ADVERTISEMENT

ತೆರಿಗೆ ಪಾಲು ಹಂಚಿಕೆಯಲ್ಲಿ ಅನ್ಯಾಯ: ಕೇಂದ್ರದ ವಿರುದ್ಧ ‘ಅಹಿಂದ’ ಕಹಳೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2024, 14:19 IST
Last Updated 7 ನವೆಂಬರ್ 2024, 14:19 IST
ಸಭೆಯಲ್ಲಿ ಕಾಳೇಗೌಡ ನಾಗವಾರ ಮಾತನಾಡಿದರು. ಬಂಜಗೆರೆ ಜಯಪ್ರಕಾಶ್‌, ಕೆ.ಎಸ್‌.ಶಿವರಾಮು, ಡಿ. ತಿಮ್ಮಯ್ಯ, ಎಲ್‌. ಹನುಮಂತಯ್ಯ, ಲೀಲಾ ಸಂಪಿಗೆ ಇದ್ದರು
ಸಭೆಯಲ್ಲಿ ಕಾಳೇಗೌಡ ನಾಗವಾರ ಮಾತನಾಡಿದರು. ಬಂಜಗೆರೆ ಜಯಪ್ರಕಾಶ್‌, ಕೆ.ಎಸ್‌.ಶಿವರಾಮು, ಡಿ. ತಿಮ್ಮಯ್ಯ, ಎಲ್‌. ಹನುಮಂತಯ್ಯ, ಲೀಲಾ ಸಂಪಿಗೆ ಇದ್ದರು   

ನವದೆಹಲಿ: ‘ರಾಜಕೀಯ ವಿರೋಧಿಗಳನ್ನು ವಿನಾಕಾರಣ ಹಣಿದು ಸರ್ಕಾರಗಳನ್ನು ಅಸ್ಥಿರಗೊಳಿಸುವ ಮೂಲಕ ಬಿಜೆಪಿ ದಗಲ್‌ಬಾಜಿ ರಾಜಕಾರಣ ನಡೆಸುತ್ತಿದೆ’ ಎಂದು ರಾಜ್ಯಸಭೆಯ ಮಾಜಿ ಸದಸ್ಯ ಎಲ್‌. ಹನುಮಂತಯ್ಯ ಟೀಕಿಸಿದರು. 

ಜಿಎಸ್‌ಟಿ ಪಾಲು ನೀಡದೆ ಕೇಂದ್ರ ಸರ್ಕಾರ ವಂಚಿಸುತ್ತಿದೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೇಂದ್ರ ತನಿಖಾ ಸಂಸ್ಥೆಗಳನ್ನು ಬಿಜೆಪಿ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ವೇದಿಕೆ ಹಾಗೂ ಅಹಿಂದ ಸಂಘಟನೆಗಳ ಆಶ್ರಯದಲ್ಲಿ ಗುರುವಾರ ಇಲ್ಲಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದರು. 

‘ನಮ್ಮ ದೇಶದ ಜಿಎಸ್‌ಟಿ ವ್ಯವಸ್ಥೆ ಅವೈಜ್ಞಾನಿಕ. ಯಾವ ದೇಶದಲ್ಲೂ ಜನರು ಶೇ 30ರಷ್ಟು ತೆರಿಗೆ ಪಾವತಿಸುತ್ತಿಲ್ಲ. ನಮ್ಮಲ್ಲಿ ತೆರಿಗೆ ಹೆಸರಿನಲ್ಲಿ ಜನರ ಲೂಟಿ ಮಾಡಲಾಗುತ್ತಿದೆ’ ಎಂದರು. ‘ರಾಜ್ಯಗಳಿಗೆ ಆಗುತ್ತಿರುವ ಆರ್ಥಿಕ ಅನ್ಯಾಯವನ್ನು ಕೇಂದ್ರ ಸರ್ಕಾರ ಸರಿಪಡಿಸಬೇಕು. ಏಕಮುಖ ಆಳ್ವಿಕೆ ನಿಲ್ಲಿಸಬೇಕು’ ಎಂದು ಆಗ್ರಹಿಸಿದರು. 

