ADVERTISEMENT

‘ಶಕ್ತಿ’ ಪರಿಷ್ಕರಣೆ: ಖರ್ಗೆ ಅಸಹನೆ

ಗ್ಯಾರಂಟಿ ವಿಫಲವಾದರೆ 10 ವ‌ರ್ಷ ವನವಾಸ– ಎಚ್ಚರಿಕೆ ಕೊಟ್ಟ ಎಐಸಿಸಿ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2024, 0:10 IST
Last Updated 1 ನವೆಂಬರ್ 2024, 0:10 IST
ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಉಪಸ್ಥಿತರಿದ್ದರು.
ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಉಪಸ್ಥಿತರಿದ್ದರು.   

ಬೆಂಗಳೂರು: ‘ಶಕ್ತಿ’ ಯೋಜನೆ ಪರಿಷ್ಕರಣೆ ಕುರಿತ ಡಿ.ಕೆ. ಶಿವಕುಮಾರ್ ಮಾತಿಗೆ ಅಸಹನೆ ವ್ಯಕ್ತಪಡಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗೆ ಎಚ್ಚರಿಕೆ ನೀಡಿದರು.

ಈ ಬೆನ್ನಲ್ಲೇ, ವಿರೋಧ ಪಕ್ಷಗಳಾದ ಬಿಜೆಪಿ, ಜೆಡಿಎಸ್ ನಾಯಕರು ಸರ್ಕಾರದ ನಡೆಯ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಇಂದಿರಾ ಗಾಂಧಿ ಪುಣ್ಯ ಸ್ಮರಣೆ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನದ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ವೇದಿಕೆಯಲ್ಲಿ ಅಕ್ಕಪಕ್ಕದಲ್ಲಿ ಕುಳಿತಿದ್ದರು. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ನೀಡಿರುವ ‘ಶಕ್ತಿ ಯೋಜನೆ’ ಮರುಪರಿಶೀಲನೆ ಕುರಿತು ನೀಡಿದ್ದ ಹೇಳಿಕೆ ಪ್ರಸ್ತಾಪಿಸಿದ ಖರ್ಗೆಯವರು, ‌‘ಐದು ಗ್ಯಾರಂಟಿಗಳಲ್ಲಿ ಒಂದು ಗ್ಯಾರಂಟಿ ಕೈಬಿಡುತ್ತೇವೆ ಎಂದು ನೀನೇನೋ‌ ಹೇಳಿರುವೆ’ ಎಂದು ಶಿವಕುಮಾರ್ ಅವರನ್ನು ಪ್ರಶ್ನಿಸಿದರು. ಆಗ, ಶಿವಕುಮಾರ್, ‘ನಾನು ಆ ರೀತಿ ಹೇಳಿಲ್ಲ’ ಎಂದು ಸಮಜಾಯಿಷಿ ನೀಡಿದರು. ಅದಕ್ಕೆ ಖರ್ಗೆ, ‘ನೀನು ಪತ್ರಿಕೆ ನೋಡಿಲ್ಲ. ನಾನು ನೋಡುತ್ತೇನೆ. ಪತ್ರಿಕೆಯಲ್ಲಿ ನೀನು ಹೇಳಿದೆ ಎಂದು ಬಂದಿದೆ’ ಎಂದರು.

ADVERTISEMENT

ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ, ‘ಇಲ್ಲ... ಪರಿಷ್ಕರಣೆ ಎಂದು ಹೇಳಿದ್ದಾರೆ’ ಎಂದರು. ‘ಪರಿಷ್ಕರಣೆ ಮಾಡುತ್ತೇವೆ ಅಂದಿದ್ದಕ್ಕೆ ಈಗ ಎಲ್ಲರೂ ಅನುಮಾನ ಪಡುತ್ತಾರಲ್ಲ. ಬೇರೆಯವರಿಗೆ, ಹೇಳುವವರಿಗೆ ಒಳ್ಳೆಯದಾಯಿತಲ್ಲ’ ಎಂದು ಖರ್ಗೆ ಪ್ರತಿಕ್ರಿಯಿಸಿದರು.

‘ನಿಮ್ಮ (ರಾಜ್ಯ ಸರ್ಕಾರ) ಗ್ಯಾರಂಟಿಯನ್ನು ನಾವು ಮಹಾರಾಷ್ಟ್ರದಲ್ಲಿ ಅನುಕರಿಸುತ್ತಿದ್ದೇವೆ. ಆದರೆ, ಐದು, ಆರು, 10, 20 ಗ್ಯಾರಂಟಿ ಎಂದು ಘೋಷಿಸದಂತೆ ಅಲ್ಲಿನ ನಾಯಕರಿಗೆ ಹೇಳಿದ್ದೇವೆ. ನಿಮ್ಮಲ್ಲಿ ಏನು ಬಜೆಟ್ ಇದೆ. ಅದಕ್ಕೆ ತಕ್ಕಂತೆ ಗ್ಯಾರಂಟಿ ಕೊಡಿ ಎಂದು ಹೇಳಿದ್ದೇವೆ’ ಎಂದೂ ಖರ್ಗೆ ಹೇಳಿದರು.

