ಬೆಂಗಳೂರು: ಕಷ್ಟಗಳ ನಡುವೆಯೂ ಶೈಕ್ಷಣಿಕ ಸಾಧನೆ ತೋರಿದ ವಿದ್ಯಾರ್ಥಿಗಳು, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಚಿನ್ನದ ಹೊಳಪಿನಲ್ಲಿ ಕಂಗೊಳಿಸಿದರು.
ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತರರಾಷ್ಟ್ರೀಯ ಸಮಾವೇಶ ಭವನದಲ್ಲಿ ಶುಕ್ರವಾರ ನಡೆದ 56ನೇ ಘಟಿಕೋತ್ಸವವು ಹಲವು ಸಂಭ್ರಮಗಳಿಗೆ ಸಾಕ್ಷಿ ಆಯಿತು. ವಿದ್ಯಾರ್ಥಿಗಳ ಸಾಧನೆ, ಕನಸು ಅನಾವರಣಗೊಂಡವು.
ಹಾಸನದ ಕೃಷಿ ಮಹಾವಿದ್ಯಾಲಯದಲ್ಲಿ ಓದಿದ ತುಮಕೂರಿನ ಎಚ್.ಎಂ.ಚಂದನಾ ಬಿಎಸ್ಸಿ (ಆನರ್ಸ್) ಕೃಷಿಯಲ್ಲಿ 11 ಚಿನ್ನದ ಪದಕ ದಕ್ಕಿಸಿಕೊಂಡು ಚಿನ್ನದ ಬೆಡಗಿಯಾಗಿ ಕಂಗೊ
ಳಿಸಿದರು. ಜತೆಗೆ, ದಾನಿಗಳ 5 ಚಿನ್ನದ ಪದಕ ಪ್ರಮಾಣ ಪತ್ರಗಳೂ ಸಿಕ್ಕಿವೆ.
ರಾಜ್ಯಪಾಲ ಥಾವರಚಂದ್ ಗೆಹಲೋತ್ ಪದಕ ಪ್ರದಾನ ಮಾಡು
ತ್ತಿದ್ದಂತೆ ತಂದೆ ಸುರೇಶ್, ತಾಯಿ ಶಶಿಕಲಾ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. 16 ಪದಕ ಗಳಿಸಿದ ಚಂದನಾ
ಸಾಧನೆಗೆ ಸಾಕ್ಷಿಯಾಗಲು ಪ್ರಾಧ್ಯಾಪಕ ಚನ್ನಕೇಶ ಬಂದಿದ್ದರು.ಪುತ್ರಿಯ ಸಾಧನೆಗೆ ತಂದೆ ಚಿನ್ನದ ಬಳೆ ಕೊಡುಗೆಯಾಗಿ ನೀಡಿದರು.
‘ಗೂಳೂರಿನಲ್ಲಿ ತಂದೆ ಬಟ್ಟೆ ಅಂಗಡಿ ನಡೆಸುತ್ತಾರೆ. ಅವರ ಕನಸು ನನಸು ಮಾಡಲು ಪರಿಶ್ರಮಿಸಿದ್ದೆ. ಇಷ್ಟು ಪದಕಗಳು ಬರುವ ನಿರೀಕ್ಷೆ ಇರಲಿಲ್ಲ. ಖುಷಿಯಾಗಿದೆ. ರೈತರ ಸ್ಥಿತಿ
ಸುಧಾರಣೆ ಆಗಬೇಕಿದೆ. ಐಎಎಸ್ ಮಾಡುವ ಕನಸಿದೆ’ ಎಂದರು ಚಂದನಾ.
ರೂಪಾಗೆ 8 ಚಿನ್ನದ ಪದಕ: ಮಂಡ್ಯದ ಹುಡುಗಿ ಎಂ.ಎನ್.ರೂಪಾ ಬಿಎಸ್ಸಿ ಕೃಷಿಯಲ್ಲಿ ಒಟ್ಟು 8 ಚಿನ್ನದ ಪದಕ ಪಡೆದು ಮಿಂಚಿದರು.