ADVERTISEMENT

ಸಿದ್ದರಾಮಯ್ಯ ವಿರುದ್ಧ ಕೇಂದ್ರ ನಡೆಸುತ್ತಿರುವ ಷಡ್ಯಂತ್ರವನ್ನು ಕೂಡಲೇ ನಿಲ್ಲಿಸಬೇಕು ಎಂದು ಸಾಹಿತಿಗಳಾದ ಎಸ್‌.ಜಿ.ಸಿದ್ದರಾಮಯ್ಯ, ಕಾಳೇಗೌಡ ನಾಗವಾರ, ವಿಧಾನ ಪರಿಷತ್‌ ಸದಸ್ಯ ಡಿ.ತಿಮ್ಮಯ್ಯ, ಮಹಿಳಾಪರ ಹೋರಾಟಗಾರ್ತಿ ಲೀಲಾ ಸಂಪಿಗೆ ಮತ್ತಿತರರು ಆಗ್ರಹಿಸಿದರು. ‌

ಬಳಿಕ, ರಾಜ್ಯ ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಕೆ.ಎಸ್‌.ಶಿವರಾಮು ನೇತೃತ್ವದಲ್ಲಿ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಲಾಯಿತು. 

ಅರವಿಂದ ಕೇಜ್ರಿವಾಲ್‌ ನೇತೃತ್ವದ ಎಎಪಿ ಸರ್ಕಾರ ಹೇಮಂತ್ ಸೊರೇನ್‌ ನೇತೃತ್ವದ ಜೆಎಂಎಂ ಮೈತ್ರಿ ಸರ್ಕಾರದ ವಿರುದ್ಧ ಕೇಂದ್ರ ಸರ್ಕಾರ ಷಡ್ಯಂತ್ರ ನಡೆಸಿದಾಗ ನಾವೆಲ್ಲ ಧ್ವನಿ ಎತ್ತಬೇಕಿತ್ತು. ನಾವೆಲ್ಲ ದೊಡ್ಡ ಮಟ್ಟದಲ್ಲಿ ಹೋರಾಟಕ್ಕೆ ಅಣಿಯಾಗಬೇಕು. ಕೇಂದ್ರ ಸರ್ಕಾರ ಕುತಂತ್ರದ ರಾಜಕಾರಣ ನಿಲ್ಲಿಸಬೇಕು. ತೆರಿಗೆ ಹಂಚಿಕೆ ಕೇಂದ್ರದ ವಿವೇಚನೆಗೆ ಬಿಟ್ಟ ದಾನ ಅಲ್ಲ. ಅದು ಎಲ್ಲ ರಾಜ್ಯಗಳ ಹಕ್ಕು. 
ಬಂಜಗೆರೆ ಜಯಪ್ರಕಾಶ್‌ ಚಿಂತಕ 
ತೆರಿಗೆ ಪಾಲು ಹಂಚಿಕೆಯಲ್ಲಿ ದಕ್ಷಿಣದ ರಾಜ್ಯಗಳಿಗೆ ಕೇಂದ್ರ ಸರ್ಕಾರ ನಿರಂತರ ಅನ್ಯಾಯ ಮಾಡುತ್ತಿದೆ. ಈ ಅನ್ಯಾಯ ಸರಿಪಡಿಸದಿದ್ದರೆ ದಕ್ಷಿಣದ ರಾಜ್ಯಗಳ ಜನರು ಒಟ್ಟಾಗಿ ಹೋರಾಟ ಮಾಡುತ್ತೇವೆ. 
ಜಾಣಗೆರೆ ವೆಂಕಟರಾಮಯ್ಯ ಕನ್ನಡಪರ ಹೋರಾಟಗಾರ 
ಅಪಪ್ರಚಾರದ ಮೂಲಕ ಸಿದ್ದರಾಮಯ್ಯ ಅವರ ತೇಜೋವಧೆ ಮಾಡಲಾಗುತ್ತಿದೆ. ಈ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಲಾಗುತ್ತಿದೆ. 
ಬಿ.ಎಸ್‌.ಶಿವಣ್ಣ ಲೋಹಿಯಾ ವಿಚಾರ ವೇದಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.