ಬೆಂಗಳೂರು: ದ್ವಿತೀಯ ಪಿಯುಗೆ ಪ್ರಸಕ್ತ ವರ್ಷದಿಂದ ಮೂರು ವಾರ್ಷಿಕ ಪರೀಕ್ಷೆಗಳು ನಡೆಯುತ್ತಿದ್ದು, ಉತ್ತೀರ್ಣತೆಯ ಪ್ರಮಾಣ ಶೇ 90 ದಾಟುವ ನಿರೀಕ್ಷೆಗೆ ಇದೆ. ಆದರೆ, ತೇರ್ಗಡೆಯ ಪ್ರಮಾಣಕ್ಕೆ ತಕ್ಕಂತೆ ಪದವಿ ಕೋರ್ಸ್‌ಗಳಿಗೆ ಅಗತ್ಯವಾದ ಕಾಲೇಜುಗಳಿಲ್ಲದೇ ವಿದ್ಯಾರ್ಥಿಗಳು ಪ್ರವೇಶಕ್ಕಾಗಿ ಪರಿತಪಿಸಬೇಕಿದೆ.
ಕಳೆದ ಏಳು ವರ್ಷಗಳಿಂದ ಈಚೆಗೆ ದ್ವಿತೀಯ ಪಿಯು ಫಲಿತಾಂಶದಲ್ಲಿ ಗಣನೀಯ ಏರಿಕೆಯಾಗಿದೆ. ಎರಡು ವರ್ಷಗಳಲ್ಲೇ ಉತ್ತೀರ್ಣತೆಯ ಪ್ರಮಾಣ ಶೇ 20ರಷ್ಟು ಹೆಚ್ಚಳವಾಗಿದೆ. ಈ ಬಾರಿ 5.52 ಲಕ್ಷ ವಿದ್ಯಾರ್ಥಿಗಳು (ಶೇ 81.15) ತೇರ್ಗಡೆಯಾಗುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. 2022ರಲ್ಲಿ ಶೇ 61.88 ಫಲಿತಾಂಶ ಬಂದಿತ್ತು.
ಕಲಾ ವಿಭಾಗದ ವಿದ್ಯಾರ್ಥಿಗಳಿಗೇ ಸಮಸ್ಯೆ:
ವಿಜ್ಞಾನ ವಿಭಾಗದಲ್ಲಿ ಈ ಬಾರಿ ದಾಖಲೆಯ 2.49 ಲಕ್ಷ ವಿದ್ಯಾರ್ಥಿಗಳು (ಶೇ 89.96) ತೇರ್ಗಡೆಯಾಗಿದ್ದರೂ ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳು ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಿರುವ ಕಾರಣ ಪ್ರವೇಶಕ್ಕೆ ವಿಪುಲ ಅವಕಾಶಗಳಿವೆ. ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ಅಖಿಲ ಭಾರತ ಮಟ್ಟದಲ್ಲಿ ನಡೆವುದರಿಂದ ರಾಜ್ಯದ ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆಯುತ್ತಿದ್ದಾರೆ. 2014ರಲ್ಲಿ 51,000 ಇದ್ದ ವೈದ್ಯಕೀಯ ಸೀಟುಗಳು ಈಗ ಒಂದು ಲಕ್ಷ ದಾಟಿದೆ.
ವೈದ್ಯಕೀಯ ಶಿಕ್ಷಣ ಹೊರತುಪಡಿಸಿ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಸಿಇಟಿ) ಪ್ರತಿ ವರ್ಷ ಸರಾಸರಿ 2.50 ಲಕ್ಷ ವಿದ್ಯಾರ್ಥಿಗಳು ಬರೆಯತ್ತಾರೆ. ಎಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶುಸಂಗೋಪನೆ, ಯೋಗ ಮತ್ತು ನ್ಯಾಚುರೋಪಥಿ, ಬಿ ಫಾರ್ಮಾ, ಡಿ ಫಾರ್ಮಾ ಹಾಗೂ ನರ್ಸಿಂಗ್ ಕೋರ್ಸ್‌ಗಳಿಗೆ ಕಳೆದ ಬಾರಿ 2 ಲಕ್ಷ ವಿದ್ಯಾರ್ಥಿಗಳು ಅರ್ಹರಾಗಿದ್ದರು. ಇತರೆ ವೃತ್ತಿಪರ ಕೋರ್ಸ್‌ಗಳನ್ನು ಹೊರತುಪಡಿಸಿ ಸರ್ಕಾರಿ ಹಾಗೂ ಖಾಸಗಿ ಸೇರಿದಂತೆ 1.20 ಲಕ್ಷ ಎಂಜಿನಿಯರಿಂಗ್ ಸೀಟುಗಳು ಈ ಬಾರಿ ಲಭ್ಯವಿವೆ. ಇತರೆ ಕೋರ್ಸ್‌ಗಳಲ್ಲಿ 30 ಸಾವಿರ ಸೀಟುಗಳು ಲಭ್ಯವಿವೆ. ಅಲ್ಲದೇ, ಬಿ.ಎಸ್‌ಸಿ ಸೀಟುಗಳೂ ದೊರಕಲಿವೆ.
