ADVERTISEMENT

‘ಅಗ್ನಿಪಥ’ದಿಂದ ಯುವಕರ ಮೇಲೆ ದಾಳಿ: ಡಿ.ಕೆ.ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 26 ಜೂನ್ 2022, 10:28 IST
Last Updated 26 ಜೂನ್ 2022, 10:28 IST
   

ತುಮಕೂರು: ‘ಅಗ್ನಿಪಥ ಯೋಜನೆ ಜಾರಿ ದೇಶದಲ್ಲಿ ಆಗುತ್ತಿರುವ ಅನ್ಯಾಯ. ಯೋಜನೆ ಮೂಲಕ ಸರ್ಕಾರ ಯುವಕರ ಮೇಲೆ ದಾಳಿಗೆ ಮುಂದಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಕಿಡಿ ಕಾರಿದರು.

ನಗರದ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಹತ್ತಿರದ ಎಚ್.ಎಂ.ಗಂಗಾಧರಯ್ಯ ಸ್ಮಾರಕ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್‌ ನವ ಸಂಕಲ್ಪ ಶಿಬಿರ ಉದ್ಘಾಟಿಸಿ ಮಾತನಾಡಿ, ಅಗ್ನಿಪಥ ಯೋಜನೆಯಡಿ ಸೇನೆಗೆ ಸೇರಿದವರು ನಾಲ್ಕು ವರ್ಷದ ನಂತರ ನಿರುದ್ಯೋಗಿಗಳಾಗುತ್ತಾರೆ. ಯೋಜನೆಗೆ ಬೆಂಬಲ ನೀಡುವ ಬಿಜೆಪಿ ಮುಖಂಡರು, ಮಂತ್ರಿಗಳು, ನಾಯಕರು ತಮ್ಮ ಮಕ್ಕಳನ್ನು ಸೇನೆಗೆ ಸೇರಿಸಲಿ ಎಂದರು.

ಈ ಹಿಂದೆ ಚುನಾವಣೆಯ ಸಮಯದಲ್ಲಿ ಹೇಳಿದಂತೆ ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವ ಕೆಲಸ ಮಾಡಿಲ್ಲ. ಖಾಲಿ ಇರುವ ಸರ್ಕಾರಿ ಹುದ್ದೆಗಳ ಭರ್ತಿಗೂ ಕ್ರಮಕೈಗೊಂಡಿಲ್ಲ. ಗ್ಯಾಸ್, ಪೆಟ್ರೋಲ್, ಡಿಸೇಲ್ ಸೇರಿದಂತೆ ಎಲ್ಲ ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಡಬಲ್ ಎಂಜಿನ್ ಸರ್ಕಾರದಿಂದ ಮೂರು ವರ್ಷದಲ್ಲಿ ಜನರಿಗೆ ಏನಾದರು ಉಪಯೋಗವಾಗಿದೆಯೇ ಎಂದು ಪ್ರಶ್ನಿಸಿದರು.

‘ತುಮಕೂರು ಗೆದ್ದರೆ ರಾಜ್ಯ ಗೆದ್ದಂತೆ. ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸಬೇಕು. ಮುಂದಿನ ಬಾರಿ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಯುವಕರು ಮತ್ತು ಮಹಿಳೆಯರಿಗಾಗಿ ಹೊಸ ಕಾರ್ಯಕ್ರಮ ರೂಪಿಸಲಾಗಿದೆ. ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರುದ್ಯೋಗಿ ಯುವಕರ ಪಟ್ಟಿ ತಯಾರಿಸಿ, ಯುವಕರಿಗಾಗಿ ಒಂದು ಪ್ರತ್ಯೇಕ ಸಮ್ಮೇಳನ ಮಾಡಬೇಕು. ಇಡೀ ದೇಶದಲ್ಲಿ 78 ಲಕ್ಷ ಕಾರ್ಯಕರ್ತರು ಪಕ್ಷದ ಸದಸ್ಯತ್ವ ಪಡೆದಿರುವುದು ಕರ್ನಾಟಕದಲ್ಲಿ ಮಾತ್ರ. ಸದಸ್ಯತ್ವದ ನೊಂದಣಿಯಿಂದ ಪಕ್ಷ ತಳಮಟ್ಟ ತಲುಪಿದೆ. ಸದಸ್ಯತ್ವ ಗುರುತಿನ ಪತ್ರ ಹಂಚುವ ಕೆಲಸ ಅಭಿಯಾನದಂತೆ ನಡೆಯಲಿದೆ ಎಂದರು.

