ಬೆಳಗಾವಿ: ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಸಿಬಿಐನಿಂದ ಬಂಧಿತರಾಗಿ ಇಲ್ಲಿನ ಕೇಂದ್ರ ಕಾರಾಗೃಹದಿಂದ ಜಾಮೀನಿನ ಮೇಲೆ ಶನಿವಾರ ಬಿಡುಗಡೆಯಾದ ಕಾಂಗ್ರೆಸ್ ಮುಖಂಡ ವಿನಯ ಕುಲಕರ್ಣಿ, ನೇರವಾಗಿ ಕೆಲ ಸ್ವಾಮೀಜಿಗಳ ಬಳಿ ತೆರಳಿ ಆಶೀರ್ವಾದ ಪಡೆದರು. ಶ್ರೀಗಳು ಹೂಮಾಲೆ ಹಾಕಿ, ಶಾಲು ಹೊದಿಸಿ, ಪುಸ್ತಕ ನೀಡಿ ಸನ್ಮಾನಿಸಿದರು.
ಶಿವಬಸವ ನಗರದಲ್ಲಿರುವ ನಾಗನೂರು ರುದ್ರಾಕ್ಷಿಮಠಕ್ಕೆ ಬೆಂಬಲಿಗರೊಂದಿಗೆ ಬಂದು ಅಲ್ಲಿನ ಪೀಠಾಧಿಪತಿ ಡಾ.ಅಲ್ಲಮಪ್ರಭು ಸ್ವಾಮೀಜಿ ಮತ್ತು ಧಾರವಾಡದ ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು. ಬಳಿಕ ಹಲಗಾ ಗ್ರಾಮದಲ್ಲಿರುವ ಸಿದ್ಧಸೇನಾ ಮುನಿ ಅವರಿಂದಲೂ ವಿನಯ ಆಶೀರ್ವಾದ ಪಡೆದುಕೊಂಡರು.
ಕಾರಾಗೃಹದಿಂದ ಹಿಂಡಲಗಾ ಗಣಪತಿ ದೇಗುಲದವರೆಗೆ ಭಾರಿ ಸಂಖ್ಯೆಯ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಬಂದು, ವಿಶೇಷ ಪೂಜೆ ಸಲ್ಲಿಸಿದರು. ರಾಣಿ ಚನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಈ ವೇಳೆ ವಿನಯ ಕುಲಕರ್ಣಿ ಮೀಸೆ ತಿರುವಿದಾಗ ಬೆಂಬಲಿಗರಿಂದ ಜೈಕಾರ ಮೊಳಗಿತು.
‘ಜಾಮೀನು ನೀಡಿದ ನ್ಯಾಯಾಲಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.ನ್ಯಾಯಾಂಗದ ಮೇಲೆ ಭರವಸೆ ಇದೆ. ಪ್ರಕರಣದಿಂದ ದೋಷಮುಕ್ತನಾಗಿ ಹೊರಬರುತ್ತೇನೆ’ ಎಂದುವಿನಯ ಮಾಧ್ಯಮದವರ ಮುಂದೆ ವಿಶ್ವಾಸ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ, ವಿನಯ ಅವರನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ರಾಖಿ ಕಟ್ಟಿ, ತಿಲಕವಿಟ್ಟು ಬರಮಾಡಿಕೊಂಡರು.
ದೂರು ದಾಖಲು: ನೂರಾರು ಮಂದಿ ಬೆಂಬಲಿಗರು ಜಮಾಯಿಸಿ ಪುಷ್ಪವೃಷ್ಟಿ ಮಾಡಿ, ಹೂ ಸೇಬುಗಳ ಹಾರಹಾಕಿ ಸ್ವಾಗತಿಸಿದರು.
ಪಟಾಕಿಗಳನ್ನು ಸಿಡಿಸಿ, ಫೇಡೆ ಹಂಚಿ ಸಂಭ್ರಮಿಸಿದರು. ಬಹುತೇಕರು ಮಾಸ್ಕ್ ಧರಿಸಿರಲಿಲ್ಲ ಮತ್ತು ಅಂತರ ಕಾಯ್ದುಕೊಂಡಿರಲಿಲ್ಲ.
ವಾರಾಂತ್ಯ ಕರ್ಫ್ಯೂ ಮತ್ತು ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ವಿನಯ ಹಾಗೂ 300 ಮಂದಿ ವಿರುದ್ಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ 2 ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
2020ರ ನ.9ರಿಂದ ಕಾರಾಗೃಹದಲ್ಲಿದ್ದ ಅವರಿಗೆ ಆ.11ರಂದು ಸುಪ್ರೀಂ ಕೋರ್ಟ್ ಹಾಗೂ ಆ.19ರಂದು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.