ತುಮಕೂರು: ಪಶ್ಚಿಮ ಘಟ್ಟದಲ್ಲಿನ ಅಘನಾಶಿನಿ ನದಿಯಲ್ಲಿನ ಅಂದಾಜು 120 ಟಿಎಂಸಿ ಅಡಿ ನೀರು ಪ್ರತಿವರ್ಷ ಸಮುದ್ರಕ್ಕೆ ಹರಿದು ವ್ಯರ್ಥವಾಗುತ್ತಿದೆ. ಅದರಲ್ಲಿ ಕನಿಷ್ಠ 50 ಟಿಎಂಸಿ ಅಡಿ ನೀರನ್ನು ಬೆಂಗಳೂರಿಗೆ ಹರಿಸುವ ಯೋಜನೆಯನ್ನು ರಾಜ್ಯ ಸರ್ಕಾರ ಕೈಗೆತ್ತಿಕೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ಟಿ.ಬಿ.ಜಯಚಂದ್ರ ಸಲಹೆ ಮಾಡಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಪಶ್ಚಿಮ ಘಟ್ಟದಲ್ಲಿನ ಎಲ್ಲ ನದಿಗಳಿಂದ 2,000 ಟಿಎಂಸಿ ಅಡಿ ನೀರನ್ನು ಬಳಸಿಕೊಳ್ಳಲು ಅವಕಾಶವಿದೆ. ಈ ಪ್ರಯತ್ನವನ್ನು ಈವರೆಗಿನ ಯಾವ ಸರ್ಕಾರವು ಪ್ರಾಮಾಣಿಕವಾಗಿ ಮಾಡಿಲ್ಲ. ಈಗಲಾದರೂ ಕೇಂದ್ರ ಸರ್ಕಾರ 1980ರಲ್ಲಿ ರೂಪಿಸಿದ ಜಲ ಸಂಬಂಧಿ ದೂರಗಾಮಿ ಯೋಜನೆಯಡಿ (ಎನ್‌ಪಿಪಿ) ಮತ್ತು ನದಿಗಳ ಜೋಡಣೆಯ ಪ್ರಸ್ತಾವನೆಯಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಹಿಂದೆಯೂ 1,895 ಚದರ ಕಿ.ಮೀ. ಉದ್ದದ ಅಘನಾಶಿನಿ ನದಿಗೆ ಅಡ್ಡಲಾಗಿ ಹೇಮಾಗ್ನಿನಿ ಜಲಾಶಯ ನಿರ್ಮಿಸಿ, 50 ಟಿಎಂಸಿ ಅಡಿ ನೀರು ಸಂಗ್ರಹಿಸಿ, ಜಲವಿದ್ಯುತ್ ಉತ್ಪಾದನೆಯ ಯೋಜನೆ ಸಿದ್ಧವಾಗಿತ್ತು. ಅದು ಕಾರ್ಯರೂಪಕ್ಕೆ ಬರಲಿಲ್ಲ. ಮಧ್ಯ ಕರ್ನಾಟಕ ಮತ್ತು ಬೆಂಗಳೂರಿನಲ್ಲಿ ನೀರಿನ ಕೊರತೆಯ ಸಮಸ್ಯೆ ಉಲ್ಬಣಿಸುತ್ತಿರುವ ಈ ದಿನಮಾನದಲ್ಲಿ ಆ ಯೋಜನೆಗೆ ಮರುಜೀವ ನೀಡಬೇಕಿದೆ ಎಂದು ಅವರು ಪ್ರತಿಪಾದಿಸಿದರು.
ಹೇಮಾಗ್ನಿನಿಯಿಂದ ತರೀಕೆರೆ ತಾಲ್ಲೂಕಿನ ಮೂಲಕ ಹಟ್ಟಿಮೂಡಿಗೆರೆಯ ಗ್ರಾಮದ ಬಳಿಯ ವೇದಾವತಿ ನದಿ ಪಾತ್ರಕ್ಕೆ ನೀರನ್ನು ತರಬೇಕು. ಅಲ್ಲಿಂದ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಸಾಗರದಲ್ಲಿ 30 ಟಿಎಂಸಿ ಅಡಿ ನೀರು ತುಂಬಿಸಬೇಕು. ಅಲ್ಲಿಂದ ಚಿಕ್ಕನಾಯಕನಹಳ್ಳಿಯ ಬೋರನಕಣಿವೆ ಜಲಾಶಯಕ್ಕೆ ನೀರು ಹರಿಸಿ, 3 ಟಿಎಂಸಿ ಅಡಿ ನೀರು ಶೇಖರಣೆ ಮಾಡಬಹುದು. ಅಲ್ಲಿಂದ ಗಾಯತ್ರಿ ಜಲಾಶಯ, ತಿಮ್ಮನಹಳ್ಳಿ, ಗಂಟೇನಹಳ್ಳಿ, ಚೇಳೂರು, ಬೆಳ್ಳಾವಿ, ಕೋರಾ, ಕ್ಯಾತ್ಸಂದ್ರ, ದಾಬಸ್‌ಪೇಟೆ ಮೂಲಕ ಅರ್ಕಾವತಿ ನದಿಯ ಹೆಸರಘಟ್ಟ ಮತ್ತು ತಿಪ್ಪಗೊಂಡನಹಳ್ಳಿ ಜಲಾಶಯಗಳನ್ನು ತುಂಬಿಸಬಹುದಾಗಿದೆ. ಈ ನೀರು ಸಾಗಿಸುವ ಹಾದಿಯಲ್ಲಿ ಅಂದಾಜು 450 ಮೀಟರ್‌ನಷ್ಟು ಎತ್ತರದ ವರೆಗೆ ನೀರನ್ನು ಲಿಫ್ಟ್ ಮಾಡಬೇಕಾಗುತ್ತದೆ ಎಂದು ವಿವರ ನೀಡಿದರು.
