ಬೆಂಗಳೂರು: ರೈತರ ಹಿತ ಕಾಯಲು ಸರ್ಕಾರ ರೂಪಿಸಿರುವ ಬೆಳೆ ವಿಮೆ ಯೋಜನೆಯ ಸಂಪೂರ್ಣ ಫಲ ಕೃಷಿಕರಿಗೆ ತಲುಪುತ್ತಿದೆ. ಇದನ್ನು ಇನ್ನಷ್ಟು ಪಾರದರ್ಶಕಗೊಳಿಸಿ, ರೈತರ ಅನುಮಾನಗಳನ್ನು ಬಗೆಹರಿಸಬೇಕು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ ನೀಡಿದರು.
ಕರ್ನಾಟಕ ರಾಜ್ಯ ಬೀಜ ನಿಗಮದ 313 ನೇ ನಿರ್ದೇಶಕ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಇಲಾಖೆಯ ಯಾವುದೇ ಅಧಿಕಾರಿಗಳು ಏಜೆನ್ಸಿಗಳ ಪರ ಇಲ್ಲವೇ ಇಲ್ಲ. ನಾವೆಲ್ಲರೂ ರೈತರಿಗಾಗಿ ಕೆಲಸ ಮಾಡುತ್ತಿದ್ದೇವೆ. ಆದರೂ ಕೆಲವು ರೈತರು, ಜನಪ್ರತಿನಿಧಿಗಳಲ್ಲಿ ಇರುವ ಅನುಮಾನಗಳನ್ನು ಬಗೆಹರಿಸಬೇಕು. ಇದಕ್ಕಾಗಿ ಒಂದು ಸಭೆ ಆಯೋಜಿಸಬೇಕು’ ಎಂದು ಅವರು ಸೂಚಿಸಿದರು.
ಕೆಳ ಹಂತದಿಂದ ಮೇಲಿನ ಹಂತದವರೆಗೆ ಯಾವುದೇ ಅಧಿಕಾರಿ, ಸಿಬ್ಬಂದಿ ಬೆಳೆ ವಿಮೆ ಕಂಪನಿಗಳಿಂದ ಒಂದು ಸಣ್ಣ ಅನುಕೂಲವನ್ನೂ ಪಡೆಯುತ್ತಿಲ್ಲ. ಮುಂದೆಯೂ ಪಡೆಯಬಾರದು ಎಂದು ಅವರು ಸೂಚನೆ ನೀಡಿದರು.
ಬೀಜ ನಿಗಮ ಇನ್ನಷ್ಟು ಕೃಷಿಗೆ ಪೂರಕ ಯೋಜನೆಗಳೊಂದಿಗೆ ಕೆಲಸ ಮಾಡಬೇಕು. ಮಧ್ಯವರ್ತಿಗಳಿಗೆ ಅವಕಾಶ ನೀಡದೆ ಲಾಭದ ರೈತರು ಪಾಲು ಸಂಪೂರ್ಣ ನೇರ ವರ್ಗಾವಣೆಯಾಗಬೇಕು ಎಂದು ಚಲುವರಾಯಸ್ವಾಮಿ ಹೇಳಿದರು.
ಸಭೆಯಲ್ಲಿ ಇಲಾಖೆ ಕಾರ್ಯದರ್ಶಿ ಅನ್ಬುಕುಮಾರ್, ಆಯುಕ್ತ ವೈ.ಎಸ್.ಪಾಟೀಲ ಮತ್ತು ಇತರ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.