೇಂದ್ರಗಳನ್ನು ಮುಚ್ಚಲಾಗಿದೆ. ಜೊತೆಗೆ, ಕೇಂದ್ರದ ಸುತ್ತಮುತ್ತ ಜನರ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ. ಹೊಸದಾಗಿ ಬೇರೆ ಕಡೆಯಿಂದ ಹಂದಿಗಳನ್ನು ಖರೀದಿಸಿ ತರುವುದನ್ನೂ ನಿಷೇಧಿಸಲಾಗಿದೆ. ಸೋಂಕಿತ ಪ್ರದೇಶಕ್ಕೆ ಸಂದರ್ಶಕರು ಭೇಟಿ ನೀಡಬಾರದು. ಅಲ್ಲಿನ ಸಿಬ್ಬಂದಿ ಬೇರೆ ಫಾರಂಗಳಿಗೆ ಹೋಗಬಾರದು ಎಂದು ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.