ADVERTISEMENT

ಎಲ್ಲ ಜಿಲ್ಲೆಗಳಲ್ಲಿ ಎರಡು ದಿನ ಸಿರಿಧಾನ್ಯ ಮೇಳ: ಚಲುವರಾಯಸ್ವಾಮಿ ಭರವಸೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2024, 15:59 IST
Last Updated 24 ಜೂನ್ 2024, 15:59 IST
ಚಲುವರಾಯಸ್ವಾಮಿ
ಚಲುವರಾಯಸ್ವಾಮಿ   

ಬೆಂಗಳೂರು: ‘ಪ್ರತಿ ಜಿಲ್ಲೆಯಲ್ಲೂ ಎರಡು ದಿನ ಸಿರಿಧಾನ್ಯ ಮೇಳ ಆಯೋಜಿಸುವ ಜೊತೆಗೆ, ವಿದೇಶದಲ್ಲಿ ನಡೆಯುವ ಆಹಾರ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳಗಳಲ್ಲಿ ರಾಜ್ಯದಿಂದ ಮಳಿಗೆ ಹಾಕಲು ಕೂಡಾ ನೆರವು ನೀಡಲಾಗುವುದು’ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಭರವಸೆ ನೀಡಿದರು.

ರಾಜ್ಯದಲ್ಲಿ ಸ್ಥಾಪಿಸಲಾಗಿರುವ ಫುಡ್‌ ಪಾರ್ಕ್‌ಗಳ ಪುನಶ್ಚೇತನ ಮತ್ತು ಸಿರಿಧಾನ್ಯಗಳಿಗೆ ಸಂಬಂಧಿಸಿದ ಕಾರ್ಯಾಚರಣೆಯಲ್ಲಿರುವ ನವೋದ್ಯಮಗಳಿಗೆ ಇಲಾಖೆಯ ಸಹಭಾಗಿತ್ವದಲ್ಲಿ ರೈತರ ಜೊತೆ ಸಂಪರ್ಕ ಸಾಧಿಸುವ ಕುರಿತು ಸೋಮವಾರ ಸಭೆ ನಡೆಸಿ ಅವರು, ‘ಕೃಷಿ ಸಂಬಂಧಿಸಿದ ನವೋದ್ಯಮಗಳ ಪುನಃಶ್ಚೇತನಕ್ಕೆ ಸರ್ಕಾರ ಸಿದ್ಧವಾಗಿದೆ’ ಎಂದರು.

‘ಸಿರಿಧಾನ್ಯ ಬೇಡಿಕೆ ಹೆಚ್ಚಿದ್ದರೂ ಪೂರೈಕೆ ಕೊರತೆಯಿದೆ. ಹೀಗಾಗಿ ಪ್ರೋತ್ಸಾಹ ಧನ ಯೋಜನೆ ಮುಂದುವರೆಸುವ ಜೊತೆಗೆ ಉತ್ಪಾದನೆಯನ್ನು 30 ಸಾವಿರ ಹೆಕ್ಟೇರ್‌ನಿಂದ 50 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ವಿಸ್ತರಿಸಲು ಯೋಜನೆ ರೂಪಿಸಬೇಕು’ ಎಂದು ಅಧಿಕಾರಿಗಳಿಗೆ ಅವರು ಸೂಚಿಸಿದರು.

ADVERTISEMENT

ಕೃಷಿ ನವೋದ್ಯಮಗಳ ಸ್ಥಿತಿಗತಿ, ಅವುಗಳು ಎದುರಿಸುತ್ತಿರುವ ಸವಾಲುಗಳು, ಸಿರಿಧಾನ್ಯ ಆಧಾರಿತ ಉದ್ಯಮಗಳನ್ನು ಬಲಪಡಿಸಲು ಸರ್ಕಾರದ ನೆರವಿನ ಕುರಿತು ಸಚಿವರು ನವೋದ್ಯಮಿಗಳಿಂದ ಅಭಿಪ್ರಾಯ ಪಡೆದರು.

ಸಿರಿಧಾನ್ಯ ಪುಡಿಗೆ ಜಿಎಸ್‌ಟಿಯನ್ನು ಶೇ 18ರಿಂದ 5ಕ್ಕೆ ಇಳಿಕೆ ಮಾಡಿರುವಂತೆ, ಅದನ್ನು ಇತರ ಮೌಲ್ಯವರ್ಧಿತ ಕೃಷಿ ಆಹಾರ ಉತ್ಪನ್ನಗಳಿಗೂ ವಿಸ್ತರಿಸಬೇಕು ಎಂದು ನವೋದ್ಯಮಿಗಳು ಮನವಿ ಮಾಡಿದರು. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪೂರಕ ಪ್ರಸ್ತಾವ ಕಳುಹಿಸಲಾಗುವುದು. ಸಿರಿಧಾನ್ಯ ಆಹಾರ ಉತ್ಪಾದಕರಿಗೆ ತಂತ್ರಜ್ಞಾನ ವಿಸ್ತರಣೆ ಜೊತೆಗೆ ದೀರ್ಘಾವಧಿಗೆ ಆಹಾರ ಪದಾರ್ಥ ಸಂಸ್ಕರಣೆಗೆ ಸಿಎಫ್‌ಟಿಆರ್‌ಐ ಮೂಲಕ ನೆರವು ಒದಗಿಸಲು ಕ್ರಮಕೈಗೊಳ್ಳಲಾಗುವುದು ಎಂದೂ ಸಚಿವರು ಭರವಸೆ ನೀಡಿದರು.

ಅಭಿವೃದ್ಧಿ ಆಯುಕ್ತೆ ಶಾಲಿನಿ ರಜನೀಶ್, ಕೃಷಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅನ್ಬುಕುಮಾರ್, ಕೃಷಿ ಆಹಾರ ಸಂಸ್ಕರಣೆ ಮತ್ತು‌ ಕಟಾವು ತಂತ್ರಜ್ಞಾನದ ವಿಶೇಷ ಕಾರ್ಯದರ್ಶಿ ರೋಹಿಣಿ ಸಿಂಧೂರಿ, ಆಯುಕ್ತರಾದ ವೈ.ಎಸ್. ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.