ADVERTISEMENT

ಕೃಷಿ ಮಾರಾಟ ಮಂಡಳಿಗೆ ₹ 48 ಕೋಟಿ ವಂಚನೆ ಪ್ರಕರಣ: ಆರೋಪ ಪಟ್ಟಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2020, 11:26 IST
Last Updated 30 ಏಪ್ರಿಲ್ 2020, 11:26 IST
   

ಬೆಂಗಳೂರು: ರಾಜ್ಯ ಕೃಷಿ ಮಾರಾಟ ಮಂಡಳಿಯ ₹ 48 ಕೋಟಿ ನಿಶ್ಚಿತ ಠೇವಣಿ (ಎಫ್‌ಡಿ) ಹಣವನ್ನು ಬೇರೆ ಖಾತೆಗಳಿಗೆ ವರ್ಗಾಯಿಸಿ ವಂಚಿಸಿದ ಪ್ರಕರಣದಲ್ಲಿ ಮಂಡಳಿಯ ಮಾರುಕಟ್ಟೆ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕ (ಡಿಜಿಎಂ) ಸಿದ್ದಗಂಗಯ್ಯ, ಸಿಂಡಿಕೇಟ್‌ ಬ್ಯಾಂಕಿನ ಉತ್ತರಹಳ್ಳಿ ಶಾಖೆಯ ವ್ಯವಸ್ಥಾಪಕ ಮಂಜುನಾಥ್ ಸೇರಿ 12 ಮಂದಿ ವಿರುದ್ಧ ಕೇಂದ್ರ ಅಪರಾಧ ಪತ್ತೆ ದಳ (ಸಿಸಿಬಿ) ಗುರುವಾರ ನ್ಯಾಯಾಲಯಕ್ಕೆ ಪ್ರಾಥಮಿಕ ದೋಷಾರೋಪಪಟ್ಟಿ ಸಲ್ಲಿಸಿದೆ.

‘ಪ್ರಕರಣದಲ್ಲಿ ಉತ್ತರಹಳ್ಳಿ ಶಾಖೆಯ ಸಹಾಯಕ ವ್ಯವಸ್ಥಾಪಕ, ನಿವೃತ್ತ ಖಜಾನೆ ಅಧಿಕಾರಿ ಲಕ್ಷ್ಮಯ್ಯ ಅವರನ್ನೂ ಆರೋಪಿಗಳನ್ನಾಗಿಹೆಸರಿಸಲಾಗಿದೆ. ಎಲ್ಲ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಆರೋಪಿಗಳತೀವ್ರ ವಿಚಾರಣೆ ನಡೆಸಲಾಗಿದ್ದು, 1400 ಪುಟಗಳ ದೋಷಾರೋಪ ಪಟ್ಟಿಯನ್ನು ತನಿಖಾಧಿಕಾರಿ ಪುನೀತ್‌ ಸಲ್ಲಿಸಿದ್ದಾರೆ’ ಎಂದು ಸಿಬಿಐ ಜಂಟಿ ಪೊಲೀಸ್‌ ಕಮಿನರ್‌ ಸಂದೀಪ ಪಾಟೀಲ ತಿಳಿಸಿದ್ದಾರೆ.

ರಾಜ್ಯ ಕೃಷಿ ಮಾರಾಟ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಕರಿಗೌಡ ಅವರು ನೀಡಿದ ದೂರಿನ ಆಧಾರದಲ್ಲಿ ಕಮರ್ಷಿಯಲ್‌ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ADVERTISEMENT

ಈ ಮಧ್ಯೆ ಬ್ಯಾಂಕ್‌ ರಾಜ್ಯ ಕೃಷಿ ಮಾರಾಟ ಮಂಡಳಿಗೆ ಹಣ ಹಿಂದಿರುಗಿಸಿದೆ.ಬ್ಯಾಂಕ್‌ ಏಪ್ರಿಲ್‌ 3ರಂದು ₹50.52 ಕೋಟಿ ಮತ್ತು ಏಪ್ರಿಲ್‌ 22ರಂದು ₹50.85 ಕೋಟಿ ಹಣವನ್ನು ಆವರ್ತನಿಧಿ ಖಾತೆಗೆ ಹಿಂತಿರುಗಿಸಿದೆ. ₹1.37 ಕೋಟಿ ಬಡ್ಡಿ ಇದರಲ್ಲಿ ಸೇರಿದೆ. ಬ್ಯಾಂಕ್‌ನಲ್ಲಿ ಆವರ್ತನಿಧಿ ಸುರಕ್ಷಿತವಾಗಿದೆ ಎಂದು ಕೃಷಿ ಮಾರಾಟ ಇಲಾಖೆ ನಿರ್ದೇಶಕ ಮತ್ತು ಕೃಷಿಮಾರಾಟ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಕರಿಗೌಡ ತಿಳಿಸಿದ್ದಾರೆ.