‘ತಂದೆ ಮಳವಳ್ಳಿಯಲ್ಲಿ ಟೀ ಅಂಗಡಿ ನಡೆಸುತ್ತಿದ್ದಾರೆ. ಊರಿನಲ್ಲಿ 20 ಗುಂಟೆ ಕೃಷಿ ಜಮೀನಿದೆ. ಟೀ ಅಂಗಡಿಯಿಂದ ಬರುವ ಆದಾಯದಲ್ಲೇ ಶಿಕ್ಷಣ ಕೊಡಿಸಿದರು’ ಎಂದರು ಮಂಡ್ಯದ ಕೃಷಿ ಕಾಲೇಜಿನಲ್ಲಿ ಕಲಿತ ರೂಪಾ.
‘ಕೃಷಿಯಲ್ಲಿ ಲಾಭ ನಿರೀಕ್ಷಿಸಲಾಗದು. ರೈತರ ಬದುಕು ಶಕ್ತವಾದರೆ ದೇಶದ ಭವಿಷ್ಯವೂ ಉತ್ತಮವಾಗಿರಲಿದೆ. ಕೃಷಿ ವಿಜ್ಞಾನಿಯಾಗುವ ಕನಸಿದೆ’ ಎಂದರು.
ಕೋಲಾರ ಜಿಲ್ಲೆ ವರದಾನಹಳ್ಳಿಯ ವಿ.ಎ.ಚೇತನ್ ಪೋಷಕರನ್ನು ಕಳೆದುಕೊಂಡ ನೋವಿನ ನಡುವೆ ಬೆಂಗಳೂರಿನ ಕೃಷಿ ಎಂಜಿನಿಯರಿಂಗ್ ಮಹಾವಿದ್ಯಾಲಯದಲ್ಲಿ ಬಿ.ಟೆಕ್ ಪದವಿ ಪೂರೈಸಿದ್ದು, 3 ಚಿನ್ನದ ಪದಕ ಗಳಿಸಿದರು.
ಈಗ ಡೆಹರಾಡೂನ್ ಇಸ್ರೊ ಸಂಶೋಧನಾ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಕಳೆತೆಗೆಯುವ ಯಂತ್ರವನ್ನು ಚೇತನ್ ಸಂಶೋಧಿಸಿದ್ದಾರೆ. ಇವು ರೈತರ ಗಮನ ಸೆಳೆದಿವೆ. ‘ಸಂಬಂಧಿಕರ ಮನೆಯಲ್ಲೇ ಉಳಿದು ಶಿಕ್ಷಣ ಪಡೆದೆ. ರಜೆ ಅವಧಿಯಲ್ಲಿ ಊರಿನಲ್ಲಿ ಕೃಷಿ ಮಾಡುತ್ತಿದ್ದೆ’ ಎಂದು ಹೇಳಿದರು.
ಘಟಿಕೋತ್ಸವದಲ್ಲಿ47 ವಿದ್ಯಾರ್ಥಿನಿಯರು, 18 ವಿದ್ಯಾರ್ಥಿಗಳಿಗೆ ಒಟ್ಟು 156 ಚಿನ್ನದ ಪದಕ ಪ್ರದಾನ ಮಾಡಲಾಯಿತು.
‘ಪಟೇಲ್ ಪಸಂದ್’ ತಳಿ ಅಭಿವೃದ್ಧಿಕಾರನಿಗೆ ಗೌರವ
ಇದೇ ಮೊದಲಿಗೆ ಪ್ರಗತಿಪರ ರೈತ, ಬೆಂಗಳೂರು ಉತ್ತರ ತಾಲ್ಲೂಕಿನ ನಾಗದಾಸನಹಳ್ಳಿ ಎನ್.ಸಿ.ಪಟೇಲ್ ಅವರಿಗೆ ಘಟಿಕೋತ್ಸವದಲ್ಲಿ ರಾಜ್ಯಪಾಲರು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.
ಆಧುನಿಕ ನೀರಾವರಿ ತಾಂತ್ರಿಕತೆ, ಸುಧಾರಿತ ಕೃಷಿ ಪದ್ಧತಿಯಲ್ಲಿ ದ್ವಿದಳಧಾನ್ಯ ಹಾಗೂ ತೋಟಗಾರಿಕೆ ಬೆಳೆಯನ್ನು ಪಾಟೀಲ್ ಬೆಳೆಯುತ್ತಿದ್ದಾರೆ. ‘ಪಟೇಲ್ ಪಸಂದ್’ ಹೆಸರಿನ ಮಾವಿನ ತಳಿ ಅಭಿವೃದ್ಧಿ ಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.