ADVERTISEMENT

ಫೆ.27ಕ್ಕೆ ರಾಯಚೂರು ಕೃಷಿ ವಿಜ್ಞಾನ ವಿವಿ ಘಟಿಕೋತ್ಸವ

2016–17ನೇ ಸಾಲಿಗೆ 281 ಪದವಿ, 118 ಸ್ನಾತಕೋತ್ತರ, 25 ಪಿಎಚ್‌ಡಿ ಪದವಿ ಓದಿದವರು

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2019, 10:29 IST
Last Updated 25 ಫೆಬ್ರುವರಿ 2019, 10:29 IST

ರಾಯಚೂರು: 2016–17ನೇ ಸಾಲಿನ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭವನ್ನು ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಫೆಬ್ರುವರಿ 27 ರಂದು ಬೆಳಿಗ್ಗೆ 11 ಗಂಟೆಗೆ ಆಯೋಜಿಸಲಾಗಿದೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಕುಲಪತಿ ಡಾ.ಕೆ.ಎನ್‌. ಕಟ್ಟಿಮನಿ ಅವರು ಈ ಬಗ್ಗೆ ವಿವರ ನೀಡಿದರು.

ಕಳೆದ ವರ್ಷದ ಘಟಿಕೋತ್ಸವ ಕಾರಣಾಂತರಗಳಿಂದ ನಡೆದಿರಲಿಲ್ಲ. ವಿವಿಧ ವಿಷಯಗಳಲ್ಲಿ ಶಿಕ್ಷಣ, ಸಂಶೋಧನೆ ಪೂರ್ಣಗೊಳಿಸಿರುವ 424 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ. 361 ವಿದ್ಯಾರ್ಥಿಗಳು ಹಾಜರಿದ್ದು, ಪದವಿ ಸ್ವೀಕರಿಸಲಿದ್ದಾರೆ ಎಂದರು.

ADVERTISEMENT

ರಾಯಚೂರು ಕೃಷಿ ಮಹಾವಿದ್ಯಾಲಯದ 78, ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದ 91, ಕಲಬುರ್ಗಿ ಕೃಷಿ ಮಹಾವಿದ್ಯಾಲಯದ 56, ರಾಯಚೂರು ಕೃಷಿ ತಾಂತ್ರಿಕ ಮಹಾವಿದ್ಯಾಲಯದ 56 ಹಾಗೂ ಕೃಷಿ ತಾಂತ್ರಿಕ ಪದವಿ ಓದಿದ 56 ವಿದ್ಯಾರ್ಥಿಗಳು ಪದವಿ ಪಡೆಯುವರು. ಒಟ್ಟು 281 ವಿದ್ಯಾರ್ಥಿಗಳ ಪೈಕಿ ಎಂಟು ವಿದ್ಯಾರ್ಥಿಗಳಿಗೆ 18 ಚಿನ್ನದ ಪದಕಗಳು ಹಂಚಿಕೆಯಾಗಿವೆ. ಅದರಲ್ಲಿ ಶೌರತುನ್ನಿಸಾ ಬೇಗಂ ಅವರು ಐದು ಅತಿಹೆಚ್ಚು ಚಿನ್ನದ ಪದಕಗಳಿಗೆ ಭಾಜನರಾಗಿದ್ದಾರೆ. ಮಂಜುಶ್ರೀ ಎಸ್‌. ನಾಲ್ಕು ಚಿನ್ನದ ಪದಕಗಳನ್ನು ಪಡೆಯಲಿದ್ದಾರೆ ಎಂದು ಹೇಳಿದರು.

ಸ್ನಾತಕೋತ್ತರ ಪೂರ್ಣಗೊಳಿಸಿದ 118 ವಿದ್ಯಾರ್ಥಿಗಳ ಪೈಕಿ, ಐದು ವಿದ್ಯಾರ್ಥಿನಿಯರು ಸೇರಿ 10 ವಿದ್ಯಾರ್ಥಿಗಳು ಚಿನ್ನದ ಪದಕಗಳಿಗೆ ಭಾಜನರಾಗಿದ್ದಾರೆ. ಪಿಎಚ್‌ಡಿ ಪದವಿ ಪಡೆಯುವ 25 ಅಭ್ಯರ್ಥಿಗಳ ಪೈಕಿ ಆರು ಜನರು ಏಳು ಚಿನ್ನದ ಪದಕಗಳನ್ನು ಪಡೆಯುವರು ಎಂದು ತಿಳಿಸಿದರು.

ಸಮಾರಂಭ: ಭಾರತೀಯ ಕೃಷಿ ಅನುಸಂಧಾನ ಪರಿಷತ್‌ ಉಪ ಮಹಾ ನಿರ್ದೇಶಕ ಡಾ. ನರೇಂದ್ರ ಸಿಂಗ್‌ ರಾಠೋರೆ ಘಟಿಕೋತ್ಸವ ಭಾಷಣ ಮಾಡುವರು. ಕೃಷಿ ಸಚಿವ ಎನ್‌.ಎಚ್‌. ಶಿವಶಂಕರರೆಡ್ಡಿ, ಕುಲಪತಿ ಡಾ. ಕೆ.ಎನ್‌. ಕಟ್ಟಿಮನಿ ಭಾಗವಹಿಸುವರು ಎಂದು ಹೇಳಿದರು.

ಶಿಕ್ಷಣ ನಿರ್ದೇಶನ ವಿಭಾಗದ ಮುಖ್ಯಸ್ಥ ಡಾ.ಎಸ್‌.ಕೆ. ಮೇಟಿ, ಕುಲಸಚಿವ ಡಾ.ಎಂ.ಜಿ. ಪಾಟೀಲ, ಸಂಶೋಧನಾ ನಿರ್ದೇಶಕ ಡಾ.ಬಿ.ಕೆ. ದೇಸಾಯಿ, ವಿಸ್ತರಣಾ ವಿಭಾಗದ ನಿರ್ದೇಶಕ ಡಾ. ಬಿ.ಎಂ. ಚಿತ್ತಾಪುರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.