ಮಂಡಳಿಯ ಆವರ್ತನಿಧಿಯಿಂದ ನಿಶ್ಚಿತ ಠೇವಣಿ (ಎಫ್.ಡಿ) ಇಡುವ ಸಲುವಾಗಿ ಬ್ಯಾಂಕ್‌ಗಳಿಂದ ಕೊಟೇಷನ್ ಕೇಳಲಾಗಿತ್ತು. ಈ ವೇಳೆ ಸಿಂಡಿಕೇಟ್ ಬ್ಯಾಂಕ್ ಉತ್ತರಹಳ್ಳಿ ಶಾಖೆಯು ಎಫ್‌.ಡಿ ಹೂಡಿಕೆಗೆ ಹೆಚ್ಚು ಬಡ್ಡಿ ನೀಡುವುದಾಗಿ ತಿಳಿಸಿತ್ತು. ರಾಜ್ಯ ಕೃಷಿ ಮಾರಾಟ ಮಂಡಳಿ ಆವರ್ತನಿಧಿ ಇರುವ ರಾಜಾಜಿನಗರ ಶಾಖೆಯ ಆಂಧ್ರ ಬ್ಯಾಂಕಿನಿಂದ ಆರ್‌ಟಿಜಿಎಸ್ ಮೂಲಕ ₹ 100 ಕೋಟಿ ಹಣವನ್ನು ಸಿಂಡಿಕೇಟ್ ಬ್ಯಾಂಕಿನ ಉತ್ತರಹಳ್ಳಿ ಶಾಖೆಗೆ ವರ್ಗಾವಣೆ ಮಾಡಿ ತಲಾ ₹ 50 ಕೋಟಿಯಂತೆ ಎರಡು ನಿಶ್ಚಿತ ಠೇವಣಿ ಇಡಲಾಗಿತ್ತು.

‘ಜ. 20ರಂದು ಬ್ಯಾಂಕಿಗೆ ಭೇಟಿ ನೀಡಿ ವಿಚಾರಿಸಿದಾಗ ₹ 52 ಕೋಟಿ ಎಫ್‌ಡಿ ಹೂಡಿಕೆಗೆ ದಾಖಲಾತಿ ಕೊಟ್ಟಿದ್ದಾರೆ. ಆದರೆ, ಬ್ಯಾಂಕ್ ಸಿಬ್ಬಂದಿ ಈ ಹಿಂದೆ ನೀಡಿದ್ದ ಎಫ್‌ಡಿ ಹೂಡಿಕೆಗಳ ಎರಡು ಪ್ರತ್ಯೇಕ ಸಂಖ್ಯೆಗಳನ್ನು ಪರಿಶೀಲಿಸಿದಾಗ ಅವು ನಕಲಿ ಎಂಬುದು ಗೊತ್ತಾಗಿದೆ. ಅಲ್ಲದೆ, ₹ 48 ಕೋಟಿ ಹಣಕ್ಕೆ ಲೆಕ್ಕ ಕೊಡುತ್ತಿಲ್ಲ. ಬೇರೆ ಖಾತೆಗಳಿಗೆ ಹಣ ವರ್ಗಾಯಿಸಿ ವಂಚಿಸಿದ್ದಾರೆ’ ಎಂದು ಆರೋಪಿಸಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶ ಕರಿಗೌಡ ದೂರು ನೀಡಿದ್ದರು. ಬಳಿಕ ಗೃಹ ಸಚಿವರ ಸೂಚನೆಯಂತೆ ಈ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಲಾಗಿತ್ತು.

ಮಂಡಳಿಗೆ ಸಂಬಂಧಿಸಿ ₹ 100 ಕೋಟಿಯನ್ನು ಸಿಂಡಿಕೇಟ್‌ ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿ ಇರಿಸುವ ಬದಲು ವ್ಯವಸ್ಥಾಪಕ ಮಂಜುನಾಥ್ ಮತ್ತು ಅದೇ ಬ್ಯಾಂಕಿನ ಉಪ ವ್ಯವಸ್ಥಾಪಕ ಜಯರಾಮ್‌ ಅವರು ಮಂಡಳಿಯ ಫೈನಾನ್ಸ್‌ ಅಧಿಕಾರಿ ಹುದ್ದೆಯನ್ನು ಮಹಮ್ಮದ್‌ ಮುಸ್ತಫಾ ಎಂಬ ವ್ಯಕ್ತಿಯ ಹೆಸರಿನಲ್ಲಿ ನಕಲಿಯಾಗಿ ಸೃಷ್ಟಿಸಿ, ಆ ಹೆಸರಿನಲ್ಲಿ ಚಾಲ್ತಿ ಖಾತೆ ತೆರೆದು ಅನಧಿಕೃತವಾಗಿ ಹಣ ವರ್ಗಾವಣೆ ಮಾಡಿದ್ದರು. ಬಳಿಕ, ಈ ₹ 100 ಕೋಟಿಯಲ್ಲಿ ₹ 48 ಕೋಟಿಯನ್ನು ಚೆನ್ನೈ ನಗರದ 106 ಇತರ ಚಾಲ್ತಿ ಖಾತೆಗಳಿಗೆ ವಿವಿಧ ಹಂತಗಳಲ್ಲಿ ವರ್ಗಾವಣೆ ಮಾಡಿರುವುದು ಸಿಸಿಬಿ ನಡೆಸಿದ ತನಿಖೆಯಲ್ಲಿ ಗೊತ್ತಾಗಿದೆ.

ವಂಚನೆ ದೂರು ದಾಖಲಾಗುತ್ತಿದ್ದಂತೆ ಆರೋಪಿಗಳು ತಲೆಮರೆಸಿಕೊಂಡಿದ್ದರು. ಬಳಿಕ, ಜಯರಾಮ್, ಮಂಡಳಿಯ ಭರತ್, ಮುಸ್ತಫಾ, ಮಹಮ್ಮದ್ ಅಸ್ಲಾಂ, ರೇವಣ್ಣ, ಮಂಡಳಿಯ ನಿವೃತ್ತ ಉಪ ನಿಯಂತ್ರಕ ಲಕ್ಷ್ಮಣ ಹಾಗೂ ಆಂಧ್ರ ಬ್ಯಾಂಕಿನ ವ್ಯವಸ್ಥಾಪಕ ಸಿರಿಲ್ ಲಕ್ಷ್ಮಣ, ಸಿರಿಲ್‌ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.