ಬೆಂಗಳೂರು: ಶತಮಾನೋತ್ಸವದ ಹೊಸ್ತಿಲಲ್ಲಿರುವ ಆರ್‌ಎಸ್‌ಎಸ್‌ಗೆ ‘ಹಿಂದೂ ರಾಷ್ಟ್ರ’ ಕೊಡುಗೆ ನೀಡುವ ಗುಪ್ತ ಕಾರ್ಯಸೂಚಿಯನ್ನು ಬಿಜೆಪಿ ಹೊಂದಿದೆ ಎಂದು ಸಾಮಾಜಿಕ ಚಿಂತಕ ಸಿದ್ದನಗೌಡ ಪಾಟೀಲ ಹೇಳಿದರು.
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ‘ಸಂವಿಧಾನ ಉಳಿಸಿ–ದೇಶ ಉಳಿಸಿ’ ವಿಷಯ ಕುರಿತು ಸೋಮವಾರ ಹಮ್ಮಿಕೊಂಡಿದ್ದ ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
1925ರಲ್ಲಿ ಸ್ಥಾಪನೆಯಾದ ಆರ್‌ಎಸ್‌ಎಸ್‌ಗೆ ಬರುವ ವರ್ಷ ಶತಮಾನದ ಸಂಭ್ರಮ. 2024ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಪಡೆದರೆ, ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸುವ ಮೂಲಕ ತನ್ನ ಸಂಘ ಪರಿವಾರದ ಸಂಘಟನೆಯನ್ನು ಮೆಚ್ಚಿಸಲು ಬಿಜೆಪಿ ಕಾರ್ಯಸೂಚಿ ಹಾಕಿಕೊಂಡಿದೆ ಎಂದು ದೂರಿದರು.
ಅಂಬೇಡ್ಕರ್ ಅವರು ಬೃಹತ್ ಕೈಗಾರಿಕೆ, ಕೃಷಿ ಭೂಮಿಯ ರಾಷ್ಟ್ರೀಕರಣದ ಒಲವು ಹೊಂದಿದ್ದರು. ಅವರ ಆಶಯಕ್ಕೆ ವಿರುದ್ಧವಾಗಿ ಕೇಂದ್ರ ಸರ್ಕಾರ ಸಾರ್ವಜನಿಕ ಕ್ಷೇತ್ರಗಳನ್ನು ಖಾಸಗೀಕರಣ ಮಾಡುತ್ತಿದೆ. ಕೇಂದ್ರದ ಈ ನಡೆಯ ಹಿಂದೆ ಸಂವಿಧಾನದ ಆಶಯವಾದ ಮೀಸಲಾತಿಯನ್ನು ನಾಶ ಮಾಡುವ ಹುನ್ನಾರವಿದೆ ಎಂದರು.
ಅಂಬೇಡ್ಕರ್ ಅವರು ಪ್ರಭುತ್ವ ಸಮಾಜ, ಕಲ್ಯಾಣ ರಾಜ್ಯದ ಕನಸು ಕಂಡಿದ್ದರು. ಬಿಜೆಪಿಯು ಸಂವಿಧಾನದ ಜಾತ್ಯತೀತ, ಸಮಾಜವಾದದ ಆಶಯಗಳನ್ನೇ ನಾಶ ಮಾಡುತ್ತಿದೆ. ಧರ್ಮಾಧಾರಿತ ಮನುವಾದಿ ಸಂವಿಧಾನವನ್ನು ನೆಲೆಗೊಳಿಸುವ ಸಂಚು ಮಾಡಿದೆ. 2024ರ ಲೋಕಸಭಾ ಚುನಾವಣೆಯು ಶೋಷಿತರು, ಬಡವರು, ದಲಿತರು ಸೇರಿದಂತೆ ಎಲ್ಲರನ್ನೂ ಒಳಗೊಳ್ಳುವ ಅಂಬೇಡ್ಕರ್ ಸಂವಿಧಾನ ಹಾಗೂ ಮನುವಾದಿ ಸಂವಿಧಾನದ ನಡುವಿನ ಹೋರಾಟ ಎಂದರು.
ಆರ್‌ಪಿಐ ಕರ್ನಾಟಕದ ಅಧ್ಯಕ್ಷ ಆರ್.ಮೋಹನ್ ರಾಜು, ಮುಖಂಡ ರಾಜೇಂದ್ರ, ಕವಯತ್ರಿ ಕೆ.ಶರೀಫಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.