‘ಐದು ಗ್ಯಾರಂಟಿಗಳಲ್ಲಿ ಒಂದು ಗ್ಯಾರಂಟಿ ಪರಿಷ್ಕರಣೆ ಮಾಡುತ್ತೇವೆ ಅಂದಿದ್ದಕ್ಕೆ ಈಗ ಎಲ್ಲರೂ ಅನುಮಾನ ಪಡುತ್ತಾರಲ್ಲವೇ. ಬೇರೆಯವರಿಗೆ ಮಾತನಾಡಲು, ಗೊಂದಲ ಸೃಷ್ಟಿಯಾಗಲು ನೀವೇ ಅವಕಾಶ ಮಾಡಿಕೊಟ್ಟಿದ್ದೀರಲ್ಲವೇ’ ಎಂದು ತುಸು ಏರಿದ ಧ್ವನಿಯಲ್ಲಿಯೇ ಪ್ರಶ್ನಿಸಿದರು.

‘ಬಜೆಟ್ ಬಿಟ್ಟು ಗ್ಯಾರಂಟಿ ಕೊಟ್ಟರೆ ಇಲ್ಲಿ (ರಾಜ್ಯ) ದಿವಾಳಿ ಆಗಿ ಹೋಗುತ್ತದೆ. ರಸ್ತೆ ಗುಂಡಿಗೆ ಒಂದು ಬುಟ್ಟಿ ಮಣ್ಣು ಹಾಕಲು ಕೂಡಾ ಹಣ ಇರುವುದಿಲ್ಲ. ಆಗ ಎಲ್ಲರೂ ನಿಮ್ಮ ಮೇಲೆ ಮುಗಿಬೀಳುತ್ತಾರೆ’ ಎಂದು ಖರ್ಗೆ ಹೇಳಿದರು.

‘ಗ್ಯಾರಂಟಿ ನೀಡಲು ಸರ್ಕಾರ ವಿಫಲವಾದರೆ, ಕೆಟ್ಟ ಹೆಸರು ಇಟ್ಟು ಹೋಗ್ತೀರಾ, ಹೊರತು ಒಳ್ಳೆಯ ಹೆಸರು ಇಟ್ಟು ಹೋಗಲ್ಲ. ಮತ್ತೆ 10 ವರ್ಷ ವನವಾಸದಲ್ಲಿ ಇರಬೇಕಾಗುತ್ತದೆ’ ಎಂದೂ ಎಚ್ಚರಿಕೆ ನೀಡಿದರು.