ರಾಜಧಾನಿಯಲ್ಲಿ ಬೃಹತ್ ಮೆರವಣಿಗೆ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಕಾಂಗ್ರೆಸ್ ವತಿಯಿಂದ ಬೆಂಗಳೂರಿನಲ್ಲಿ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಂದ 75 ಸಾವಿರ ಕಾರ್ಯಕರ್ತರು ಭಾಗವಹಿಸಲಿದ್ದಾರೆ.‌ ಜಿಲ್ಲೆಯಿಂದ ಎರಡರಿಂದ ಮೂರು ಸಾವಿರ ಜನ ಭಾಗವಹಿಸಬೇಕು ಎಂದು ಕರೆ ನೀಡಿದರು.

ಶಾಸಕ ಡಾ.ಜಿ.ಪರಮೇಶ್ವರ,‘ನವ ಸಂಕಲ್ಪ ಶಿಬಿರದ ಮೂಲಕ ಜಿಲ್ಲೆಗೆ ಸಂಬಂಧಿಸಿದ ಹಲವು ವಿಚಾರಗಳ ಕುರಿತು ಚರ್ಚಿಸಲಾಗುತ್ತದೆ. ಪ್ರತಿ ಜಿಲ್ಲೆಯಲ್ಲಿ ಪ್ರತ್ಯೇಕ ಪ್ರಣಾಳಿಕೆ ಸಿದ್ಧವಾಗಲಿದೆ. ಇಲ್ಲಿನ ಸಮಸ್ಯೆಗಳನ್ನು ಕ್ರೋಢೀಕರಿಸಿ ಪ್ರಣಾಳಿಕೆ ಸಿದ್ಧಪಡಿಸಲಾಗುತ್ತದೆ’ ಎಂದರು.

ರಾಜ್ಯದಲ್ಲಿ ಅತ್ಯಂತ ಭ್ರಷ್ಟ ಸರ್ಕಾರವಿದೆ. ಬಿಜೆಪಿ ನೇತೃತ್ವದಲ್ಲಿ ನಡೆಯುತ್ತಿರುವ ಜನವಿರೋಧಿ, ಸಂವಿಧಾನ ವಿರೋಧಿ, ನಾವೆಲ್ಲಾ ಒಂದು ಎಂಬ ಭಾವನೆಗೆ ವಿಷ ಬೀಜ ಬಿತ್ತುವ ಕಾರ್ಯಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸುವ ಕೆಲಸವಾಗಲಿದೆ ಎಂದು ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಶಾಸಕ ವೆಂಕಟರಮಣಪ್ಪ, ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ಮುಖಂಡರಾದ ಟಿ.ಬಿ.ಜಯಚಂದ್ರ, ಕೆ.ಎನ್‌.ರಾಜಣ್ಣ, ಷಡಕ್ಷರಿ, ಶಫಿ ಅಹ್ಮದ್‌, ರಫೀಕ್ ಅಹ್ಮದ್‌, ಬಿ.ಬಿ.ರಾಮಸ್ವಾಮಿಗೌಡ, ಸಾಸಲು ಸತೀಶ್, ಜಿ.ಜೆ.ರಾಜಣ್ಣ, ಆರ್.ರಾಮಕೃಷ್ಣ, ಕೆಂಚಮಾರಯ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.