ಬೆಂಗಳೂರು: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸಹಕಾರ ಸಂಘಗಳ ಮೂಲಕ 30.86 ಲಕ್ಷ ರೈತರಿಗೆ ₹20,810 ಕೋಟಿ ಸಾಲ ವಿತರಿಸುವ ಗುರಿ ಹೊಂದಿದ್ದು, ಈವರೆಗೆ ಶೇಕಡ 68.18ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.
ಸಹಕಾರ ಸಂಘಗಳ ರಿಜಿಸ್ಟ್ರಾರ್ ಕಚೇರಿಯಲ್ಲಿ ಸೋಮವಾರ ಸಹಕಾರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈವರೆಗೆ ಒಟ್ಟು 19.58 ಲಕ್ಷ ರೈತರಿಗೆ 14,188 ಕೋಟಿ ಸಾಲ ವಿವರಿಸಲಾಗಿದೆ. ಈ ಪೈಕಿ 19.27 ಲಕ್ಷ ರೈತರಿಗೆ ₹13,295 ಕೋಟಿ ಅಲ್ಪಾವಧಿ ಕೃಷಿ ಸಾಲ ನೀಡಿದ್ದರೆ, 31,000 ರೈತರಿಗೆ ₹893 ಕೋಟಿ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲ ನೀಡಲಾಗಿದೆ’ ಎಂದು ವಿವರಿಸಿದರು.
ಕೃಷಿ ಸಾಲಕ್ಕೆ ಬಡ್ಡಿಸಹಾಯಧನ ನೀಡಲು ಪ್ರಸಕ್ತ ವರ್ಷ ₹ 1,012 ಕೋಟಿ ಅನುದಾನ ಒದಗಿಸಲಾಗಿದೆ. ಅದರಲ್ಲಿ ₹ 757.21 ಕೋಟಿಯನ್ನು ಈವರೆಗೆ ಬಿಡುಗಡೆ ಮಾಡಲಾಗಿದೆ. ಕೃಷಿ ಉತ್ಪನ್ನ ಅಡಮಾನ ಸಾಲ ಯೋಜನೆಯಲ್ಲಿ 18,958 ರೈತರಿಗೆ ₹ 306 ಕೋಟಿ ನೀಡಲಾಗಿದೆ ಎಂದು ತಿಳಿಸಿದರು.
ಕೃಷಿ ಸಾಲ ವಿತರಣೆಯಲ್ಲಿ ಮಾರ್ಚ್ 25ರೊಳಗೆ ಸಂಪೂರ್ಣ ಗುರಿ ಸಾಧಿಸುವಂತೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
19,196 ಸ್ವಸಹಾಯ ಗುಂಪುಗಳಿಗೆ ₹689 ಕೋಟಿ ಸಾಲ ನೀಡಲಾಗಿದೆ. ಆತ್ಮನಿರ್ಭರ ಯೋಜನೆಯಡಿ 873 ಸಹಕಾರ ಸಂಘಗಳಿಗೆ ₹302 ಕೋಟಿ ಸಾಲ ಮಂಜೂರು ಮಾಡಲಾಗಿದೆ. ಅದರಲ್ಲಿ 581 ಸಂಘಗಳಿಗೆ ₹72.73 ಕೋಟಿ ಸಾಲ ವಿತರಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಸಾಲ ಮನ್ನಾ ಪ್ರಸ್ತಾವವಿಲ್ಲ: ಹೆಚ್ಚಿನ ಪ್ರಮಾಣದ ರೈತರಿಗೆ ಶೂನ್ಯ ಬಡ್ಡಿ ಮತ್ತು ಕಡಿಮೆ ದರದ ಬಡ್ಡಿಯಲ್ಲಿ ಸಾಲ ವಿತರಿಸುವ ಗುರಿ ಸಹಕಾರ ಇಲಾಖೆಯ ಮುಂದಿದೆ. ಕೃಷಿ ಸಾಲವನ್ನು ಮನ್ನಾ ಮಾಡುವ ಯಾವುದೇ ಪ್ರಸ್ತಾವ ಇಲಾಖೆಯ ಮುಂದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಒಂದೇ ತಂತ್ರಾಂಶಕ್ಕೆ ಯೋಜನೆ: ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳು ಮತ್ತು ಎಲ್ಲ ಕೃಷಿ ಪತ್ತಿನ ಪ್ರಾಥಮಿಕ ಸಹಕಾರ ಸಂಘಗಳಿಗೆ ಒಂದೇ ತಂತ್ರಾಂಶ ಅಳವಡಿಸಲು ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ಕೇಂದ್ರವು ಶೇ 60ರಷ್ಟು ಅನುದಾನ ನೀಡಲಿದೆ. ಉಳಿದ ಶೇ 40ರಷ್ಟನ್ನು ರಾಜ್ಯ ಸರ್ಕಾರ, ಅಪೆಕ್ಸ್ ಮತ್ತು ಡಿಸಿಸಿ ಬ್ಯಾಂಕ್‌ಗಳು ಭರಿಸಬೇಕು. ಈ ಕುರಿತು ಚರ್ಚಿಸಲು ಇದೇ 27ರಂದು ಸಭೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು.
‘ಫ್ರೂಟ್ಸ್’ ತಂತ್ರಾಂಶ ಬಳಕೆ ಸ್ಥಗಿತ
‘ಫ್ರೂಟ್ಸ್ ತಂತ್ರಾಂಶದ ಮೂಲಕ ರೈತರ ಪಹಣಿ ದಾಖಲೆಗಳಲ್ಲಿ ಸಾಲದ ವಿವರ ನಮೂದಿಸುವ ಮತ್ತು ಅದೇ ದಾಖಲೆ ಆಧಾರದಲ್ಲಿ ಸಾಲ ವಿತರಿಸುವ ವ್ಯವಸ್ಥೆ ಜಾರಿಗೊಳಿಸಲಾಗಿತ್ತು. ಆದರೆ, ಅದರಿಂದ ರೈತರಿಗೆ ಹೆಚ್ಚಿನ ತೊಂದರೆ ಆಗುತ್ತಿದೆ. ಈ ಕಾರಣದಿಂದ ಸಹಕಾರ ಸಂಘಗಳಲ್ಲಿ ಫ್ರೂಟ್ಸ್ ತಂತ್ರಾಂಶ ಬಳಕೆಯನ್ನು ಸ್ಥಗಿತಗೊಳಿಸಲಾಗಿದೆ’ ಎಂದು ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.
ಹಿಂದಿನಂತೆ ಉಪ ನೋಂದಣಿ ಕಚೇರಿಗಳಲ್ಲೇ ಆಸ್ತಿಯ ಅಡಮಾನ ಪ್ರಕ್ರಿಯೆ ಮತ್ತು ದಾಖಲೆಗಳಲ್ಲಿ ನಮೂದಿಸುವ ಪ್ರಕ್ರಿಯೆ ನಡೆಯಲಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.