ಆರ್. ಅಶೋಕ

ಗ್ಯಾರಂಟಿ ಸ್ಥಗಿತಕ್ಕೆ ‘ಕಳ್ಳನಿಗೆ ಪಿಳ್ಳೆನೆವ’: ಅಶೋಕ

‘ಲೋಕಸಭಾ ಚುನಾವಣೆ ಬಳಿಕ ‘ಗ್ಯಾರಂಟಿ’ ಇರಲ್ಲ ಎಂದು ನಾವು ಹೇಳಿದ್ದೆವು. ಈಗ ಅದರ ಮೊದಲ ಹೆಜ್ಜೆಯನ್ನು ಸರ್ಕಾರ ಇರಿಸಿದೆ’ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಟೀಕಿಸಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಗ್ಯಾರಂಟಿ’ ಯೋಜನೆಗಳ ಪೈಕಿ ‘ಶಕ್ತಿ’ ಮತ್ತು ಪಡಿತರ ಯೋಜನೆಗಳು ಟುಸ್ ಪಟಾಕಿಯಾಗಲಿವೆ. ಡಿ.ಕೆ.ಶಿವಕುಮಾರ್‌ ಅವರಿಗೆ ಮಹಿಳೆಯರು ಫೋನ್‌ ಕರೆ ಮಾಡಿ ಯೋಜನೆ ಬೇಡವೆಂದು ತಿಳಿಸಿದ್ದಾರಂತೆ. ಕಳ್ಳನಿಗೆ ಪಿಳ್ಳೆ ನೆವ ಎಂಬಂತೆ ಶಕ್ತಿ ಯೋಜನೆ ರದ್ದುಪಡಿಸಲು ಈ ರೀತಿ ಕಾರಣ ಹೇಳುತ್ತಿದ್ದಾರೆ’ ಎಂದರು. ‘ಸಾರಿಗೆ ಇಲಾಖೆ ನಷ್ಟದಲ್ಲಿದೆ. ಸರ್ಕಾರವೇ ಸಾರಿಗೆ ಇಲಾಖೆಗೆ ಕೋಟ್ಯಂತರ ರೂಪಾಯಿ ಹಣ ನೀಡಬೇಕಿದೆ. ಸರ್ಕಾರದ ಖಜಾನೆ ಸಂಪೂರ್ಣ ಖಾಲಿಯಾಗಿದೆ. ಇಷ್ಟಾದರೂ ಯಾವ ಮುಖ ಇಟ್ಟುಕೊಂಡು ಉಪಚುನಾವಣೆ ಎದುರಿಸಲು ಮುಂದಾಗಿದ್ದಾರೆಂದು ಗೊತ್ತಿಲ್ಲ’ ಎಂದರು. ‘ಪಡಿತರ ಚೀಟಿ ರದ್ದು ಮಾಡಲು ಎಲ್ಲ ಬಗೆಯ ಷರತ್ತುಗಳನ್ನು ವಿಧಿಸುತ್ತಿದ್ದಾರೆ. ಅಧಿಕಾರಕ್ಕೆ ಬಂದ ನಂತರ ಏನು ಬೇಕಾದರೂ ಮಾಡಬಹುದು ಎಂಬಂತೆ ವರ್ತಿಸುತ್ತಿದ್ದಾರೆ. ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು ನಾವು ಹಿಟ್‌ ಮಾಡಿದ ಕೂಡಲೇ ಕಾಂಗ್ರೆಸ್‌ ಓಡಿ ಹೋಗುತ್ತದೆ. ಈ ಸರ್ಕಾರ ತುಘಲಕ್ ಆಡಳಿತ ನೀಡಿ ನಗೆಪಾಟಲಿಗೀಡಾಗಿದೆ’ ಎಂದು ಹೇಳಿದರು.

ಎಚ್.ಡಿ. ಕುಮಾರಸ್ವಾಮಿ

ಗ್ಯಾರಂಟಿ ನಿಲ್ಲಿಸಲು ಮೊದಲ ಹೆಜ್ಜೆ :ಎಚ್‌ಡಿಕೆ

ಚನ್ನಪಟ್ಟಣ (ರಾಮನಗರ):  ‘ಶಕ್ತಿ ಯೋಜನೆಯನ್ನು ನಿಲ್ಲಿಸಿ ಎಂದು ಮಹಿಳೆಯರು ಡಿ.ಕೆ.ಶಿವಕುಮಾರ್ ಅವರ ಕನಸಿನಲ್ಲಿ ಬಂದು ಕೇಳಿದ್ದರೇ? ಅಥವಾ ದೇವರು ಬಂದು ಹೇಳಿದ್ದರೆ’ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು. ಇಲ್ಲಿನ ತಿಟ್ಟಮಾರನಹಳ್ಳಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು ‘ಐದು ಗ್ಯಾರಂಟಿ ಯೋಜನೆಗಳನ್ನು ಒಂದೊಂದಾಗಿ ನಿಲ್ಲಿಸಲು ಇದು ಮೊದಲ ಹೆಜ್ಜೆ ಅಷ್ಟೇ. ಇನ್ನು ಕೆಲವೇ ದಿನಗಳಲ್ಲಿ ಅನ್ನಭಾಗ್ಯ ಗೃಹಜ್ಯೋತಿ ಗೃಹಲಕ್ಷ್ಮಿ ಯುವ ನಿಧಿ ಕಾರ್ಯಕ್ರಮಗಳನ್ನು ನಿಲ್ಲಿಸಲಿದ್ದಾರೆ. ಅದಕ್ಕೆ ಮರು ಪರಿಶೀಲನೆ ಎಂಬ ಪೀಠಿಕೆ ಹಾಕಿದ್ದಾರೆ’ ಎಂದರು. ‘ಯೋಜನೆಯನ್ನು ನಿಲ್ಲಿಸಿ ಎಂದು ಮಹಿಳೆಯರು ಟ್ವೀಟ್‌ ಮೂಲಕ ಒತ್ತಾಯ ಮಾಡುತ್ತಿದ್ದಾರೆ ಎಂದಿದ್ದಾರೆ. ಟ್ವೀಟ್‌ ಮಾಡಿದವರು ಯಾರು’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.