ವಾಣಿಜ್ಯ ವಿದ್ಯಾರ್ಥಿಗಳಲ್ಲಿ ಈ ಬಾರಿ 1.74 ವಿದ್ಯಾರ್ಥಿಗಳು (ಶೇ 68.36) ಹಾಗೂ ಕಲಾ ವಿದ್ಯಾರ್ಥಿಗಳಲ್ಲಿ 1.28 ಲಕ್ಷ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ರಾಜ್ಯದಲ್ಲಿ 430 ಸರ್ಕಾರಿ ಪದವಿ ಕಾಲೇಜುಗಳು ಸೇರಿ ವಿವಿಧ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ 3,417 ಕಾಲೇಜುಗಳಿವೆ. ವಿಜ್ಞಾನ ವಿಷಯಗಳೂ ಸೇರಿದಂತೆ ಪ್ರತಿ ವರ್ಷ ಒಂದು ಲಕ್ಷ ವಿದ್ಯಾರ್ಥಿಗಳಿಗೆ ಪ್ರವೇಶ ದೊರಕುತ್ತಿದೆ. ವಾಣಿಜ್ಯ ಹಾಗೂ ಕಲಾ ವಿಷಯಗಳಲ್ಲಿ ಕಾಲೇಜುಗಳು ಹಾಗೂ ಬೋಧಕರ ಕೊರತೆ ಇದೆ. ಕಳೆದ ವರ್ಷದಿಂದ ರಾಜ್ಯದ ಬಹುತೇಕ ಸರ್ಕಾರಿ ಕಾಲೇಜುಗಳ ಕಲಾ ವಿಭಾಗದಲ್ಲೂ ಮೆರಿಟ್ ಆಧಾರದ ಮೇಲೆ ಪ್ರವೇಶ ನೀಡುವ ಪ್ರಕ್ರಿಯೆ ಆರಂಭಿಸಲಾಗಿದೆ. ಇದರಿಂದ ಕಡಿಮೆ ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ತಮ್ಮ ಸಮೀಪದ ಕಾಲೇಜುಗಳಲ್ಲಿ ಪ್ರವೇಶ ಸಿಗದೇ ಪರದಾಡಿದ್ದರು. ಈ ಬಾರಿ ಸಮಸ್ಯೆ ಇನ್ನಷ್ಟು ಉಲ್ಬಣವಾಗುವ ಸಾಧ್ಯತೆ ಇದೆ.
‘ಈಚಿನ ದಿನಗಳಲ್ಲಿ ಉನ್ನತ ಶಿಕ್ಷಣದಲ್ಲಿ ದಾಖಲಾತಿ ಪ್ರಮಾಣವೂ ಕಡಿಮೆಯಾಗುತ್ತಿತ್ತು. ಹೆಚ್ಚು ಅಂಕಗಳಿಸುವ ಪ್ರತಿಭಾವಂತರು ವೈದ್ಯಕೀಯ, ಎಂಜಿನಿಯರಿಂಗ್, ಕೃಷಿ ಮತ್ತಿತರ ವೃತ್ತಿಪರ ಕೋರ್ಸ್‌ಗಳತ್ತ ಚಿತ್ತ ಹರಿಸಿದರೆ, ಕಡಿಮೆ ಅಂಕ ಗಳಿಸಿದ ವಿದ್ಯಾರ್ಥಿಗಳು ಕನಿಷ್ಠ ಪದವಿ ಶಿಕ್ಷಣವನ್ನಾದರೂ ಪಡೆಯಬೇಕು ಎನ್ನುವ ಉದ್ದೇಶ ಇಟ್ಟುಕೊಂಡು ಸರ್ಕಾರ ಪರೀಕ್ಷಾ ಪದ್ಧತಿಯಲ್ಲಿ ಸುಧಾರಣೆ ತಂದಿದೆ’ ಎನ್ನುವುದು ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ಎ.ಎಚ್.ನಿಂಗೇಗೌಡ ಅಭಿಮತ.
‘ಕಳೆದ ವರ್ಷ ಪ್ರಥಮ ವರ್ಷದ ಪದವಿಗೆ ನಮ್ಮ ಕಾಲೇಜಿನಲ್ಲಿ 2,400 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಂಡು ಪಾಠ ಮಾಡಿಸಿದ್ದೇವೆ. ಆದರೆ, ಅಗತ್ಯ ಕೊಠಡಿ ಸೇರಿದಂತೆ ಮೂಲಸೌಕರ್ಯಗಳದ್ದೇ ದೊಡ್ಡ ಸವಾಲು. ಪದವಿ ಕಾಲೇಜುಗಳ ಸಂಖ್ಯೆ ಹೆಚ್ಚಿಸುವ ಜತೆಗೆ, ಅಗತ್ಯ ಮೂಲಸೌಕರ್ಯ, ಬೋಧಕ–ಬೋಧಕೇತರ ಸಿಬ್ಬಂದಿ ನೇಮಿಸಿದರೆ ಫಲಿತಾಂಶದ ಹೆಚ್ಚಳ ಸಾರ್ಥಕವಾಗುತ್ತದೆ’ ಎನ್ನುತ್ತಾರೆ ದಾವಣಗೆರೆ ಸರ್ಕಾರಿ ಪದವಿ ಕಾಲೇಜಿನ ಪ್ರಾಧ್ಯಾಪಕರೊಬ್ಬರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.