ಈ ನೀರಾವರಿ ಯೋಜನೆಯಿಂದ ಮಾರ್ಗದಲ್ಲಿ ಬರುವ ಜಲಾಶಯಗಳು ತುಂಬುತ್ತವೆ. ಸುತ್ತಲಿನ ಪ್ರದೇಶಗಳಲ್ಲಿನ ಅಂತರ್ಜಲ ಹೆಚ್ಚಾಗುತ್ತದೆ. ಚಿತ್ರದುರ್ಗ, ತುಮಕೂರು ಮತ್ತು ಬೆಂಗಳೂರಿನಲ್ಲಿನ ನೀರಿನ ಕೊರತೆಯ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಹೇಳಿದರು.
ಗುಂಡ್ಯಾ– ವೇದಾವತಿ ತಿರುವು ಪ್ರಸ್ತಾವದಿಂದಾಗಿಯೇ ಎತ್ತಿನಹೊಳೆಯಂತಹ ಉತ್ತಮ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಸ್ವಾವಲಂಬಿ ಸುಸ್ಥಿರವಾದ ಹೇಮಾಗ್ನಿನಿ ಯೋಜನೆಯಿಂದ ತುಮಕೂರಿಗೆ 15 ಟಿಎಂಸಿ ಅಡಿ ನೀರು ಸಿಗುತ್ತದೆ. ಚಿತ್ರದುರ್ಗದಲ್ಲಿ ಎಚ್‌ಎಎಲ್, ಡಿಆರ್‌ಡಿಒ ದಂತಹ ಮತ್ತಷ್ಟು ಸಾರ್ವಜನಿಕ ಉದ್ಯಮ ಮತ್ತು ಕಾರ್ಖಾನೆ ಸ್ಥಾಪನೆಗೆ ನೆರವಾಗುತ್ತದೆ. ಬಂಡವಾಳ ಹೂಡಿಕೆ ಹೆಚ್ಚಾಗಿ ಜನರ ಜೀವನ ಮಟ್ಟ ಸುಧಾರಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಬೆಂಗಳೂರಿನ ಜನಸಂಖ್ಯೆ 2050ರ ವೇಳೆಗೆ 3.50 ಕೋಟಿಗೆ ತಲುಪಬಹುದೆಂದು ವರದಿಗಳು ಹೇಳುತ್ತಿವೆ. ಆಗ ಬೆಂಗಳೂರು ನಗರ ತುಮಕೂರಿನವರೆಗೂ ವಿಸ್ತರಿಸಬಹುದು ಎಂದರು.
‘ನಮ್ಮ ನೀರು ಬಳಸಲು ಯಾರ ಅಪ್ಪಣೆ ಬೇಕಿಲ್ಲ’
ಈ ಯೋಜನೆಗೆ ಕೇಂದ್ರದಿಂದ ಅನುಮತಿ ಪಡೆಯಲು ನೀವು ಪ್ರಯತ್ನಿಸುತ್ತೀರಾ ಎಂಬ ಪ್ರಶ್ನೆಗೆ, ಅಘನಾಶಿನಿ ನಮ್ಮ ಪಶ್ಚಿಮ ಘಟ್ಟದ ನದಿ. ಅದರ ನೀರು ಬಳಸಲು ಯಾರ ಅಪ್ಪಣೆಯೂ ಬೇಕಿಲ್ಲ ಎಂದು ಜಯಚಂದ್ರ ಖಾರವಾಗಿ ಪ್ರತಿಕ್ರಿಯಿಸಿದರು.
ಇಂತಹ ಬೃಹತ್ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದಲೂ ಅನುದಾನ ಬೇಕಾಗುತ್ತದೆ. ಆ ದೃಷ್ಟಿಯಲ್ಲಿ ಕೇಂದ್ರದ ಗಮನ ಸೆಳೆಯುತ್ತೇವೆ ಎಂದು ಹೇಳಿದರು.
‘ಅರಣ್ಯ ನಾಶ ಆಗಲ್ಲ’
ಹೇಮಾಗ್ನಿನಿ ಯೋಜನೆಯಿಂದ ಅರಣ್ಯ ಪ್ರದೇಶ, ಜೀವ ವೈವಿಧ್ಯಕ್ಕೆ ಧಕ್ಕೆಯಾಗುವುದಿಲ್ಲ. ನಾನು ಏಳೆಂಟು ತಿಂಗಳು ಅಧ್ಯಯನ ಮಾಡಿ, ತಜ್ಞರೊಂದಿಗೆ ಚರ್ಚಿಸಿ ಈ ಯೋಜನೆಯನ್ನು ಪ್ರಸ್ತಾಪಿಸುತ್ತಿದ್ದೇನೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.