ADVERTISEMENT

ಬಿತ್ತನೆ ಬೀಜ, ರಸಗೊಬ್ಬರ ಕೊರತೆ ಇಲ್ಲ: ಚಲುವರಾಯಸ್ವಾಮಿ

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 15:40 IST
Last Updated 13 ಜೂನ್ 2024, 15:40 IST
ಚಲುವರಾಯಸ್ವಾಮಿ
ಚಲುವರಾಯಸ್ವಾಮಿ   

ಬೆಂಗಳೂರು: ‘ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಕೊರತೆ ಇಲ್ಲ. ಅಧಿಕಾರಿಗಳು ರೈತರಿಗೆ ಸೂಕ್ತ ಮಾಹಿತಿ‌, ಮಾರ್ಗದರ್ಶನ ನೀಡಬೇಕು. ಅನಗತ್ಯ ಗೊಂದಲ ಸೃಷ್ಟಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ಎಚ್ಚರಿಕೆ ನೀಡಿದರು.

ಇಲಾಖೆಗೆ ಸಂಬಂಧಿಸಿದ, 2024-25ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿರುವ ಹೊಸ ಯೋಜನೆಗಳ ಅನುಷ್ಠಾನ ಕುರಿತು ಗುರುವಾರ ಸಭೆ ನಡೆಸಿದ ಅವರು, ಹೊಸ ಯೋಜನೆಗಳನ್ನು ಇದೇ 20ರೊಳಗೆ ಅನುಷ್ಠಾನಕ್ಕೆ ತರಬೇಕು ಎಂದು ಕಟ್ಟುನಿಟ್ಟಿನ‌ ಸೂಚನೆ ನೀಡಿದರು.

‘ಅನುದಾನಕ್ಕೆ ಕೊರತೆ ಇಲ್ಲ. ಕೃಷಿ ಕ್ಷೇತ್ರವನ್ನು ಸುಸ್ಥಿರ ಹಾಗೂ ಲಾಭದಾಯಕಗೊಳಿಸಲು ರೈತ ಸಮೃದ್ಧಿ ಯೋಜನೆ ರೂಪಿಸಿಲಾಗಿದ್ದು, ಇದು ಸಮರ್ಪಕವಾಗಿ ತಲುಪಬೇಕು ಎನ್ನುವುದು ಸರ್ಕಾರದ ಆಶಯ. ಕೃಷಿ, ತೋಟಗಾರಿಕೆ, ಪಶು ಸಂಗೋಪನೆ ಒಳಗೊಂಡಂತೆ ವಿವಿಧ ಇಲಾಖೆಗಳ ಯೋಜನೆಗಳ ಸಂಯೋಜನೆ ಮೂಲಕ ಕಾರ್ಯಕ್ರಮ ಅನುಷ್ಠಾನ ಮಾಡಬೇಕು’ ಎಂದು ಸಲಹೆ ಹೇಳಿದರು.

ADVERTISEMENT

‘‌ಪ್ರತ್ಯೇಕ ಆಹಾರ ಸಂಸ್ಕರಣೆ ಮತ್ತು ರಪ್ತು ಉತ್ತೇಜನ ಆಯುಕ್ತಾಲಯ ಸ್ಥಾಪನೆ ಮತ್ತು ಕೆಲವು ಸಂಸ್ಥೆಗಳನ್ನು ಅದರ ವ್ಯಾಪ್ತಿಗೆ ತರುವ ಬಗ್ಗೆ ಸಾಧಕ ಬಾಧಕಗಳ ಬಗ್ಗೆ ಪರಿಶೀಲಿಸಿ ಪ್ರಸ್ತಾವ ಸಿದ್ಧಪಡಿಸಬೇಕು. ಕರ್ನಾಟಕ ರೈತ ಸಮೃದ್ದಿ ಯೋಜನೆ, ಕೃಷಿ ಅಭಿವೃದ್ಧಿ ಪ್ರಾಧಿಕಾರ, ಕೃಷಿ ಭಾಗ್ಯ ಯೋಜನೆ, ಸಮುದಾಯದ ಬೀಜ‌ ಬ್ಯಾಂಕ್ ಸ್ಥಾಪನೆ, ‘ನಮ್ಮ ಮಿಲೆಟ್’ ಯೋಜನೆಗಳಿಗೆ ವ್ಯವಸ್ಥಿತವಾಗಿ ಚಾಲನೆ ನೀಡಬೇಕು. ಯೋಜನೆಗಳ ಅನುಷ್ಠಾನದ ಸಂದರ್ಭದಲ್ಲಿ ಉಂಟಾಗಬಹುದಾದ ಸಮಸ್ಯೆಗಳ ಬಗ್ಗೆ ಪೂರ್ವಾವಲೋಕನ ಮಾಡಬೇಕಿದ್ದು, ಈ ಬಗ್ಗೆ ಅಭಿಪ್ರಾಯ ತಿಳಿಸಬೇಕು’ ಎಂದೂ ಸೂಚಿಸಿದರು.

‘ಬೆಂಗಳೂರಿನಲ್ಲಿ ಆರ್.ಕೆ. ಶಾಲಾ ಕೃಷಿ ಕ್ಷೇತ್ರವನ್ನು ತಾಂತ್ರಿಕತೆ ಪಸರಿಸುವ ಜ್ಞಾನ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಿ ರೈತರಿಗೆ ಕೀಟ, ರೋಗ ಮತ್ತು ಪೋಷಕಾಂಶಗಳ ನಿರ್ವಹಣೆ ಬಗ್ಗೆ ಸಲಹೆ ನೀಡಲು ಇ– ಸ್ಯಾಪ್ (ಕೃಷಿ ಕೀಟಗಳ ವಿರುದ್ಧ ಎಲೆಕ್ಟ್ರಾನಿಕ್ ಪರಿಹಾರಗಳು) ತಂತ್ರಾಂಶ ಸರಿಯಾಗಿ ಬಳಸಬೇಕು. ಅದನ್ನು ಉಪಯೋಗಿಸುವವರಿಗೆ ಸೂಕ್ತ ತರಬೇತಿ ನೀಡಬೇಕು’ ಎಂದು ಸಚಿವರು ಸೂಚಿಸಿದರು.

ಅಭಿವೃದ್ಧಿ ಆಯುಕ್ತೆ ಶಾಲಿನಿ ರಜನೀಶ್, ಕೃಷಿ ಇಲಾಖೆ ಕಾರ್ಯದರ್ಶಿ ಅನ್ಬುಕುಮಾರ್, ಆಯುಕ್ತ ವೈ. ಎಸ್. ಪಾಟೀಲ, ಆಹಾರ ಸಂಸ್ಕರಣೆ ಹಾಗೂ ಕಟಾವು ತಂತ್ರಜ್ಞಾನ ವಿಶೇಷ ಕಾರ್ಯದರ್ಶಿ ರೋಹಿಣಿ ಸಿಂಧೂರಿ, ಜಲಾನಯನ ಅಭಿವೃದ್ಧಿ ಆಯುಕ್ತ ಗಿರೀಶ್, ಕೃಷಿ ಇಲಾಖೆ ನಿರ್ದೇಶಕ ಜಿ.ಟಿ. ಪುತ್ರ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.